ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಅನುಪಮ ವೇದಿಕೆ ಕಾರ್ಯಕ್ರಮ

0

ಪಠ್ಯ ಹಾಗೂ ಪಠ್ಯೇತರ ವಿಚಾರಗಳೆರಡೂ ಸೇರಿದಾಗ ವ್ಯಕ್ತಿತ್ವ ನಿರ್ಮಾಣ: ಜಯಂತಿ ಪಿ.

ಪುತ್ತೂರು: ಪರಿಪೂರ್ಣತೆಯೆಡೆಗೆ ಸಾಗುವುದೇ ಜೀವನ. ನಾವು ಮಾಡುವ ಕೆಲಸ ಕಾರ್ಯಗಳಲ್ಲಿನ ಕುಂದುಕೊರತೆಗಳನ್ನು ಬೇರೆಯವರು ಗುರುತಿಸುತ್ತಾರೋ ಇಲ್ಲವೋ ಎಂಬುದಕ್ಕಿಂತ ಮಾಡುವ ಕೆಲಸವನ್ನು ಸಮರ್ಪಕವಾಗಿ ಮಾಡಿದ್ದೇವೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು. ಜೀವನದಲ್ಲಿ ನಮಗೆ ಒದಗಿ ಬರುವ ಅವಕಾಶಗಳನ್ನು ಉಪಯುಕ್ತ ರೀತಿಯಲ್ಲಿ ಬಳಸಿಕೊಂಡಾಗ ಪರಿಪೂರ್ಣತೆಯೆಡೆಗಿನ ಹಾದಿ ಸನಿಹವಾಗುತ್ತಾ ಸಾಗುತ್ತದೆ ಎಂದು ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಅನುಪಮ ಪ್ರತಿಭಾ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು. ವೇದಿಕೆಗಳು ನಮ್ಮ ವ್ಯಕ್ತಿತ್ವದ ಸೊಬಗನ್ನು ಹೆಚ್ಚಿಸುತ್ತಾ ಸಾಗಬೇಕು. ಜತೆಗಾರರ ಬಗೆಗಿನ ಕಾಳಜಿ, ಗುರುಹಿರಿಯರ ಕುರಿತಾಗಿ ಗೌರವ, ಹೆತ್ತವರೆಡೆಗಿನ ಭಕ್ತಿಗಳೇ ಮೊದಲಾದವುಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ. ಸ್ವತಃ ಕಲಿಕೆ ಹಾಗೂ ಅನ್ಯರ ನಡೆಗಳ ಗಮನಿಸುವಿಕೆಯ ಆಧಾರದ ಕಲಿಕೆ ನಿರಂತರವಾಗಿ ಜಾರಿಯಲ್ಲಿರಬೇಕು. ಪಠ್ಯ ಹಾಗೂ ಪಠ್ಯೇತರ ವಿಚಾರಗಳೆಲ್ಲವೂ ಜತೆಯಾಗಿ ವ್ಯಕ್ತಿ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ, ಮಾಹಿತಿಯೊಂದಿಗೆ ಮನರಂಜನೆ ಎಂಬ ಕಲ್ಪನೆ ಶಿಕ್ಷಣ ಕ್ಷೇತ್ರಕ್ಕೂ ಅಡಿಯಿಟ್ಟಿದೆ. ಹಾಗಾಗಿಯೇ ಶೈಕ್ಷಣಿಕ ಪಠ್ಯದೊಂದಿಗೆ ಮನಸ್ಸನ್ನು, ವ್ಯಕ್ತಿತ್ವವನ್ನು ಅರಳಿಸುವಂತಹ ವೈವಿಧ್ಯಮಯ ಸ್ಪರ್ಧೆಗಳು, ಕಾರ್ಯಕ್ರಮಗಳು ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜನೆಗೊಳ್ಳುತ್ತವೆ. ವ್ಯಕ್ತಿಯೊಬ್ಬ ತನ್ನೊಳಗಿನ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ದೊರಕುವ ವೇದಿಕೆಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ನುಡಿದರು.

ಈ ಸಂದರ್ಭದಲ್ಲಿ ತೃತೀಯ ಬಿಎ ವಿದ್ಯಾರ್ಥಿನಿ ಅಂಕಿತಾ, ತೃತೀಯ ಬಿ.ಕಾಂ ವಿದ್ಯಾರ್ಥಿಗಳಾದ ಶ್ರೀರಾಮ ಹಾಗೂ ಚೈತನ್ಯ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಶರಣ್ಯ, ದ್ವಿತೀಯ ಬಿ.ಎ ವಿದ್ಯಾರ್ಥಿನಿಯರಾದ ತೃಪ್ತಿ ಹಾಗೂ ಶಿಲ್ಪ, ಪ್ರಥಮ ಬಿ.ಎ ವಿದ್ಯಾರ್ಥಿನಿಯರಾದ ಅಕ್ಷಿತಾ, ಮಾನ್ಯ, ಸುಶ್ಮಿತಾ, ಪಲ್ಲವಿ ಹಾಗೂ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರತಿಭಾ ಪ್ರದರ್ಶನಗೈದರು. ವಿದ್ಯಾರ್ಥಿನಿ ತೃಪ್ತಿ ಎಂ ಮಯ್ಯಾಳ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಪಂಚಮಿ ಬಾಕಿವಪದವು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ನವ್ಯ ವಂದಿಸಿ, ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here