ಅ.7 : ಪುತ್ತೂರಿನಲ್ಲಿ ಪ್ರತಿಭಟನೆ, ಮನವಿ ಸಲ್ಲಿಕೆ
ಪುತ್ತೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಇರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಣಯಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು ಈ ಕುರಿತು ಬಿಎಂಎಸ್ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘವು ಹಲವು ಬಾರಿ ಮಂಡಳಿಯ ಉನ್ನತ ಅಧಿಕಾರಿಗಳಿಗೆ ಮತ್ತು ಕಾರ್ಮಿಕ ಸಚಿವರಿಗೆ ಸಮಸ್ಯೆಗಳ ಬಗ್ಗೆ ವಿವರಿಸಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ಬೆಲೆ ನೀಡುವಂತೆ ಬಿಎಂಎಸ್ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ಕುಂಬ್ರ ವಲಯ ಆಗ್ರಹಿಸಿದೆ. ಈ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಸಂಘದ ಸಹಕಾರದೊಂದಿಗೆ ಅ.7 ರಂದು ಪುತ್ತೂರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರ್ ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಕುಂಬ್ರ ವಲಯದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ ತಿಳಿಸಿದ್ದಾರೆ.
2021-22 ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು ಸಲ್ಲಿಸಿದ ವಿದ್ಯಾರ್ಥಿ ವೇತನದ ಅರ್ಜಿಗಳಲ್ಲಿ ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇನ್ನೂ ಹಣ ಬಂದಿಲ್ಲ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ. ಕಾರ್ಮಿಕ ಮಂತ್ರಿಗಳಾದ ಸಂತೋಷ್ ಲಾಡ್ರವರು ಏಕಪಕ್ಷೀಯ ನಿರ್ಧಾರ ಕೈಗೊಂಡು ಕಾರ್ಮಿಕರ ಮದುವೆ, ಅಪಘಾತ ಮರಣ, ಸಹಜ ಮರಣ, ವೃದ್ಯಾಪ್ಯ ಪಿಂಚಣಿ ಹಾಗೂ ಸ್ಕಾಲರ್ಶಿಪ್ನಲ್ಲಿ ಭಾರೀ ಪ್ರಮಾಣದಲ್ಲಿ ಕಡಿತ ಮಾಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದ್ದು ಇದನ್ನು ಕೂಡಲೇ ಕೈಬಿಟ್ಟು ಈ ಮುಂಚಿನಂತೆ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು, ಕಾರ್ಮಿಕರಿಗೆ ಮತ್ತು ರೈತರಿಗೆ ಮಾರಕವಾಗುವ ಯಾವುದೇ ನೀತಿ ನಿಯಮಗಳನ್ನು ಜಾರಿ ಮಾಡಬಾರದು, ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಸಂಘಟನೆಗಳಿಗೆ ಮಾತ್ರ ಸೌಲಭ್ಯಗಳಿಗೆ ಅರ್ಜಿ ಹಾಕುವ ಅವಕಾಶ ಮಾಡಿಕೊಡಬೇಕು, ಕಾರ್ಮಿಕರ ಕಾರ್ಡ್ ಮಾಡಿಸುವಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಲ್ಲದವರು ಕೂಡ ನೋಂದಾವಣೆ ಮಾಡಿಕೊಂಡಿದ್ದಾರೆ. ಇದನ್ನು ತಡೆಯಬೇಕು ಮತ್ತು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಮೆಡಿಕಲ್ ಕ್ಯಾಂಪ್ ದೃಷ್ಟಿಯಲ್ಲಿ ಟೆಂಡರ್ ಕರೆಯುವುದು, ಉಪಯೋಗವಿಲ್ಲದ ಮೆಡಿಕಲ್ ಕಿಟ್ಗಳನ್ನು ವಿತರಿಸುವುದು, ಕಳಪೆ ದರ್ಜೆಯ ಕೆಲಸದ ಸಾಮಾಗ್ರಿಗಳನ್ನು ವಿತರಿಸುವುದು ಇತ್ಯಾದಿಗಳನ್ನು ನಿಲ್ಲಿಸಬೇಕು, ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮರುಪಾವತಿಯಲ್ಲಿರುವ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು, ಕಟ್ಟಡ ಮತ್ತು ಇತರೆ ಕಾರ್ಮಿಕರ ವಸತಿ ಯೋಜನೆಗೆ ಸಾಲ ಮತ್ತು ಸಹಾಯಧನವನ್ನು ಕೂಡಲೇ ನೀಡಬೇಕು ಮತ್ತು ವಸತಿ ಯೋಜನೆಯ ಹೆಸರಿನಲ್ಲಿ ಕರ್ನಾಟಕ ಸರಕಾರ ಇತರ ಮಂಡಳಿಗಳಿಗೆ ಹಣ ನೀಡುವುದನ್ನು ನಿಲ್ಲಿಸಬೇಕು, ಮರಣ ಹೊಂದಿದ ಕಾರ್ಮಿಕರ ಸಂಗಾತಿಗೆ ವಿಧವಾ ವೇತನ ನೀಡಬೇಕು ಮತ್ತು ಮರಣ ಹೊಂದಿದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು ಈ ಬಗ್ಗೆ ಸರಕಾರ ಹಾಗೂ ಕಾರ್ಮಿಕರ ಕಲ್ಯಾಣ ಮಂಡಳಿ ಪರಿಶೀಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಸರಕಾರ ಹಾಗೂ ಕಲ್ಯಾಣ ಮಂಡಳಿ ಕ್ರಮ ಕೈಗೊಳ್ಳದೇ ಇದ್ದರೆ ಕರ್ನಾಟಕ ಸರಕಾರ ಹಾಗೂ ಕಲ್ಯಾಣ ಮಂಡಳಿಯ ವಿರುದ್ಧ ರಾಜ್ಯದಾದ್ಯಂತ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸರಕಾರದ ಕಟ್ಟಡ ಕಾರ್ಮಿಕರ ವಿರೋಧ ನೀತಿಯನ್ನು ದಿಕ್ಕರಿಸಿ ಹೋರಾಟ ಮಾಡುವುದು ಹಾಗೂ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಸಂಘದ ವಲಯ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ ಮನವಿಯಲ್ಲಿ ತಿಳಿಸಿದ್ದಾರೆ.