ಕಬಡ್ಡಿ ಕ್ರೀಡೆಯಿಂದ ಮನಸ್ಸಿಗೆ, ದೇಹಕ್ಕೆ ಆರೋಗ್ಯ-ಕೇಶವಪ್ರಸಾದ್ ಮುಳಿಯ
ಪುತ್ತೂರು: ನಮ್ಮ ದೇಹ ಆಗಿರುವಂತಹುದು ಪಂಚಭೂತಗಳಿಂದ. ನೆಲ, ನೀರು, ಜಲ, ವಾಯು ಮತ್ತು ಆಕಾಶದಿಂದ ಆಗಿರುವಂತಹ ನಮ್ಮ ದೇಹ ಅದು ಸರಿಯಾಗಿರಬೇಕಾದರೆ ಅದಕ್ಕೆ ಕ್ರೀಡೆ ಎಂಬುದು ಅವಶ್ಯಕ. ಅದರಲ್ಲೂ ದೈಹಿಕವಾಗಿ ಸದೃಢವಾಗಿರುವವರು ಹೆಚ್ಚು ಸಮಯ ಬದುಕಬಲ್ಲರು. ಮನಸ್ಸಿಗೆ ಹಾಗೂ ದೇಹಕ್ಕೆ ಎಲ್ಲ ತೆರನಾದ ಆರೋಗ್ಯ ನೀಡುವುದಾದರೆ ಅದು ಕಬಡ್ಡಿ ಕ್ರೀಡೆ ಎಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಹೇಳಿದರು.
ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ನ ಸಂಯುಕ್ತ ಆಶ್ರಯದಲ್ಲಿ ಸೆ.30 ರಂದು ಕಿಲ್ಲೆ ಮೈದಾನದಲ್ಲಿ ಮ್ಯಾಟ್ ಅಂಕಣದಲ್ಲಿ ನಡೆದ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಪ್ರೊ ಕಬಡ್ಡಿ ಮಾದರಿಯ ‘ಅಹರ್ನಿಶಿ’ ಕಬಡ್ಡಿ ಪಂದ್ಯಾಟವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಕಬಡ್ಡಿ ಪಂದ್ಯಾಟವು ಗಣೇಶೋತ್ಸವದ ಪೆಂಡಾಲ್ನಲ್ಲಿ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಉತ್ಸವ ಅಂತ ಹೇಳಿಕೊಂಡಾಗ ಅಲ್ಲಿ ಎಲ್ಲವೂ ಸೇರಿಕೊಳ್ಳುತ್ತದೆ. ಈ ವೇದಿಕೆಯಲ್ಲಿ ಗಣೇಶೋತ್ಸವ, ಅಮೆಚೂರ್ ಕಬಡ್ಡಿ ಮುಂದೆ ನಡೆಯಲಿರುವ ಪಿಲಿರಂಗ್ ಎಲ್ಲವೂ ಉತ್ತಮ ವಿಚಾರವಾಗಿದೆ. ಹಿಂದಿನ ಕಾಲದಲ್ಲಿ ಮಣ್ಣಿನ ಕ್ರೀಡೆಯಾಗಿ ಈ ಕಬಡ್ಡಿ ಹೆಸರು ಹೊಂದಿತ್ತು. ಕಾಲಕ್ರಮೇಣ ವ್ಯವಸ್ಥೆಗಳು ಬೇರೆಯಾಗಿರುವುದರಿಂದ ಇಂದು ಮ್ಯಾಟ್ನಲ್ಲಿ ಕಬಡ್ಡಿಯನ್ನು ಆನಂದಿಸಬಹುದಾಗಿದೆ ಎಂದ ಅವರು ನಮ್ಮ ದೇಶದಿಂದ ಪ್ರತಿಷ್ಠಿತ ಒಲಿಂಪಿಕ್ಗೆ ಹೋದ ಕ್ರೀಡೆ ಎಂದರೆ ಅದು ಕಬಡ್ಡಿ ಆಗಿದೆ. ಅಗಲಿದ ಉದಯ ಚೌಟರವರ ಆತ್ಮಕ್ಕೆ ಮಹಾಲಿಂಗೇಶ್ವರ ದೇವರು ಸನ್ಮಂಗಲವನ್ನು ನೀಡಲಿ ಎಂದು ಹಾರೈಸುತ್ತಾ ಕ್ರೀಡೆಯು ಯಶಸ್ಸನ್ನು ಪಡೆಯಲಿ ಎಂದು ಹಾರೈಸಿದರು.
ಕಬಡ್ಡಿಯಿಂದ ಎಲ್ಲರನ್ನು ಒಗ್ಗೂಡಿಸುವ ಕೆಲಸವಾಗಲಿ-ಡಾ.ಪುತ್ತೂರಾಯ:
ಬೊಳ್ವಾರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ನಮ್ಮ ಕರಾವಳಿಯ ಕಬಡ್ಡಿ ಕ್ರೀಡೆಯಿಂದ ಜಾತಿ-ಮತ-ಧರ್ಮ-ಬೇಧವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ಕೆಲಸವಾಗಲಿ ಹಾಗೂ ಕ್ರೀಡಾ ಹಬ್ಬವಾಗಿ ಈ ನೆಲದಲ್ಲಿ ನಿರಂತರವಾಗಿ ನಡೆಯುತ್ತಿರಲಿ ಎಂದು ಹೇಳಿ ಶುಭ ಹಾರೈಸಿದರು.
ದೈಹಿಕ, ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವ ಕ್ರೀಡೆ-ರೆ|ವಿಜಯ ಹಾರ್ವಿನ್:
ಸುದಾನ ವಸತಿಯುತ ವಿದ್ಯಾಸಂಸ್ಥೆಯ ಸಂಚಾಲಕ ರೆ|ವಿಜಯ ಹಾರ್ವಿನ್ ಮಾತನಾಡಿ, ಕಬಡ್ಡಿ ಕ್ರೀಡೆಯು ನಮ್ಮ ಹೆಮ್ಮೆಯ, ಪ್ರೀತಿಯ, ಹೆಗ್ಗಳಿಕೆಯ ಕ್ರೀಡೆ. ಗ್ರಾಮೀಣ ಕ್ರೀಡೆಯಾದ ಈ ಕಬಡ್ಡಿ ಕ್ರೀಡೆಯನ್ನು ಜಗತ್ತಿನಲ್ಲಿ ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಈ ಕಬಡ್ಡಿ ಕ್ರೀಡೆಯಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ವೃದ್ಧಿಗೊಳಿಸುತ್ತದೆ. ಸರಕಾರವು ಗ್ರಾಮೀಣ ಪ್ರದೇಶದ ಶಾಲೆಗಳಿಗೆ, ಪ್ರದೇಶಗಳಿಗೆ ಮ್ಯಾಟ್ ಅನ್ನು ಒದಗಿಸಿಕೊಟ್ಟಲ್ಲಿ ಈ ಗ್ರಾಮೀಣ ಕ್ರೀಡೆಗೆ ಹೆಚ್ಚು ಅರ್ಥ ಬರುತ್ತದೆ ಎಂದರು.
ಸಹೋದರತ್ವ ಭಾವನೆಯಿದ್ದಲ್ಲಿ ಕಾರ್ಯಕ್ರಮ ಯಶಸ್ವಿ-ರವೀಂದ್ರ ಶೆಟ್ಟಿ:
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಕಂಬಳವಾಗಲಿ, ಕಬಡ್ಡಿಯಾಗಲಿ ಚಂದ್ರಣ್ಣರವರು ಕೈ ಹಾಕಿದ ಎಲ್ಲವೂ ಚಿನ್ನವಾಗಿ ಮಾರ್ಪಟ್ಟಿದೆ ಮಾತ್ರವಲ್ಲ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸುವ ಗುಣ ಚಂದ್ರಣ್ಣರವರ ತಂಡಕ್ಕಿದೆ. ಚಂದ್ರಣ್ಣರವರು ನಡೆಸುವ ಕಂಬಳವಾಗಲಿ, ಕಬಡ್ಡಿ ಕ್ರೀಡೆಯಾಗಲಿ ಪ್ರತಿಯೊಂದು ಶಿಸ್ತುಬದ್ಧವಾಗಿ ನಡೆಯುವಂತಹುದು ಮಾತ್ರವಲ್ಲ ಯಾವುದೇ ಜಾತಿ-ಮತ-ಧರ್ಮವಿಲ್ಲದೆ ಸಹೋದರತ್ವ ಭಾವನೆಯಿಂದ ನಡೆಯುವ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿದೆ ಎಂದರು.
ಕ್ರೀಡೆಯಲ್ಲಿ ಕ್ರೀಡಾಪಟುಗಳ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ-ಆಂಜನೇಯ ರೆಡ್ಡಿ:
ಪುತ್ತೂರು ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮಾತನಾಡಿ, ಅದ್ಭುತವಾದ ಈ ಕಬಡ್ಡಿ ಕ್ರೀಡೆಯಲ್ಲಿ ಕಬಡ್ಡಿ ಕ್ರೀಡೆಯಲ್ಲಿ ಕ್ರೀಡಾಪಟುಗಳ ಶಕ್ತಿ, ಸಾಮರ್ಥ್ಯ, ಕೌಶಲವನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು ಎನ್ನುವುದು ಆಶಯವಾಗಿದೆ ಎಂದರು.
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪುತ್ತೂರಿನ ಕ್ರೀಡಾಪಟುಗಳು ಪ್ರಜ್ವಲಿಸುತ್ತಿದ್ದಾರೆ-ಚನಿಲ ತಿಮ್ಮಪ್ಪ ಶೆಟ್ಟಿ:
ಕರ್ನಾಟಕ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸೆಪ್ಟೆಂಬರ್ ತಿಂಗಳಿನಲ್ಲಿ ಬೇರೆ ಬೇರೆ ಹಬ್ಬಗಳು ಬರುತ್ತದೆ. ಈ ನಿಟ್ಟಿನಲ್ಲಿ ಕಬಡ್ಡಿ ಜಾತ್ರೆ ಕೂಡ ಆ ಹಬ್ಬದ ಸಾಲಿನಲ್ಲಿ ಬರಬಹುದಾಗಿದೆ. ದಿ.ಉದಯ ಚೌಟರವರು ಅವರ ಸಾಮರ್ಥ್ಯಕ್ಕನುಗುಣವಾಗಿ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗ ಗಳಿಸಿಕೊಂಡಿದ್ದರು. ಅವರಂತೆಯೇ ಚಂದ್ರಹಾಸ ಶೆಟ್ಟಿಯವರ ನೇತೃತ್ವದಲ್ಲಿ ಅನೇಕ ಮಂದಿ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಪುತ್ತೂರಿನ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು.
ಪ್ರಶಾಂತ್ ರೈಯವರು ಕ್ರೀಡಾಪಟುಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ-ರಾಧಾಕೃಷ್ಣ ರೈ:
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ಕೆಲವು ವರ್ಷಗಳ ಬಳಿಕ ಅಮೆಚೂರು ವತಿಯಿಂದ ಈ ಪ್ರೊ ಕಬಡ್ಡಿ ಪುತ್ತೂರಿನಲ್ಲಿ ಆಗುತ್ತಿರುವುದು ಬಹಳ ಸಂತಸದ ವಿಚಾರ. ಮಣ್ಣಿನಲ್ಲಿ ಕಬಡ್ಡಿ ಆಡಿ, ಬಳಿಕ ತನ್ನ ಪ್ರತಿಭೆಯನ್ನು ಮ್ಯಾಟ್ ಅಂಕಣದಲ್ಲಿ ಪ್ರದರ್ಶಿಸಿ ಪ್ರತಿಷ್ಠಿತ ಪ್ರೊ ಕಬಡ್ಡಿಯಲ್ಲಿ ಮಿಂಚಿರುವ ಪ್ರಶಾಂತ್ ರೈಯವರು ಇಂದಿನ ಕ್ರೀಡಾಪಟಿಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಪಂದ್ಯಾಟದಲ್ಲಿ ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಮುಂದೆ ಸಾಗುವಂತಾಗಬೇಕು ಎಂದರು.
ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು-ದಿನೇಶ್ ಮೆದು:
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಕಬಡ್ಡಿಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಆಯೋಜಿಸಿದ ಈ ಪಂದ್ಯಾಟವು ಬಹಳ ಅರ್ಥಪೂರ್ಣವಾಗಿದೆ ಮತ್ತು ಈ ಪಂದ್ಯಾಟವನ್ನು ಆಯೋಜನೆ ಮಾಡಿದ ಸಂಘಟಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಭಾರತ ದೇಶದ ದೇಶೀಯ ಮಣ್ಣಿನ ಕ್ರೀಡೆಯಾಗಿರುವ ಕಬಡ್ಡಿ ಕ್ರೀಡೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಚಂದ್ರಣ್ಣರವರ ಟೀಂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದು ಮಾತ್ರವಲ್ಲ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವ ಮೂಲಕ ಐತಿಹಾಸಿಕ ಕ್ರೀಡೆಗೆ ಮಹತ್ವ ಬಂದಿದೆ ಎಂದರು.
ಉತ್ತಮ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಲಿ-ವೆಂಕಟೇಶ್ವರ ಅಯ್ಯಂಗಾರು:
ಪ್ರಗತಿಪರ ಕೃಷಿಕ ವೆಂಕಟೇಶ್ವರ ಅಯ್ಯಂಗಾರು ಮುಂಡೂರು ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಪ್ರೊ ಕಬಡ್ಡಿಗೆ ಬಹಳ ಜನಪ್ರಿಯತೆ ಪಡೆದಿದೆ. ಕಳೆದ ಎರಡು ವರ್ಷದಿಂದ ಪುತ್ತೂರಿನಲ್ಲಿ ನೆಲೆಸಿರುವ ನನಗೆ ಕಬಡ್ಡಿಯ ಜನಪ್ರಿಯತೆ ಎಷ್ಟೊಂದು ತಿಳಿದಿದೆ. ಕಬಡ್ಡಿ ಎಂಬ ಪದಕ್ಕೆ ತಮಿಳಿನಲ್ಲಿ ಕೈಪಿಡಿ ಹಾಗೂ ಹಿಂದಿಯಲ್ಲಿ ಕೌನ್ ಬಡಾ ಶಬ್ದ ಅಡಕವಾಗಿದೆ. ಉತ್ತಮ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಎಲ್ಲರ ಸಹಕಾರ, ಪ್ರೋತ್ಸಾಹದೊಂದಿಗೆ ಕಬಡ್ಡಿ ಯಶಸ್ವಿಯಾಗಿ ನಡೆಯುತ್ತಿದೆ-ಚಂದ್ರಹಾಸ ಶೆಟ್ಟಿ:
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶ್ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಸತತ ನಾಲ್ಕು ವರ್ಷದಿಂದ ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟದ ಕಬಡ್ಡಿಯನ್ನು ಆಯೋಜಿಸುತ್ತಾ ಬಂದಿದ್ದರೂ, ಕೋವಿಡ್ನಿಂದಾಗಿ ಕೆಲವು ವರ್ಷ ಪಂದ್ಯಾಟವನ್ನು ಆಯೋಜಿಸಲಾಗಿಲ್ಲ. ಇದೇ ಸಂದರ್ಭದಲ್ಲಿ ಓರ್ವ ಅಪ್ರತಿಮ ಕಬಡ್ಡಿಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿದ್ದ ಉದಯ ಚೌಟರವರ ಆಕಸ್ಮಿಕ ನಿಧನ ನಮಗೆ ನಿಬ್ಬೆರರಾಗಿಸವಂತೆ ಮಾಡಿತ್ತು ಮಾತ್ರವಲ್ಲ ಇಂದು ಅವರ ನೆನಪಿಗೋಸ್ಕರ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದ್ದೇವೆ. ವಿಜಯಾ ಬ್ಯಾಂಕಿನಲ್ಲಿ ಉದಯ ಚೌಟರವರಲ್ಲದೆ ಅನೇಕ ದ.ಕ ಜಿಲ್ಲೆಯ ಪ್ರತಿಭಾನ್ವಿತ ಕಬಡ್ಡಿ ಕ್ರೀಡಾಪಟುಗಳಿಗೆ ಉದ್ಯೋಗ ಸಿಕ್ಕಿರುತ್ತದೆ. ಪ್ರಸ್ತುತ ಬ್ಯಾಂಕ್ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಜಯಾ ಬ್ಯಾಂಕ್ ವಿಲೀನರಾಗುವುದರೊಂದಿಗೆ ಇಲ್ಲಿನ ಕ್ರೀಡಾಪಟುಗಳಿಗೆ ಸಿಗುವ ಉದ್ಯೋಗವೂ ಕಡಿಮೆಯಾಯಿತು. ಆದರೂ ಉದಯ ಚೌಟರವರು ಬ್ಯಾಂಕಿನಲ್ಲಿದ್ದರಿಂದ ಅವರು ನಮ್ಮ ಆಶಯವನ್ನು ಪೂರೈಸುತ್ತಿದ್ದರು. ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದೊಂದಿಗೆ ಈ ಕಬಡ್ಡಿ ಕ್ರೀಡೆಯು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ, ಸೋಹಮ್ ರಿನೀವೆಬಲ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಡೆಪ್ಯೂಟಿ ಮ್ಯಾನೇಜರ್ ಹರೀಶ್ ಶೆಟ್ಟಿ, ಉದ್ಯಮಿ ಅರಿಯಡ್ಕ ಸಂದೀಪ್ ಶೆಟ್ಟಿ ಬೆಂಗಳೂರು, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು ಬೆಂಗಳೂರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಸುವರ್ಣ, ಗಂಗಾಧರ್ ಶೆಟ್ಟಿ ಕೈಕಾರ, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಪ್ರಕಾಶ್ ರೈ ಬಳ್ಳಮಜಲು, ಉದ್ಯಮಿ ಶಶಿಕಿರಣ್ ರೈ ನೂಜಿಬೈಲು, ಉದ್ಯಮಿ ರೋಶನ್ ರೈ ಬನ್ನೂರು, ಉದ್ಯಮಿ ಕೃಷ್ಣಪ್ರಸಾದ್ ಆಳ್ವ, ಉದ್ಯಮಿ ಚಂದ್ರಹಾಸ ಶೆಟ್ಟಿ ಆನೆಮಜಲು, ಜಿನ್ನಪ್ಪ ಪೂಜಾರಿ ಮುರ, ಮಂಗಳೂರು ವಿ.ವಿಯ ಮಾಜಿ ಕಬಡ್ಡಿ ಕಪ್ತಾನ ಪ್ರವೀಣ್ಚಂದ್ರ ಆಳ್ವ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಂದ್ಯಾಟದ ಆಕರ್ಷಣೆಯಾಗಿ ಆರಂಭಿಕ ಪಂದ್ಯಾಟದ ಮುನ್ನ ಖ್ಯಾತ ಗಾಯಕಿ ‘ಕಟೀಲು ಶ್ರೀದೇವಿ ಚರಿತೆ’ ಮತ್ತು ‘ಕೋಟಿ-ಚೆನ್ನಯ’ ಧಾರವಾಹಿ ನಟಿ ಸಮನ್ವಿ ರೈ ಮದಕರವರ ಸಹೋದರಿ ರಾಷ್ಟ್ರಗೀತೆ ಹಾಡುವುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ವಿಂದ್ಯಾಶ್ರೀ ರೈ ಮತ್ತು ಭಾಗ್ಯಶ್ರೀ ರೈ ಪ್ರಾರ್ಥಿಸಿದರು. ಪಂದ್ಯಾಟ ಸಮಿತಿಯ ಅಧ್ಯಕ್ಷ ಶಿವರಾಮ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ವಂದಿಸಿದರು. ನಿರಂಜನ್ ರೈ ಮಠಂತಬೆಟ್ಟು ಹಾಗೂ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಪಂದ್ಯಾಟ ಸಮಿತಿ ಅಧ್ಯಕ್ಷ ಹಬೀಬ್ ಮಾಣಿ, ಕಾರ್ಯದರ್ಶಿ ನವನೀತ್ ಬಜಾಜ್, ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ಸಹಿತ ಪದಾಧಿಕಾರಿಗಳು ಹಾಗೂ ಸದಸ್ಯರು ಅತಿಥಿಗಳನ್ನು ಶಾಲು ಹೊದಿಸಿ ಸ್ವಾಗತಿಸಿದರು.
ಎಲ್ಲಿ ಹೋದರೂ ಪುತ್ತೂರಿನ ಪ್ರತಿಭಾವಂತರೇ ಕಾಣ ಸಿಗುತ್ತಾರೆ, ಯಾಕೆಂದ್ರೆ ಅವರು ನಿಷ್ಠಾವಂತರು…
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪುತ್ತೂರಿನ ಕ್ರೀಡಾಪಟುಗಳು ರಾರಾಜಿಸಲು ಚಂದ್ರಹಾಸ ಶೆಟ್ಟಿ ಮತ್ತು ಅವರ ತಂಡದವರು ಕಾರಣರಾಗಿದ್ದಾರೆ ಅಲ್ಲದೆ ಪುತ್ತೂರಿನಲ್ಲಿ ಯಶಸ್ವಿಯಾಗಿ ಕಾಳೆಲೆಯುವ ಈ ಕಬಡ್ಡಿ ಕ್ರೀಡೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದಾರೆ. ಇಂದು ಮ್ಯಾಟ್ ಕಬಡ್ಡಿಗೆ ಪ್ರೋತ್ಸಾಹ ಕೊಡುವ ಕೆಲಸವಾಗುತ್ತಿದೆ. ಇಂದು ಎಷ್ಟೋ ಜನ ಮ್ಯಾಟ್ ಕೊಡಬೇಕಾ ಎನ್ನುವ ಪರಿಸ್ಥಿತಿಗೆ ಕಬಡ್ಡಿಯನ್ನು ತಂದು ನಿಲ್ಲಿಸಿದೆ. ಮೂರ್ನಾಲ್ಕು ಶಾಲೆಗೆ ಶಾಸಕರ ನಿಧಿಯಲ್ಲಿ ಮ್ಯಾಟ್ ಕೊಡಿಸುವ ಕೆಲಸ ಮಾಡಿದ್ದೇವೆ. ರಾಜಕೀಯ ಪಕ್ಷ ಬಿಟ್ಟು ಬೇರೆ ಬೇರೆ ರಂಗದಲ್ಲಿ ಇಂದು ಪುತ್ತೂರಿನವರು ಹೆಸರನ್ನು ಗಳಿಸುತ್ತಿರುವುದು ಶ್ಲಾಘನೀಯತಕ್ಕವಾದ ಅಂಶವಾಗಿದೆ. ಎಲ್ಲಿ ಹೋದರೂ ಪುತ್ತೂರಿನ ಪ್ರತಿಭಾವಂತರೇ ಕಾಣ ಸಿಗುತ್ತಾರೆ, ಯಾಕೆಂದ್ರೆ ಅವರು ಬಹಳ ನಿಷ್ಠಾವಂತರು. ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿರುವ ನಮ್ಮ ಪ್ರಶಾಂತ್ ರೈಯವರು ಹೆಮ್ಮೆಯ ಕುವರ ನಿಜಕ್ಕೂ ಹ್ಯಾಟ್ಸಾಪ್.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು
ದಿ.ಚೌಟರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ..
ಅಗಲಿದ ಅಂತರ್ರಾಷ್ಟ್ರೀಯ ಕಬಡ್ಡಿ ಆಟಗಾರ, ಬಂಟ್ವಾಳದ ಮಾಣಿ ಬದಿಗುಡ್ಡೆ ನಿವಾಸಿ, ಬ್ಯಾಂಕ್ ಆಫ್ ಬರೋಡದ ಉಪ ಪ್ರಬಂಧಕ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಆಟಗಾರ, ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ದಿ.ಉದಯ ಚೌಟರವರ ಮನದಾಳದ ಆಸೆಯೇ ಪುತ್ತೂರಿನಲ್ಲಿ ಕಬಡ್ಡಿ ಪಂದ್ಯಾಟ ಏರ್ಪಡಿಸಬೇಕೆಂಬುದು. ಆದರೆ ತನ್ನ ಸಣ್ಣ ಪ್ರಾಯದಲ್ಲಿಯೇ ಹೃದಯಾಘಾತದಿಂದ ಉದಯ ಚೌಟರವರು ಅಗಲಿದ್ದು ಅವರ ಸ್ಮರಣಾರ್ಥ ಈ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ಏರ್ಪಡಿಸಲಾಗಿದ್ದು ಅವರ ಭಾವಚಿತ್ರಕ್ಕೆ ಆಗಮಿಸಿದ ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪ್ರದರ್ಶನ ಪಂದ್ಯ.. ಫಿಲೋಮಿನಾ ಕಾಲೇಜು(ಪ್ರ), ಪೊಲೀಸ್ ತಂಡ(ದ್ವಿ)..
ಪಂದ್ಯಾಕೂಟವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಪ್ರದರ್ಶನ ಪಂದ್ಯಾಟವನ್ನು ಏರ್ಪಡಿಸಲಾಗಿದ್ದು, ಪೊಲೀಸ್ ತಂಡ, ಫಿಲೋಮಿನಾ ಕಾಲೇಜು ಪದವಿ ಹಾಗೂ ಫಿಲೋಮಿನಾ ಕಾಲೇಜು ಪಿಯು, ವಿವೇಕಾನಂದ ಕಾಲೇಜಿನ ತಂಡಗಳ ಮಧ್ಯೆ ನಡೆದ ಲೀಗ್ ಪಂದ್ಯಾಟದಲ್ಲಿ ಫಿಲೋಮಿನಾ ಪದವಿ ಕಾಲೇಜು ಪ್ರಥಮ, ಪೊಲೀಸ್ ತಂಡ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ.
ಪಂದ್ಯಾಟ ಸುದ್ದಿ ಯೂಟ್ಯೂಬ್ ಚಾನೆಲ್ನಿಂದ ನೇರ ಪ್ರಸಾರ