ಸವಣೂರು ವಿವೇಕ ಜಾಗೃತ ಬಳಗದ ವತಿಯಿಂದ ವಾತ್ಸಲ್ಯ ಶ್ರೀ ಕಾರ್ಯಕ್ರಮ

0

ಪುತ್ತೂರು: ಸಾಲಿಗ್ರಾಮದ ಡಿವೈನ್ ಪಾರ್ಕ್ ನ ಅಂಗ ಸಂಸ್ಥೆ ಚಾರ್ವಾಕದ ವಿವೇಕ ಜಾಗೃತ ಬಳಗ ಇದರ ಆಶ್ರಯದಲ್ಲಿ ಅ.2ರಂದು ವಾತ್ಸಲ್ಯ ಶ್ರೀ ವಿಶೇಷ ಸತ್ಸಂಗ ಕಾರ್ಯಕ್ರಮ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗೋಲ್ಡ್ ಮ್ಯಾನ್‌ ಸ್ಕೀಮ್ಸ್‌ ಕಂಪೆನಿಯ ಉಪಾಧ್ಯಕ್ಷ ಪ್ರದೀಪ್ ಆರ್‌ ಗೌಡ ಆರುವ ಗುತ್ತು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಜಗತ್ತಿಗೆ ಸನಾತನ ಹಿಂದೂ ಧರ್ಮದ ಶ್ರೇಷ್ಟತೆಯನ್ನು ಸಾರಿದ ಮಹಾನ್ ಚೇತನ. ಅವರ ಆದರ್ಶದ ನೆರಳಿನಲ್ಲಿ ಸಾಗುವ ವಿವೇಕ ಜಾಗೃತ ಬಳಗದ ಇಂತಹ ಕಾರ್ಯಕ್ರಮ ಅಪ್ರತಿಮ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ವಚನ ಪ್ರದೀಪ್, ಮಹಿಳೆ ಗರ್ಭವತಿಯಾಗಿರುವ 9 ತಿಂಗಳು ಮತ್ತು ಬಾಣಂತನ 9 ತಿಂಗಳು ಮನೋ ಸಂಸ್ಕಾರವನ್ನು ಸಾರುವ ಈ ಕಾರ್ಯಕ್ರಮ ಕಂಡು ಕೇಳರಿಯದ ವೈಶಿಷ್ಟ್ಯ ಹೊಂದಿದೆ ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ.ಮಾಧವ ಪೈ, ವೈದ್ಯಕೀಯ ವಿಜ್ಞಾನಕ್ಕೆ ಸವಾಲಾಗಿರುವ ಅಧ್ಯಾತ್ಮಿಕ ರಹಸ್ಯಗಳು ಮಾನವ ಜೀವನದ ವಿಕಸನಕ್ಕೆ ಸಂಜೀವಿನಿಯಾಗಿವೆ ಎಂದರು. ಇನ್ನೋರ್ವ ಮುಖ್ಯ ಸಂಪನ್ಮೂಲ ವ್ಯಕ್ತಿ ಪ್ರೇಮಕಲಾ ದಾಮೋದರ್ ಮೂಡಬಿದ್ರೆ, ಗರ್ಭಿಣಿ ಮಹಿಳೆಯ ಆಚಾರ, ವಿಚಾರ, ಆಹಾರ ಪದ್ಧತಿ, ಯೋಚನೆಗಳು, ಗರ್ಭಸ್ಥ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಎಚ್ಚರ ತಪ್ಪಿದರೆ ಮಗುವಿನಲ್ಲಿ ಅಂಗವೈಕಲ್ಯ ಕಾಣಿಸಬಹುದು ಎಂದರು.

ಸಮಾರೋಪ ಸಮಾರಂಭದಲ್ಲಿ ನ್ಯಾಯವಾದಿ ಮಾಚೀಲ ವೆಂಕಪ್ಪ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದರು. ಸುಬ್ರಮಣ್ಯ ವಿವೇಕ ಜಾಗೃತ ಬಳಗದ ಅಧಿಕಾರಿ ಸುಂದರ ಗೌಡ ಏನೇಕಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಗದ ಅಧ್ಯಕ್ಷೆ ಸುನಂದ ಕರಂದ್ಲಾಜೆ ಸ್ವಾಗತ ಭಾಷಣ ಮಾಡಿದರು. ಸುಮಿತ್ರಾ ಬಾಕಿಲ ವಂದನಾರ್ಪಣೆ ಮಾಡಿದರು. ಕೆ.ವಿ.ಮಾಧವ ಕರಂದ್ಲಾಜೆ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಶಾಲಾಕ್ಷಿ ಕೋಲ್ಪೆ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸರಸ್ವತಿ ಅಭಿಕಾರ್, ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಮೊಕ್ತೇಸರ ಮಾಚಿಲ ನಾರ್ಣಪ್ಪ ಗೌಡ, ಆಡಳಿತ ಪಂಗಡ ಸಮಿತಿ ಸದಸ್ಯ ಶೀನಪ್ಪ ಗೌಡ ಉಪಸ್ಥಿತರಿದ್ದರು. ಸಿ ಜೆ ಚಂದ್ರಕಲಾ ಆರುವ ಗುತ್ತು, ಲಕ್ಷ್ಮಣ ಕರಂದ್ಲಾಜೆ, ಪ್ರವೀಣ್ ಕುಂಟ್ಯಾನ, ದೇವಿಪ್ರಸಾದ ಸಜಂಕು, ದರ್ಣಪ್ಪಅಂಬುಲ, ವಿಶ್ವನಾಥ ಅಂಬುಲ, ಮನೋಹರ್ ಮಂಗಳೂರು, ಸತ್ಯನಾರಾಯಣ ಮಾಡಾವು ವಿಶೇಷ ಆಹ್ವಾನಿತರಾಗಿದ್ದರು. ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ, ಸುಬ್ರಹ್ಮಣ್ಯದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here