ಪುತ್ತೂರು: ಪುತ್ತೂರು ಸ್ಪಂದನಾ ಸಹಾಯ ನಿಧಿ ಸೇವಾ ಟ್ರಸ್ಟ್ ವತಿಯಿಂದ 16ನೇ ಕಾರ್ಯಕ್ರಮವಾಗಿ ಬಡ ರೋಗಿಗಳು, ಅಶಕ್ತರು ಮತ್ತು ಕ್ಯಾನ್ಸರ್ ಪೀಡಿತ ಆಯ್ದ ಕುಟುಂಬಗಳಿಗೆ, ದಾನಿಗಳ ಸಹಕಾರದಿಂದ ಒಂದು ತಿಂಗಳ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಅಕ್ಟೋಬರ್ 1 ರಂದು ಪುತ್ತೂರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಬಡ, ಅಶಕ್ತ ಸುಮಾರು 23 ಕುಟುಂಬಗಳಿಗೆ ಬೇಕಾಗುವ ಒಂದು ತಿಂಗಳ ಆಹಾರದ ಕಿಟ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ರವೀಂದ್ರ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಉಡುಪಿ ಮೂಲದ ರವಿ ಕಟಪಾಡಿಯವರ ಆದರ್ಶ ಗುಣಗಳನ್ನು ಕೊಂಡಾಡಿ ಅವರಂತೆ ಸ್ಪಂದನಾ ಸಹಾಯ ನಿಧಿ ಸೇವಾ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗಲೆಂದು ಶುಭಹಾರೈಸಿದರು. ಲಯನ್ಸ್ ಕ್ಲಬ್ಬಿನ ಕೋಶಾಧಿಕಾರಿ ಮೋಹನ್ ನಾಯ್ಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಸ್ಪಂದನಾ ಸಹಾಯ ನಿಧಿ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಸುಮಿತ್ರ ಎಸ್, ಕೋಶಾಧಿಕಾರಿ ಕಾವ್ಯ, ಸಂಚಾಲಕ ಅವಿನಾಶ್, ಸದಸ್ಯರಾದ ಚೈತ್ರ, ಅಮಿತಾ, ಪ್ರಮೀಳಾ, ಶಾಂತಿ ಉಪಸ್ಥಿತರಿದ್ದರು. ಗೌರವ ಸಲಹೆಗಾರರಾದ ಶಿವಶಂಕರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.