ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಬೀದಿ ನಾಟಕ ಹಾಗೂ ಜಾಥಾ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ, ಎನ್‌ ಸಿ ಸಿ ಯ ಭೂ ದಳ ಮತ್ತು ನೌಕಾದಳ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ಇಕೋ ಕ್ಷಬ್‌ಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಯಿತು. ಸ್ವಚ್ಛ ಭಾರತ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆಯು ನಮ್ಮ ಮನೆ ಪರಿಸರ ಗ್ರಾಮದಿಂದ ಪ್ರಾರಂಭವಾಗಬೇಕು. ಪರಿಸರವನ್ನು ಸ್ವಚ್ಛವಾಗಿರಿಸುವುದು ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಿದೆ. ಕೇಂದ್ರ ಸರಕಾರವು ಸ್ವಚ್ಛತೆಗೆ ಹಲವು ಮಾನದಂಡಗಳನ್ನು ನಿಯೋಜಿಸಿದೆ. ಅವುಗಳನ್ನೆಲ್ಲ ಪಾಲಿಸಿದ್ದೇ ಆದರೆ ಸ್ವಚ್ಛತೆಯಲ್ಲಿ ನಮ್ಮ ನಗರ ಸಭೆಯು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲೂ ಪ್ರಥಮ ಸ್ಥಾನಗಳಿಸಬಹುದಾಗಿದೆ. ಪರಿಸರ ನೈರ್ಮಲ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸುತ್ತುಮುತ್ತಲಿನ ಜನರಿಗೆ ಅರಿವು ಮೂಡಿಸುವ ಈ ಕಾರ್ಯಕ್ರಮವು ಶ್ಲಾಘನೀಯ” ಎಂದು ಕಾಲೇಜಿನಲ್ಲಿ ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಸಿಎಂಸಿ ಕಮಿಷನರ್‌ ಮಧು ಎಸ್‌ ಮನೋಹರ್‌ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ| ಗಣೇಶ್‌ ಭಟ್‌ ಕೆ ಇವರು “ಸ್ವಚ್ಛತಾ ಅಭಿಯಾನ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ನಮ್ಮ ಅಭಿಯಾನ. ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಭಿಯಾನವು ನಮ್ಮ ರಾಷ್ಟ್ರವನ್ನು ಪರಿವರ್ತಿಸಲು ಮತ್ತು ನಮ್ಮ ಎಲ್ಲಾ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ಒಂದು ಸಾಮೂಹಿಕ ಪ್ರಯತ್ನವಾಗಿದೆ. ಸ್ವಚ್ಛತಾ ಅಭಿಯಾನದ ಹಿಂದಿನ ಮೂಲಭೂತ ಕಲ್ಪನೆಯು ಸರಳವಾದರೂ ಆಳವಾದದ್ದು. ಸ್ವಚ್ಛ ಭಾರತವು ಆರೋಗ್ಯಕರ ಮತ್ತು ಸಮೃದ್ಧ ಭಾರತಕ್ಕೆ ಅಡಿಪಾಯವಾಗಿದೆ. ಶುಚಿತ್ವವು ಕೇವಲ ಸೌಂದರ್ಯದ ವಿಷಯವಲ್ಲ; ಇದು ನಮ್ಮ ಮೌಲ್ಯಗಳು, ನೈರ್ಮಲ್ಯಕ್ಕೆ ನಮ್ಮ ಬದ್ಧತೆ ಮತ್ತು ಪರಸ್ಪರ ಗೌರವದ ಪ್ರತಿಬಿಂಬವಾಗಿದೆ” ಎಂದು ಹೇಳಿದರು.

ಗಾಂಧಿ ಜಯಂತಿ ಹಾಗೂ ಪೌರಕಾರ್ಮಿಕ ದಿನಾಚರಣೆಯ ಸಲುವಾಗಿ ಕಾಲೇಜಿನ ವಿವಿಧ ಘಟಕಗಳ ಸಂಯೋಜಕರು ಹಾಗೂ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾಲೇಜಿನಿಂದ ಪ್ರಾರಂಭಗೊಂಡು ಪುತ್ತೂರು ಬಸ್‌ ನಿಲ್ದಾಣದವರೆಗೆ ಜಾಥಾವನ್ನು ನಡೆಸಿದರು. ಜಾಥಾದುದ್ದಕ್ಕೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಪ್ರದರ್ಶಿಸಿ ಘೋಷವಾಕ್ಯಗಳನ್ನು ಹೇಳಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರದರ್ಶನಕಲಾ ಸಂಘದ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಾಲೇಜಿನಲ್ಲಿ, ದರ್ಬೆ ವೃತ್ತದ ಬಳಿ ಹಾಗೂ ಪುತ್ತೂರು ಬಸ್‌ ನಿಲ್ದಾಣದ ಬಳಿಯಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ರಾಮಾಂಜಿ ಉಡುಪಿ ಇವರು ಬೀದಿ ನಾಟಕವನ್ನು ನಿರ್ದೇಶಿಸಿರುತ್ತಾರೆ. ಕಾಲೇಜಿನಿಂದ ಆರಂಭಗೊಂಡು ದರ್ಬೆ ವೃತ್ತದ ಮೂಲಕ ಪುತ್ತೂರಿನ ಮುಖ್ಯರಸ್ತೆಯಲ್ಲಿ ಸಾಗಿದ ಜಾಥಾದ ಸಮಾರೋಪ ಕಾರ್ಯಕ್ರಮವನ್ನು ಪುತ್ತೂರು ಬಸ್‌ ನಿಲ್ದಾಣದ ಬಳಿಯಲ್ಲಿ ನಡೆಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೋರವರು “ ಸ್ವಚ್ಛತಾ ಜಾಥಾ ಎಲ್ಲ ನಾಗರಿಕರ  ಮತ್ತು ಪರಿಸರದ ಒಳಿತಿಗಾಗಿ ನಮ್ಮ ವಿದ್ಯಾರ್ಥಿಗಳ ಪುಟ್ಟ ಪ್ರಯತ್ನ. ಪರಿಸರ ಸ್ವಚ್ಛತೆ ಕೇವಲ ಸರ್ಕಾರದ  ಜವಾಬ್ದಾರಿಯಲ್ಲ. ಇದು ನಮ್ಮ ನಾಗರಿಕತೆಯ ಸಮೃದ್ಧಿಗೆ  ಪೂರಕವಾಗಿರುವಂತಹ ಒಂದು  ಬೆಳವಣಿಗೆಯಾಗಿದೆ. ನಮ್ಮ ಮನೆ, ಪರಿಸರ, ತರಗತಿ ಕಾಲೇಜು ಶುಚಿಯಾಗಿದ್ದಷ್ಟು ಅಲ್ಲಿ ಸಕಾರಾತ್ಮಕ ಚಿಂತನೆಗಳು ಹೆಚುತ್ತವೆ.  ಪ್ರತಿಯೋರ್ವ ನಾಗರಿಕನು ಸ್ವಚ್ಛತಾ ಅಭಿಯಾನವನ್ನು ಒಂದು ವೈಯಕ್ತಿಕ ಹೊಣೆಗಾರಿಕೆಯಾಗಿ   ಸ್ವೀಕರಿಸಬೇಕು.   ನಮ್ಮ ದೈನಂದಿನ ನಡವಳಿಕೆಗಳಲ್ಲಿ  ಸ್ವಚ್ಛತೆಯ ಕುರಿತಾದ ಒಂದು ಸಣ್ಣ ಬದಲಾವಣೆಯು ಸಹ ನಮ್ಮ ಪರಿಸರದ ಮೇಲೆ  ಮತ್ತು ನಮ್ಮ ಸಮಾಜದ ಮೇಲೆ  ಪ್ರಮುಖ ಪರಿಣಾಮ ಬೀರಬಹುದು  “  ಎಂದು ಅಭಿಪ್ರಾಯಪಟ್ಟರು.

ಪೌರ ಕಾರ್ಮಿಕರಿಗೆ ಸನ್ಮಾನ: “ನಮ್ಮ ಪರಿಸರವನ್ನು  ಸ್ವಚ್ಛವಾಗಿಡಲು, ನಮ್ಮ ಸಾರ್ವಜನಿಕ ಸ್ಥಳಗಳ ನೈರ್ಮಲ್ಯವನ್ನು ಕಾಪಾಡಲು  ಮತ್ತು ನಮ್ಮ  ಪೌರಕಾರ್ಮಿಕರು  ದಿನವಿಡೀ ದಣಿವರಿಯದೆ ಕೆಲಸ ಮಾಡುತ್ತಾರೆ.   ಪ್ರತಿದಿನ ಬೆಳಿಗ್ಗೆ, ನಾವು ಹೊಸ ದಿನದ ಭರವಸೆಯೊಂದಿಗೆ ಎದ್ದೇಳುವ ಮೊದಲೇ, ಪೌರ ಕಾರ್ಮಿಕರು ತಮ್ಮ ಕೆಲಸಕಾರ್ಯಗಳನ್ನು ಪೂರ್ಣಗೊಳಿಸಿರುತ್ತಾರೆ.  ಅವರು ತ್ಯಾಜ್ಯವನ್ನು ಎತ್ತಿಕೊಳ್ಳುತ್ತಾರೆ, ನಮ್ಮ ಬೀದಿಗಳನ್ನು ಗುಡಿಸುತ್ತಾರೆ ಮತ್ತು ನಮ್ಮ ಉದ್ಯಾನವನಗಳನ್ನು ನಿರ್ವಹಿಸುತ್ತಾರೆ, ಕೋವಿಡ್‌ ನಂತಹ ಸವಾಲಿನ ಪರಿಸ್ಥಿತಿಗಳಲ್ಲಿ ಸಹ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಪರಿಸರ ಸ್ವಚ್ಛತೆಗೆ ಅವರು ನೀಡಿದ ಕೊಡುಗೆಗೋಸ್ಕರ ಅವರ ನಿಸ್ವಾರ್ಥಸೇವೆಯನ್ನು ಪೌರಕಾರ್ಮಿಕರ ದಿನಾಚರಣೆಯ ಈ ಸಂದರ್ಭದಲ್ಲಿ ಗುರುತಿಸಲು ಸಂತೋಷವಾಗುತ್ತಿದೆ” ಎಂದು ಪೌರ ಕಾರ್ಮಿಕರನ್ನು ಕಾಲೇಜಿನ ವತಿಯಿಂದ ಸನ್ಮಾನಿಸುವ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಪ್ರೊ.ಗಣೇಶ್‌ ಭಟ್‌  ಹೇಳಿದರು. ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರಾದ  ಉಮಾವತಿ ಹಾಗೂ ಕೃಷ್ಣರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಾಪ್ತಿ ಮತ್ತು ಬಳಗ ಪ್ರಾರ್ಥಿಸಿದರು. ಎನ್‌ ಎಸ್‌ ಎಸ್‌ ಕಾರ್ಯಕ್ರಮಾಧಿಕಾರಿ ವಾಸುದೇವ ಎನ್‌ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜೇಶ್ವರಿ ಎಂ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಚಂದ್ರಶೇಖರ್‌ ಕೆ ಕಾರ್ಯಕ್ರಮ ನಿರೂಪಿಸಿದರು.  ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಎ ಪಿ ರಾಧಾಕೃಷ್ಣ, ಎನ್‌ ಸಿ ಸಿ ಅಧಿಕಾರಿಗಳಾದ ಲೆಫ್ಟಿನೆಂಟ್‌ ಜಾನ್ಸನ್‌ ಡೇವಿಡ್‌ ಸಿಕ್ವೆರಾ ಹಾಗೂ ತೇಜಸ್ವಿ ಭಟ್‌, ಮತ್ತು ಎನ್‌ ಎಸ್‌ ಎಸ್‌ ಕಾರ್ಯಕ್ರಮಾಧಿಕಾರಿ ಪುಷ್ಪ ಎನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ| ಮಾಲಿನಿ ಕೆ, ಡಾ| ವಿಜಯ ಕುಮಾರ್‌ ಎಂ,  ಡಾ| ನೋರ್ಬರ್ಟ್‌ ಮಸ್ಕರೇಞಸ್‌, ಭಾರತಿ ಎಸ್‌ ರೈ, ಸ್ಮಿತಾ ವಿವೇಕ್‌ ಹಾಗೂ ಶ್ರೀರಕ್ಷಾ ಮತ್ತು ಆಡಳಿತ ಸಿಬ್ಬಂದಿ ಅನಿಲ್‌ ಲಸ್ರಾದೋ ಹಾಗೂ ವಿನಿಲ್‌ ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here