ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗಕ್ಕೆ NBA ಮಾನ್ಯತೆ

0

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (National Board of Accreditation-NBA) ಮಾನ್ಯತೆ ಸಿಕ್ಕಿರುತ್ತದೆ. NBA ಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (AICTE) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ.
ಎನ್‌ಬಿಎ ಎನ್ನುವುದು ಶೈಕ್ಷಣಿಕ ಸಂಸ್ಥೆಯು ನಿರ್ಧಿಷ್ಟ ಗುಣಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವ ಪ್ರಕ್ರಿಯೆ. ಇದರಿಂದಾಗಿ ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಸಂಖ್ಯಾ ದೃಷ್ಟಿಯಿಂದ ದಾಖಲಾತಿಯು ಸುಧಾರಿಸುತ್ತದೆ. ವಿವಿಧ ಮೂಲಗಳಿಂದ ಆದಾಯವನ್ನು ಗಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪದವೀಧರರ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ. ಬಹುರಾಷ್ಟ್ರೀಯವಾಗಿ ಗುರುತಿಸಲು ಅನುಕೂಲ ಕಲ್ಪಿಸುತ್ತದೆ. ಸಂಸ್ಥೆಯಲ್ಲಿ ಉತ್ತಮ ಮತ್ತು ಪರಿಣಾಮಕಾರಿ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಲು ನೆರವಾಗುತ್ತದೆ. AICTEಯು ನಿಗದಿಪಡಿಸಿದ ರೀತಿಯಲ್ಲಿ ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳು, ಪಾಠ ಪ್ರವಚನಗಳು, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಕ್ರೀಡಾ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ಯಾಂಪಸ್ ನೇಮಕಾತಿ, ಕ್ಯಾಂಟೀನ್ ಸೌಲಭ್ಯ, ಹಾಸ್ಟೆಲ್ ಇವೇ ಮುಂತಾದ ಹತ್ತು ಹಲವು ಸೌಲಭ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಈ ಮಾನ್ಯತೆಯನ್ನು ನೀಡಲಾಗಿದೆ.
ಎನ್‌ಬಿಎ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ, ಉದ್ಯೋಗಾವಕಾಶಕ್ಕೆ ಅಂತರ್ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಔದ್ಯೋಗಿಕ ಕಂಪೆನಿಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ.
ಐದು ಮಂದಿ ತಜ್ಞರನ್ನೊಳಗೊಂಡ NBA ತಂಡವು ಜೂನ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮೂರು ವರ್ಷಗಳ ಅವಧಿಗೆ ಈ ಮಾನ್ಯತೆಯನ್ನು ನೀಡಿದೆ. ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗಗಳಿಗೆ ಈಗಾಗಲೇ NBA ಮಾನ್ಯತೆ ಸಿಕ್ಕಿದ್ದು ಅರ್ಹ ನಾಲ್ಕೂ ವಿಭಾಗಗಳು ಮಾನ್ಯತೆ ಪಡೆದಂತಾಗಿದೆ. ಕರಾವಳಿ ಭಾಗದ ಕೆಲವೇ ಕಾಲೇಜುಗಳಿಗೆ NBA ಮಾನ್ಯತೆ ದೊರಕಿದ್ದು ಇದರಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಕೂಡಾ ಒಂದು ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here