ಪುತ್ತೂರು: ಮನೋರಂಜನೆಗಳು ವಿಭಿನ್ನ ರೀತಿಯವು. ರೋಟರಿ ಯುವ ಕ್ಲಬ್ ನಿಂದ ಇದೀಗ ಮೂರನೆ ಬಾರಿ ಟ್ರೆಷರ್ ಹಂಟ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಅ.8ರಂದು ನಡೆಯುವ ಈ ಸ್ಫರ್ಧೆ ಸಂತ ಫಿಲೋಮಿನಾ ಹೈಸ್ಕೂಲ್ ಬಳಿ ಆರಂಭಗೊಂಡು ಮರೀಲು ಹೊರ ವಲಯದಲ್ಲಿರುವ ದ ಪುತ್ತೂರು ಕ್ಲಬ್ ನಲ್ಲಿ ಕೊನೆಗೊಳ್ಳಲಿದೆ.
ಕುಟುಂಬದ ಸದಸ್ಯರು ಜೊತೆಗೂಡಿ ಭಾಗವಹಿಸಬಹುದಾದ ಆಟದಲ್ಲಿ ಎರಡು ಅಥವಾ ಮೂರು ಸ್ಪರ್ಧಿಗಳು ತಮ್ಮ ಕಾರಿನಲ್ಲಿ ಪ್ರಯಾಣ ಮಾಡುತ್ತಾ ರಸ್ತೆ ನಿಯಮಗಳನ್ನು ಪಾಲಿಸುತ್ತಾ, ಪ್ರಶ್ನೆಗಳಿಗೆ ಉತ್ತರಿಸುತ್ತಾ ಆಡುವ ಆಟವೇ “ಟ್ರೆಷರ್ ಹಂಟ್”. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಕೂಡ ದೊರೆಯಲಿದೆ. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ರೋಟರಿಯಿಂದ ಪ್ರಮಾಣಪತ್ರ ಸಹ ನೀಡಲಾಗುವುದು.
ಪ್ರತಿಯೊಂದು ತಂಡಕ್ಕೂ ವಿಭಿನ್ನ ರೀತಿಯ ಪ್ರಶ್ನೆ ಪತ್ರಿಕೆಯನ್ನು ನೀಡಿ ಅದರಲ್ಲಿ ನೀಡಿರುವ ಕ್ಲೂ(ಸುಳಿವು)ಗಳನ್ನು ಗಮನಿಸಿ, ಟ್ವಿಸ್ಟ್ ಪ್ರಶ್ನೆಗಳಿಗೆ ಉತ್ತರಿಸುವುದು.ಪ್ರಾಯೋಜಕತ್ವ ನೀಡಿರುವ ಪುತ್ತೂರಿನ ವ್ಯಾಪಾರ ಮಳಿಗೆಗಳಲ್ಲಿ ಟ್ರೆಷರ್ ಅನ್ನು ಸಂಗ್ರಹಿಸುವುದು. ನೀಡಿರುವ ಗಿಫ್ಟ್ ಗಳನ್ನು ಪಡೆದುಕೊಂಡು ಕೊನೆಗೆ ಪುತ್ತೂರು ಕ್ಲಬ್ ನ್ನು ತಲುಪುವುದು. ಸ್ಪರ್ಧೆಯ ಕೊನೆಯಲ್ಲಿ ತೀರ್ಪುಗಾರರು ಪ್ರಶ್ನೆಗಳ ಸರಿ ಉತ್ತರಗಳನ್ನು ಮೌಲ್ಯಮಾಪನ ಮಾಡಿ, ಗರಿಷ್ಠ ಅಂಕಗಳನ್ನು ಪಡೆದವರಿಗೆ ಬಹುಮಾನ ಘೋಷಣೆ ಮಾಡಲಾಗುತ್ತದೆ.
ಫಿಲೋಮಿನಾ ಪ್ರೌಢಶಾಲಾ ಬಳಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಜ್ಞಾ ಆಶ್ರಮದ ಮುಖ್ಯಸ್ಥ ಅಣ್ಣಪ್ಪ ವಿ.ಎನ್ ರವರು ಕಾರ್ಯಕ್ರಮವನ್ನು ಫ್ಲ್ಯಾಗ್ ಆಫ್ ಮಾಡುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ರೋಟರಿ ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ರೋಟರಿ ಜಿಲ್ಲೆ 3181, ಇದರ ಪಬ್ಲಿಕ್ ಇಮೇಜ್ ಚೇರ್ ಮ್ಯಾನ್ ಕೆ.ವಿಶ್ವಾಸ್ ಶೆಣೈ, ರೋಟರಿ ಯುವ ನಿಕಟಪೂರ್ವ ಅಧ್ಯಕ್ಷೆ ರಾಜೇಶ್ವರಿ ಆಚಾರ್, ನಿಯೋಜಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಇವೆಂಟ್ ಚೇರ್ ಮ್ಯಾನ್ ವಿನೀತ್ ಶೆಣೈ ಉಪಸ್ಥಿತರಿದ್ದರು. ಯುವ ಅಧ್ಯಕ್ಷ ಪಶುಪತಿ ಶರ್ಮ ಇವೆಂಟ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ|ದೀಪಕ್ ವಂದಿಸಿದರು.