ಪುತ್ತೂರು: ಒಳಚರಂಡಿ ಯೋಜನೆ(ಯುಜಿಡಿ)ಅನುಷ್ಠಾನಕ್ಕೆ ನಗರಸಭೆಯ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಲ್ಲೂ ಡ್ರೋನ್ ಮೂಲಕ ಸರ್ವೆ ಮಾಡಿ ಬೇಸ್ ಮ್ಯಾಪ್ ಮಾಡುವ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಅನುಷ್ಠಾನ ಕುರಿತು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಅ.7ರಂದು ಮಧ್ಯಾಹ್ನ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಡ್ರೋನ್ ಸರ್ವೆ ಮೂಲಕ ಬೇಸ್ ಮ್ಯಾಪ್ ಮಾಡಿ ಪುತ್ತೂರು ನಗರಸಭೆ ವ್ಯಾಪ್ತಿಯ ಸಂಪೂರ್ಣ ಚಿತ್ರಣವು ಸಮರ್ಪಕವಾಗಿ ಸಿಗಲಿದೆ ಎಂದು ಐಡಿಎಫ್‌ನ ಕನ್ಸಲ್ಟೆಂಟ್ ಮಾಹಿತಿ ನೀಡಿದರು. ನಗರಸಭಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನ ಐಡಿಎಫ್‌ನ ಧರ್ಮರಾಜ್ ಮಾಹಿತಿ ನೀಡಿ, ಬೇಸ್ ಮ್ಯಾಪ್ ಇಲ್ಲದೆ ಯುಜಿಡಿ ಅಥವಾ ಬೇರೆ ಯಾವುದೇ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಡ್ರೋನ್ ಆಧಾರಿತವಾಗಿ ಈ ಸರ್ವೆ ಆಗಲಿದೆ.ಪುತ್ತೂರು ನಗರಸಭೆ 32 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು ಸರ್ವೆ ಸಂಪೂರ್ಣಕ್ಕೆ ಕನಿಷ್ಟ ಆರು ತಿಂಗಳ ಕಾಲಾವಕಾಶ ಬೇಕು.ಸರ್ವೆ, 3ಡಿ ಸೇರಿದಂತೆ ಪೂರ್ಣ ಪ್ರಕ್ರಿಯೆಗೆ ಪ್ರತಿ ಚದರ ಕಿ.ಮೀ.ಗೆ ರೂ.2.5ರಿಂದ ರೂ.3 ಲಕ್ಷ ಖರ್ಚು ಬೀಳುತ್ತದೆ. ಇದನ್ನು ಸಿಎಸ್‌ಆರ್ ಅಥವಾ ಬೇರೆ ಮೂಲಗಳಿಂದ ಭರಿಸಲು ನಗರಾಡಳಿತ ಚಿಂತನೆ ಮಾಡಬಹುದು. ಒಂದು ಸಾರಿ ಬೇಸ್ ಮ್ಯಾಪ್ ಮಾಡಿದರೆ ಮುಂದೆ ನಗರಸಭೆಯಿಂದ ಬೇರೆ ಅಭಿವೃದ್ಧಿ ಕಾಮಗಾರಿಗಳಿಗೂ ಉಪಕಾರವಾಗಲಿದೆ ಎಂದರು.
ಯುಜಿಡಿ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಿ: ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಯುಜಿಡಿ ಅನುದಾನ ಬಿಡುಗಡೆಗೆ ಸರಕಾರಕ್ಕೆ ತಕ್ಷಣ ಪ್ರಸ್ತಾವನೆ ಕಳುಹಿಸಬೇಕಿದೆ. ಕಳೆದ ಅಧಿವೇಶನದಲ್ಲಿ ಯುಜಿಡಿ ಅಗತ್ಯದ ಬಗ್ಗೆ ಮಾತನಾಡಿದ್ದೆ. ಆಗ ಪುತ್ತೂರಿನಲ್ಲಿ ಯುಜಿಡಿ ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.ಆದರೆ ನಾನು ಒತ್ತಡ ಹಾಕಿದ ಕಾರಣ ಅನುದಾನ ನೀಡುವ ಭರವಸೆ ಸಿಕ್ಕಿದೆ.ಹಾಗಾಗಿ ತುರ್ತಾಗಿ ಕ್ರಿಯಾಯೋಜನೆ ತಯಾರಿಸಿ ನೀಡಬೇಕು. ಯೋಜನೆಗೆ ಭೂಸ್ವಾಧೀನಕ್ಕೆ ಬೇಕಾದ ಅಂದಾಜು ಮೊತ್ತ ಸೇರಿಸಿಯೇ ಕ್ರಿಯಾಯೋಜನೆ ತಯಾರಿಸಬೇಕು ಎಂದು ಸೂಚಿಸಿದ ಶಾಸಕರು, ಸರ್ವೆ ಮೂಲಕ ಆಗುವ ಬೇಸ್ ಮ್ಯಾಪ್ ಕಾರ್ಯಕ್ಕೆ ಸ್ಪಾನ್ಟರ್ ಅಥವಾ ಕಂಪೆನಿಗಳಿಂದ ಅನುದಾನ ಕೇಳುವ ಬದಲು ಸರಕಾರದಿಂದಲೇ ಭರಿಸೋಣ. ಅದಕ್ಕೊಂದು ಪ್ರತ್ಯೇಕ ಎಸ್ಟಿಮೇಟ್ ಕಳುಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮಾತನಾಡಿ, ಬೇಸ್ ಸರ್ವೆ ಅತ್ಯುತ್ತಮವಾದದು.ಭೂಮಿಯ ಏರಿಳಿತ, ವಾಣಿಜ್ಯ-ಇತರೆ ಕಟ್ಟಡಗಳು, ರಸ್ತೆ ಸೇರಿದಂತೆ ನಗರದ ಸಮಗ್ರ ಮಾಹಿತಿ ದೊರೆಯಲಿದೆ.ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ಸದಸ್ಯ ಶಕ್ತಿ ಸಿನ್ಹಾ ಅವರು, ಆರಂಭದಲ್ಲಿ ಈ ಕರಿತ ಸುದೀರ್ಘವಾಗಿ ಚರ್ಚೆ ನಡೆಸಿಸಿದರೂ ಕೊನೆಗೆ ಇದು ಉತ್ತಮ ಕಾರ್ಯ ಎಂದು ಧ್ವನಿಗೂಡಿಸಿದರು. ರಿಯಾಝ್ ಪರ್ಲಡ್ಕ, ಬಾಲಚಂದ್ರ ತಮ್ಮ ಪ್ರಶ್ನೆಗಳನ್ನು ಮಂಡಿಸಿದರು. ಕೆಯುಐಡಿಎಫ್‌ಸಿಯ ಕಾರ್ಯಪಾಲಕ ಇಂಜಿನಿಯರ್ ಕುಮಾರ ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಗೂಗಲ್ ಮ್ಯಾಪ್ ಥರ ಬೇಸ್ ಮ್ಯಾಪ್ ಇರುತ್ತದೆ. ಆದರೆ ಈ ಮ್ಯಾಪ್ ನಗರದ ಸ್ಪಷ್ಟ ಚಿತ್ರಣ ತೋರಿಸುತ್ತದೆ. ಒಂದು ಕಟ್ಟಡವಿದ್ದರೆ ಆ ಕಟ್ಟಡದ ಹೆಸರು ಮತ್ತು ಕಟ್ಟಡದ ರೋಡ್ ಮಾರ್ಜಿನ್, ಅದರ ಏರಿಯ ಲೆಕ್ಕಾಚಾರ, ಪಕ್ಕಾ ಪ್ಲ್ಯಾನಿಂಗ್, ಸುತ್ತಳತೆಯನ್ನೂ ಸ್ಪಷ್ಟವಾಗಿ ತಿಳಿಸುತ್ತದೆ.ಅದಲ್ಲದೆ ಈ ಮ್ಯಾಪ್ 3ಡಿಯಲ್ಲೂ ಸಿಗುತ್ತದೆ. ಪುತ್ತೂರಿಗೆ ಯುಜಿಡಿ ಬರುವಾಗ, ಇತರ ಎಲ್ಲಾ ಕಾಮಗಾರಿಗಳಿಗೂ ಈ ಮ್ಯಾಪ್ ತುಂಬ ಪ್ರಯೋಜನಕಾರಿ. ಮಂಗಳೂರಿನಲ್ಲಿ ಈಗಾಗಲೇ ನಾವು ಈ ರೀತಿ ಬೇಸ್ ಮ್ಯಾಪ್ ಮಾಡಿದ್ದೇವೆ.
ಧರ್ಮರಾಜ್, ಐಡಿಎಫ್
ದರ್ಬೆಯಲ್ಲಿ ಪಾಥ್
ರಸ್ತೆ ಪಕ್ಕದಲ್ಲಿ ಪಾದಚಾರಿಗಳಿಗೆ ಫೂಟ್ ಪಾತ್, ಸೈಕಲ್ ಪಾತ್, ರಿಕ್ಷಾನಿಲ್ದಾಣ, ಇತರ ವಾಹನ ಪಾರ್ಕಿಂಗ್, ಟೆಂಪೊ ಪಾರ್ಕಿಂಗ್, ಬಸ್ ಬೇಗಳನ್ನು ಮಾಡಿಕೊಂಡು ಒಂದು ಮೋಡೆಲ್ ರಸ್ತೆಯನ್ನಾಗಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಲಾಖೆಯಿಂದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದರು.ಈ ಕುರಿತು ಸದಸ್ಯರು ಬೇರೆ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಸಕರು ಮಾತನಾಡಿ ಅನುದಾನ ಬರುವಾಗ ಇಂತಹ ಕಾಮಗಾರಿ ನಡೆಸಬೇಕೆಂಬ ನಿರ್ದಿಷ್ಟ ಗೈಡ್‌ಲೈನ್ ಇದೆ. ಹಾಗೆಂದು ಆ ಕಾಮಗಾರಿಯನ್ನು ಬದಲಾಯಿಸಲು ಆಗುವುದಿಲ್ಲ. ಇಲ್ಲದಿದ್ದರೆ ಅನುದಾನ ಲ್ಯಾಪ್ಸ್ ಆಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಅಶ್ವಿನಿ ಸರ್ಕಲ್‌ನಿಂದ ದರ್ಬೆ ವೃತ್ತದ ತನಕ ಮೊದಲ ಕಾಮಗಾರಿ ನಡೆಯಲಿ ಎಂದು ಹೇಳಿ ಸದಸ್ಯರ ಸಹಮತ ಯಾಚಿಸಿದರು. ಸದಸ್ಯರು ಒಪ್ಪಿಗೆ ನೀಡಿದರು.