ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಸಾಮಾವೇಶ, ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭ

0

ಸಾಹಿತ್ಯ ಪರಿಷತ್‌ನ ಅಭಿಯಾನ ಅರ್ಥಪೂರ್ಣವಾಗಿದೆ: ಡಾ. ರಾಜಾರಾಮ್ ಕೆ.ಬಿ.

ಉಪ್ಪಿನಂಗಡಿ: ಕನ್ನಡ ಸಾಹಿತ್ಯ ಪರಿಷತ್ ಜನ ಸಾಮಾನ್ಯರ ಪರಿಷತ್ ಆಗಿಸುವ ನಿಟ್ಟಿನಲ್ಲಿ ಪರಿಷತ್ ನಡಿಗೆ ಗ್ರಾಮದ ಕಡೆಗೆ ಎನ್ನುವ ಅಭಿಯಾನವನ್ನು ಅರ್ಥಪೂರ್ಣವಾಗಿ ಅನುಷ್ಠಾನಿಸುತ್ತಿರುವ ಪುತ್ತೂರು ತಾಲೂಕು ಘಟಕದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹಿರಿಯ ದಂತ ವೈದ್ಯ ಡಾ. ರಾಜಾರಾಮ ಕೆ.ಬಿ. ಎಂದರು.


ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಸಾಮಾವೇಶ, ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡುತ್ತಿದ್ದರು.


ಸಮಾರೋಪ ಭಾಷಣ ಮಾಡಿದ ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ, ಪುಸ್ತಕ ಓದುವ ಹವ್ಯಾಸವನ್ನು ಮರೆತು ಅಂಕ ಗಳಿಕೆಯ ಹಿಂದೆ ಓಡುವ ಹವ್ಯಾಸವನ್ನು ರೂಡಿಸಿಕೊಂಡ ಸಮಾಜದಲ್ಲಿ ನಡೆ – ನುಡಿಯ ಸಾಮ್ಯತೆಯ ಅಂತರವಿದೆ. ಮಾತೃ ಭಾಷೆ ಎನ್ನುವುದು ಅದು ಹೃದಯ ಭಾಷೆಯಾಗಿರುವುದರಿಂದ ಅದನ್ನು ಸೋಲದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಸರಕಾರಿ ಶಾಲೆಗಳಲ್ಲಿಯೂ ಕೂಡಾ ಇಂದು ಆಂಗ್ಲ ಭಾಷಾ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡಿರುವುದು ಆರೋಗ್ಯ ಪೂರ್ಣ ನಡೆಯಲ್ಲ ಎಂದು ಪ್ರತಿಪಾದಿಸಿದರು.


ಸಭಾಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಕನ್ನಡ ಸಾಹಿತ್ಯ ಪರಿಷತ್ ನಡಿಗೆ ಗ್ರಾಮದ ಕಡೆಗೆ ಎನ್ನುವ ಧ್ಯೇಯವಾಕ್ಯವನ್ನು ಬಹಳ ಯೋಜನಾಬದ್ದವಾಗಿ ನಡೆಸುವ ಮೂಲಕ ಪುತ್ತೂರು ತಾಲೂಕು ಘಟಕ ಮುಂಚೂಣಿ ಸ್ಥಾನದಲ್ಲಿ ಮುನ್ನಡೆಯುತ್ತಿದೆ ಎಂದರು.


ಕನ್ನಡ ಸಾಹಿತ್ಯ ಪರಿಷತ್ತಿನ ಉಪ್ಪಿನಂಗಡಿ ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷ ಕರುಣಾಕರ ಸುವರ್ಣ ರವರು ಪುಸ್ತಕ ಮಹಾದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಶಾಸಕ ಸಂಜೀವ ಮಟಂದೂರು ವಿವಿಧ ಸ್ಪರ್ಧ ವಿಜೇತರಿಗೆ ಬಹುಮಾನ ವಿತರಿಸಿದರು. ಸಾಹಿತ್ಯ ಕ್ಷೇತ್ರಕ್ಕೆ ಉಪ್ಪಿನಂಗಡಿ ಗ್ರಾಮದ ಕೊಡುಗೆ ಎಂಬ ವಿಚಾರವಾಗಿ ಗೋವಿಂದ ಪ್ರಸಾದ್ ಕಜೆ ಉಪನ್ಯಾಸವನ್ನು ನೀಡಿದರು.


ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ಧೀಕ್ ನೀರಾಜೆ, ಯುವ ಉದ್ಯಮಿ ಕರಾಯ ರಾಘವೇಂದ್ರ ನಾಯಕ್, ಸತ್ಯಶಾಂತಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಶಾಂತಾ ಕುಂಟಿನಿ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಅನುರಾಧಾ ಆರ್. ಶೆಟ್ಟಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಜ್ಞಾನ ಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಂಕೇರಿ ವಂದಿಸಿದರು. ನವೀನ್ ಬ್ರಾಗ್ಸ್ ಬಹುಮಾನಿತರ ಪಟ್ಟಿ ವಾಚಿಸಿದರು. ಪುಷ್ಪಲತಾ ತಿಲಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here