ಉಪ್ಪಿನಂಗಡಿ: ತನ್ನ ಸುತ್ತಮುತ್ತಲಿನ ಬದುಕನ್ನು ಅರ್ಥೈಸದವ. ಇನ್ನೊಬ್ಬರ ಕಷ್ಟ- ಸುಖಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರದವ ನಿಜವಾದ ಬರಹಗಾರನಾಗಲು ಸಾಧ್ಯವಿಲ್ಲ. ಬರಹಗಾರ ಹಚ್ಚಿಟ್ಟ ಹಣತೆಯಂತೆ ಸಮಾಜವನ್ನು ಬೆಳಗಿಸುವ ಕೆಲಸ ಮಾಡಬೇಕೇ ಹೊರತು, ಸಿಡಿ ಮದ್ದಿನಂತೆ ಒಮ್ಮೆಲೆ ಸಿಡಿದು ಪರಿಸರದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡಬಾರದು ಎಂದು ವಾರ್ತಾಭಾರತಿಯ ಪ್ರಧಾನ ಸಂಪಾದಕ ಬಿ.ಎಂ. ಬಶೀರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮಿತ್ರಂಪಾಡಿ ಜಯರಾಮ್ ರೈ ಅವರ ಮಹಾಪೋಷಕತ್ವದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯುತ್ತಿರುವ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ಎರಡನೇ ದಿನವಾದ ಸೆ.3೦ರಂದು ಗ್ರಾಮ ಸಾಹಿತ್ಯ ಸಂಭ್ರಮದ ಸರಣಿ ಕಾರ್ಯಕ್ರಮ 9ರಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ದ್ವೇಷದ ಮಾತಿಗೆ ಚಪ್ಪಾಳೆಗಳು ಜಾಸ್ತಿ, ಒಳ್ಳೆಯ ಮಾತಿಗೆ ಚಪ್ಪಾಳೆಗಳು ಕಮ್ಮಿಯಾಗಿರುವಂತಹ ಸಮಾಜದಲ್ಲಿ ನಾವಿದ್ದೇವೆ. ಆದರೆ ಚಪ್ಪಾಳೆಗಳು ಶಾಶ್ವತವಲ್ಲ. ಮನಸ್ಸು ಮನಸ್ಸುಗಳನ್ನು, ಎಲ್ಲಾ ಜಾತಿ- ಧರ್ಮಗಳನ್ನು ಪರಸ್ಪರ ಬೆಸೆಯುವ ಬರಹಗಳು ನಮ್ಮದಾಗಬೇಕೇ ಹೊರತು, ಸಮಾಜವನ್ನು ಒಡೆಯುವ, ಸೌಹಾರ್ದತೆ ಅಳಿಸುವ ಬರಹಗಳು ನಮ್ಮದಾಗಬಾರದು. ಓದು ಎಂಬುದು ಬರಹಗಾರನ ಅಡಿಗಲ್ಲು. ಆದ್ದರಿಂದ ಇತರರ ಬರಹಗಳನ್ನು ಓದುವ ಹವ್ಯಾಸ ಬರಹಗಾರರು ರೂಢಿಸಿಕೊಳ್ಳಬೇಕು. ನಮ್ಮ ಸುತ್ತಲಿನ ಪ್ರಪಂಚವನ್ನು ಕಣ್ಣಿನಿಂದ ಅಲ್ಲ. ಒಳಗಣ್ಣಿನಿಂದ ನೋಡಿ ಅರ್ಥೈಸಿಕೊಳ್ಳಬೇಕು ಆಗ ಮಾತ್ರ ಒಬ್ಬ ಉತ್ತಮ ಬರಹಗಾರ ರೂಪುಗೊಳ್ಳಲು ಸಾಧ್ಯ ಎಂದು ಯುವ ಬರಹಗಾರರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ನಿವೃತ್ತ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ, ಆಂಗ್ಲ ಮಾಧ್ಯಮದ ವ್ಯಾಮೋಹ ಇಂದು ಹೆಚ್ಚಾಗುತ್ತಿದ್ದು, ಕನ್ನಡಕ್ಕೆ ಹೊಡೆತ ಬೀಳುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಹಲವು ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ. ಕನ್ನಡದ ಸಾಹಿತ್ಯ ಕ್ಷೇತ್ರವು ಶ್ರೀಮಂತವಾಗಿದ್ದು, ಕಾವ್ಯ, ಗದ್ಯ ಸಾಹಿತ್ಯಗಳೇ ಇದಕ್ಕೆ ಸಾಕ್ಷಿ. ಓದುವ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಮಾತ್ರ ಬರವಣಿಗೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಯುವ ಉದ್ಯಮಿ, ಸಾಮಾಜಿಕ ಹೋರಾಟಗಾರ ಇರ್ಷಾದ್ ಯು.ಟಿ. ಮಾತನಾಡಿ, ಸಾಹಿತ್ಯಕ್ಕೆ ಅಬ್ಬರ ಬೇಕಿಲ್ಲ. ಅದಕ್ಕೆ ಬೇಕಿರೋದು ಸತ್ವ. ಅದನ್ನು ಸಮಾಜದ ಭಾವೈಕ್ಯತೆಯಲ್ಲಿ ಬಳಸಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರಲ್ಲದೆ, ದಿನಕ್ಕೆರಡು ಪತ್ರಿಕೆ, ತಿಂಗಳಿಗೊಂದು ಪುಸ್ತಕವನ್ನು ಕೊಂಡು ಓದುವ ಹವ್ಯಾಸ ಬೆಳೆಸಿದಾಗ ಮಾತ್ರ ಕನ್ನಡ ಸಾಹಿತ್ಯ ಲೋಕವೂ ಬೆಳೆಯುವುದಲ್ಲದೆ, ಜ್ಞಾನಾಭಿವೃದ್ಧಿಯೂ ಸಾಧ್ಯ ಎಂದರು.
ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕ ಚಂದ್ರಮೌಳಿ ಮಾತನಾಡಿ, ತಾನು ಯುವ ಬರಹಗಾರನಾಗಿ ಬೆಳೆದ ರೀತಿಯನ್ನು ತಿಳಿಸಿದರು. ಕಸಾಪದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಉದಯಕುಮಾರ್ ಯು.ಎಲ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್, ಶ್ರೀ ರಾಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಮಲಾ, ಮಹಾಲಿಂಗೇಶ್ವರ ಭಟ್, ವಿಜಯಕುಮಾರ್ ಕಲ್ಲಳಿಕೆ ಮತ್ತಿತರರು ಉಪಸ್ಥಿತರಿದ್ದರು.
ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ ಸ್ವಾಗತಿಸಿದರು. ಕಸಾಪದ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ನವ್ಯಶ್ರೀ ಸ್ವರ್ಗ ವಂದಿಸಿದರು. ಕು. ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕವಿಗೋಷ್ಟಿ, ಕಥಾಗೋಷ್ಠಿಗಳು ನಡೆದವು.