ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್‌ನ 2023-24ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆ ಸೆ.೬ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಶಿಕ್ಷಣ ಸಂವಹನ ಜಿಲ್ಲಾ ಸಂಯೋಜಕಿ ಸುನೀತಾ ಮಾತನಾಡಿ ನರೇಗಾ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನ ಮಾಡಲಾಗುತ್ತದೆ. ನರೇಗಾ ಯೋಜನೆಯಲ್ಲಿ ದನದ ಕೊಟ್ಟಿಗೆ, ಅಡಿಕೆ ಗಿಡ, ಬಾವಿ ನಿರ್ಮಾಣ, ಜೈವಿಕ ಗೊಬ್ಬರ, ಪೌಷ್ಠಿಕ ಕೈತೋಟ, ತರಕಾರಿ ಗಿಡ, ಕೋಳಿ ಶೆಡ್ ನಿರ್ಮಾಣ, ಕೊಕ್ಕೋ ಗಿಡ, ಗೇರು ಕೃಷಿ, ಮಲ್ಲಿಗೆ, ಕಾಳುಮೆಣಸು ಕೃಷಿ, ಎರೆಹುಳು ಗೊಬ್ಬರ ಗುಂಡಿ, ಬಚ್ಚಲು ಗುಂಡಿ ನಿರ್ಮಾಣ, ಅಂತರ್ಜಲ ಗುಂಡಿ ನಿರ್ಮಾಣಕ್ಕೆ ಅವಕಾಶ ಇದೆ ಎಂದರು. ಪ್ರಸ್ತುತ ದಿನದಲ್ಲಿ ನೀರಿನ ಅಭಾವ ಇದೆ. ನೀರನ್ನು ಇಂಗಿಸುವಿಕೆಯ ಕೆಲಸ ಮಾಡಲು ಅಂತರ್ಜಲ ಗುಂಡಿ ನಿರ್ಮಿಸಿ ಎಂದರು. ದಿನ ಬಳಕೆಯ ಯಾವುದಾದರೂ ಕೆಲಸ ನಿರ್ವಹಣೆಗೆ ನರೇಗಾದಲ್ಲಿ ಹೆಚ್ಚಿನ ಅವಕಾಶ ಇದೆ ಎಂದರು.
ಕುಮ್ಕಿ ಜಾಗದಲ್ಲಿ ಕೃಷಿ ಮಾಡಲು ನರೇಗಾದಲ್ಲಿ ಅವಕಾಶ ಕೊಡಿ: ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಗೌಡ ಗುಂಡೋಳೆ ಮಾತನಾಡಿ ನರೇಗಾದಲ್ಲಿ ರೈತರು ತಮ್ಮ ಕುಮ್ಕಿ ಜಾಗದಲ್ಲಿ ಕೃಷಿ ಅಥವಾ ಇನ್ನಿತರ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು. ಇದಕ್ಕೆ ಸಂಯೋಜಕಿ ಸುನೀತಾರವರು ನರೇಗಾದ ಕೆಲಸಗಳಿಗೆ ಆರ್‌ಟಿಸಿ ಇರುವ ಜಾಗದಲ್ಲಿ ಮಾತ್ರ ಮಾಡಲು ಅವಕಾಶ ಇದೆ ಎಂದರು.
ತೋಟಕ್ಕೆ ಮಣ್ಣು ಹಾಕಲು ಅವಕಾಶ ನೀಡಿ: ನರೇಗಾ ಯೋಜನೆಯಲ್ಲಿ ಅಡಿಕೆ ತೋಟ ನಿರ್ಮಿಸಿ ಬಳಿಕ ತೋಟಕ್ಕೆ ಮಣ್ಣು ಹಾಕಲು ಅವಕಾಶ ನೀಡಬೇಕು ಎಂದು ಸದಸ್ಯರೋರ್ವರು ಹೇಳಿದರು. ಭತ್ತ ಬೇಸಾಯ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡರು.
ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಶಿಕ್ಷಣ ಸಂವಹನ ತಾಲೂಕು ಸಂಯೋಜಕ ಭರತ್‌ರಾಜ್ ಮಾತನಾಡಿ ಆರ್‌ಟಿಸಿ ಇರುವ ಜಾಗದಲ್ಲಿಯೇ ನರೇಗಾ ಕೆಲಸಗಳನ್ನು ಮಾಡಬೇಕು. ಕೃಷಿಗೆ ಸಂಬಂಧಿಸಿದ ಸೊಪ್ಪು, ತರಗೆಲೆ, ಕಟ್ಟಿಗೆ ಸಂಗ್ರಹಣೆಗೆ ಕುಮ್ಕಿ ಜಾಗವನ್ನು ಅವಲಂಬಿಸಬೇಕು. ಕುಮ್ಕಿಯಲ್ಲಿ ನರೇಗಾ ಕೆಲಸಕ್ಕೆ ಅವಕಾಶ ಇಲ್ಲ. ನಿಯಮವೇ ಇದೆ ಎಂದರು. ನರೇಗಾದಲ್ಲಿ ಕೆಲಸ ಮಾಡಿದರೆ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು. ಇದರಿಂದ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾಡಿದ ಕೆಲಸ ಹಾಗೂ ಅನುದಾನ ತಿಳಿಯುತ್ತದೆ ಎಂದರು. ರಬ್ಬರ್ ಮತ್ತು ಭತ್ತ ಕೃಷಿ ಬಿಟ್ಟು ಉಳಿದ ಕೃಷಿ ಮಾಡಲು ಅವಕಾಶವಿದೆ. ಡ್ರ್ಯಾಗನ್ ಫ್ರೂಟ್ ಮತ್ತು ರಂಬೂಟನ್ ಕೃಷಿ ಮಾಡಲು ನರೇಗಾದಲ್ಲಿ ಅವಕಾಶವಿದೆ. ನರೇಗಾದಲ್ಲಿ ಯಂತ್ರೋಪಕರಣಗಳ ಬಳಕೆಗೆ ಅವಕಾಶವಿಲ್ಲ. ಮಾನವ ಶ್ರಮದಲ್ಲಿ ಮಾತ್ರ ಕೆಲಸ ನಿರ್ವಹಿಸಬೇಕು ಎಂದರು. 2024-25ನೇ ಸಾಲಿನ ಕಾಮಗಾರಿಗಳಿಗೆ ಈಗಲೇ ಅರ್ಜಿ ಸಲ್ಲಿಸಬೇಕು. ನಿಮ್ಮ ಬೇಡಿಕೆಗಳನ್ನು ಕ್ರೂಡೀಕರಿಸಿ ಕ್ರಿಯಾ ಯೋಜನೆ ತಯಾರು ಮಾಡಿ ಕೇಂದ್ರ ಸರಕಾರದಿಂದ ಮುಂದಿನ ಬಜೆಟ್‌ನಲ್ಲಿ ಅನುದಾನ ಇಡಲಾಗುತ್ತದೆ ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಮಾತನಾಡಿ ಉದ್ಯೋಗ ಖಾತರಿ ಯೋಜನೆ ಕೃಷಿಗೆ ವರದಾನವಾಗಿದೆ.ದ.ಕ.ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಉತ್ತಮ ಕಾಮಗಾರಿಗಳು ನಡೆದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಮಾತನಾಡಿ ವಿಶೇಷ ಗ್ರಾಮಸಭೆಗೆ ಹೆಚ್ಚಿನ ಸದಸ್ಯರು ಆಗಮಿಸಬೇಕು. ನಿಮಗೆ ಆಗಬೇಕಾದ ಕೆಲಸಗಳ ಬಗ್ಗೆ ನರೇಗಾದಲ್ಲಿ ಬೇಡಿಕೆ ಇಡಬೇಕು ಎಂದರು.ಸದಸ್ಯರಾದ ಜಗನ್ನಾಥ ಶೆಟ್ಟಿ, ವಿಶ್ವನಾಥ ಕೃಷ್ಣಗಿರಿ, ಮೋಹಿನಿ, ಗೀತಾ, ಪುಷ್ಪಾ, ಉದ್ಯೋಗ ಖಾತರಿ ಯೋಜನೆಯ ಗ್ರಾಮ ತಾಂತ್ರಿಕ ಸಹಾಯಕ ಯಶೋಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ , ಕಾರ್ಯದರ್ಶಿ ಅಣ್ಣು ಪಿ. ವಂದಿಸಿದರು. ಸಿಬಂದಿಗಳಾದ ಸುರೇಶ್ ನಾಯ್ಕ ಕೆ., ಪ್ರೀತಾ, ಕಾವ್ಯ ಶೆಟ್ಟಿ ಎಮ್., ಸುರೇಶ್ ಎನ್., ಸಹಕರಿಸಿದರು. ಸಭೆಯ ಬಳಿಕ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಅಮೃತ ಅಭಿಯಾನ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.
ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಶಿಕ್ಷಣ ಸಂವಹನ ತಾಲೂಕು ಸಂಯೋಜಕ ಭರತ್‌ರಾಜ್ ಮಾತನಾಡಿ ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ಈಗಾಗಲೇ ನಡೆದಿದ್ದು ಗ್ರಾಮ ಪಂಚಾಯತ್‌ನಲ್ಲಿ ಮಳೆ ಕೊಯ್ಲು ಅಳವಡಿಸಿ ಪ್ರಯೋಜನ ಪಡೆಯುವಂತೆ ತಿಳಿಸಿದರು.