ಡಿಸೆಂಬರ್‌ ಕೊನೆಗೆ ಜಲಸಿರಿ ಯೋಜನೆ ಕೊನೆಗೊಳ್ಳಬೇಕು – ಜಲಸಿರಿ ಪ್ರೊಜೆಕ್ಟ್‌ ಮ್ಯಾನೇಜರ್‌ ಗೆ ಶಾಸಕರ ಸೂಚನೆ

0

ಪುತ್ತೂರು: ಬೆಳೆಯುತ್ತಿರುವ ಪುತ್ತೂರು ನಗರ ವ್ಯಾಪ್ತಿಯಲ್ಲಿ ದಿನದ 24 ತಾಸು ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ 113 ಕೋಟಿ ರೂ.ವೆಚ್ಚದ `ಜಲಸಿರಿ’ ಯೋಜನೆಯನ್ನು ಡಿಸೆಂಬರ್ ಕೊನೆಯಲ್ಲಿ ಮುಗಿಸಲೇ ಬೇಕು.ಪುತ್ತೂರು ಪಟ್ಟಣದೊಳಗೆ ಕುಡಿಯುವ ನೀರಿನ ಪೈಪ್ ಮೂಲಕ ಎಲ್ಲಾ ಮನೆಗಳಿಗೂ ನೀರಿನ ಸಂಪರ್ಕ ಆಗಬೇಕೆಂದು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಜಲಸಿರಿ ಪ್ರೊಜೆಕ್ಟ್ ಮೆನೇಜರ್ ಅವರಿಗೆ ಸೂಚನೆ ನೀಡಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಜಲಸಿರಿ ನೀರಿನ ವಿಚಾರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಅ.7ರಂದು ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಲಸಿರಿ ಕಾಮಗಾರಿ ಅನುಷ್ಠಾನಕ್ಕೆ 33 ತಿಂಗಳು ನೀಡಲಾಗಿತ್ತು. ಅನಂತರ 3 ತಿಂಗಳು ಪ್ರಾಯೋಗಿಕ ಸರಬರಾಜು ನಡೆಯಲಿದೆ. 8 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲಿದೆ ಎನ್ನುವ ಒಪ್ಪಂದವಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದಿರುವ ಕುರಿತು ಶಾಸಕರು ಸದಸ್ಯರಿಂದ ಮಾಹಿತಿ ಪಡೆದುಕೊಂಡರು.ಈಗಾಗಲೇ ಗ್ರಾಮಾಂತರಕ್ಕೆ ಸಮಗ್ರ ನೀರಿನ ಯೋಜನೆಗೆ 1030 ಕೋಟಿ ರೂಪಾಯಿಯಲ್ಲಿ ಈಗಾಗಲೇ ಟೆಂಡರ್ ಆಗಿದೆ. ರೂ.760 ಕೋಟಿ ರೂಪಾಯಿಗೆ ಇನ್ನೊಂದು ಟೆಂಡರ್ ಆಗುತ್ತದೆ.ಮುಂದೆ ಕುಡಿಯುವ ನೀರಿನ ಕೊರತೆ ಆಗಬಾರದು ಎಂದು ಮಾಡಿರುವ ಯೋಜನೆ ಇನ್ನೂ ಪೂರ್ಣಗೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕರು, ಡಿಸೆಂಬರ್ ತಿಂಗಳಲ್ಲಿ ನೀರು ಕೊಡುತ್ತೀರೋ ಇಲ್ಲವೋ ಎಂದು ಜಲಸಿರಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಜಲರಿಸಿ ಕಾಮಗಾರಿ ಕೈಗೆತ್ತಿಕೊಂಡಿರುವ ಸುವೆಜ್ ಪ್ರೈವೆಟ್ ಸಂಸ್ಥೆಯ ಪ್ರೊಜೆಕ್ಟ್ ಮೆನೇಜರ್ ಪ್ರಮೋದ್ ಅವರು ಉತ್ತರಿಸಿ, ಈ ತಿಂಗಳೊಳಗೆ ಕಾಮಗಾರಿ ಕ್ಲಿಯರ್ ಆಗುತ್ತದೆ. ಡಿಸೆಂಬರ್ ತಿಂಗಳಿಂದ 8 ವರ್ಷ ನಿರ್ವಹಣೆ ಜವಾಬ್ದಾರಿ ಇದೆ ಎಂದರು.ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ 8 ವರ್ಷ ನಿರ್ವಹಣೆಯಲ್ಲಿ ಪೈಪ್ ಲೈನ್, ಓವರ್ ಟ್ಯಾಂಕ್, ಮೀಟರ್ ರೀಡಿಂಗ್ ಎಲ್ಲವನ್ನು ನೋಡುವುದು ಜಲಸಿರಿಯವರ ಜವಾಬ್ದಾರಿ ಎಂದರು.ಆಕ್ಷೇಪಿಸಿದ ಸದಸ್ಯ ಶಕ್ತಿಸಿನ್ಹ ಅವರು ಕೇವಲ ಮೀಟರ್ ರೀಡಿಂಗ್ ಮಾತ್ರವಲ್ಲ ಅದರ ಹಣವನ್ನು ಕೂಡಾ ಅವರೇ ಪಡೆಯುತ್ತಾರೆ.ಹೀಗಾದರೆ ಮುಂದೆ ನಗರಸಭೆಗೆ ನೀರಿನ ಶುಲ್ಕ ಬರುವುದಿಲ್ಲ ಎಂದರು.ನೀರಿನ ಶುಲ್ಕ ಅವರ ಕಾಮಗಾರಿಯ ಬಿಲ್‌ನ ಮೊತ್ತಕ್ಕೆ ಸೇರಲಿದೆ ಎಂದು ಪೌರಾಯುಕ್ತರು ಸ್ಪಷ್ಟನೆ ನೀಡಿದರು.ಆಕ್ಷೇಪಿಸಿದ ಶಕ್ತಿ ಸಿನ್ಹ ಅವರು, ಈ ಹಿಂದೆ ಎಡಿಬಿ ಯೋಜನೆಯಲ್ಲೂ ನಾವು ತೊಂದರೆ ಅನುಭವಿಸಿzವೆ.ಇದೀಗ ಮತ್ತೆ ಜಲಸಿರಿ ಯೋಜನೆಯ ಸಮಿತಿಯಿಂದ ಬಂದ ಅಂತಿಮ ಕಡತಕ್ಕೆ ನೀವು ಸಹಿ ಹಾಕಿದರೆ ಈ ಯೋಜನೆಯಲ್ಲೂ ಸಮಸ್ಯೆ ಉದ್ಭವಿಸಲಿದೆ ಎಂದರು.ನಾನು ಹಾಗೆಲ್ಲ ಸುಮ್ಮನೆ ಸಹಿ ಹಾಕುವುದಿಲ್ಲ.ಹಿಂದಿನ ಸರಕಾರ ಏನು ಮಾಡಿದೆಯೋ ಆ ಟಂಡರ್ ವಿಚಾರದಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ನಾಳೆ ಟೆಂಡರ್‌ದಾರರು ಕೋರ್ಟ್‌ಗೆ ಹೋದರೆ ನಮಗೆ ನೀರು ಇಲ್ಲದಾಗುತ್ತದೆ.ಹಾಗಾಗಿ ಜಲಸಿರಿಯವರು ನೀವು ಡಿಸೆಂಬರ್‌ನೊಳಗೆ ಯೋಜನೆ ಪೂರ್ಣಗೊಳಿಸಿ, ನಿರ್ವಹಣೆಯ ಬಳಿಕವೂ ಕಾಮಗಾರಿಗೆ ಪ್ರತ್ಯೇಕ ಬಿಲ್ ಕೇಳಿದರೆ ಆಗ ನೋಡಿಕೊಳ್ಳುವ ಎಂದು ಹೇಳಿ ಶಾಸಕರು ಚರ್ಚೆಗೆ ತೆರೆ ಎಳೆದರು.
ಒಂದು ದಿನ ನೆಕ್ಕಿಲಾಡಿ ವಿಸಿಟ್: ನೆಕ್ಕಿಲಾಡಿಯಲ್ಲಿ 6.8 ಎಂಎಲ್ಡಿ (68 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವಿದೆ.ಈ ಸಾಮರ್ಥ್ಯ ನಗರಕ್ಕೆ ನೀರು ಸರಬರಾಜಿಗೆ ಸಾಕಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ 8.7 ಎಂಎಲ್ಡಿ (87 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಪೂರ್ಣಗೊಂಡಿರುವ ಎಲ್ಲಾ ಕಾಮಗಾರಿಗಳ ಕುರಿತು ನಗರಸಭೆ ಸದಸ್ಯರು ಬರುವುದಾದರೆ ಒಂದು ದಿನ ನೆಕ್ಕಿಲಾಡಿ ವಿಸಿಟ್ ಮಾಡೋಣ ಎಂದು ಶಾಸಕರು ಹೇಳಿದರು.
ಮನೆಗಳಿಗೆ ಇನ್ನೂ ಪೈಪ್ ಸಂಪರ್ಕವಾಗಿಲ್ಲ: ನಗರಸಭೆಯಲ್ಲಿ ಜಲಸಿರಿ ಯೋಜನೆಯಲ್ಲಿ 158 ಕಿ.ಮೀ ಪೈಪ್‌ಲೈನ್ ಮಾಡಬೇಕಾಗಿದೆ. ಅದರಲ್ಲಿ 155 ಕಿ.ಮೀ ಪೂರ್ಣಗೊಂಡಿದೆ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಶಾಸಕರಿಗೆ ಮಾಹಿತಿ ನೀಡಿದರು.ಎಲ್ಲಾ ಮನೆಗಳಿಗೆ ಸಂಪರ್ಕ ಆಗಿದೆಯಾ ಎಂದು ಶಾಸಕರು ಪ್ರಶ್ನಿಸಿದಾಗ, ಜಲಸಿರಿ ಕಾಮಗಾರಿಗಳ ಸಮಸ್ಯೆಗಳನ್ನು ಒಂದೊಂದಾಗಿ ಸದಸ್ಯರು ಶಾಸಕರ ಮುಂದಿಟ್ಟರು. ಸದಸ್ಯ ಶಕ್ತಿ ಸಿನ್ಹಾ ಅವರು ಮಾತನಾಡಿ ನಗರದ ಹೃದಯಭಾಗದಲ್ಲೇ ಮನೆಗಳಿಗೆ ಕುಡಿಯುವ ನೀರಿನ ಪೈಪ್ ಸಂಪರ್ಕ ಅಗಿಲ್ಲ.ನನ್ನ ನೆಲ್ಲಿಕಟ್ಟೆ ವಾರ್ಡ್ ಖಾಸಗಿ ಬಸ್ ನಿಲ್ದಾಣದ ಬಳಿ 25 ಮನೆಗಳಿಗೆ ಕೇವಲ 500 ಮೀಟರ್ ಪೈಪ್ ಲೈನ್ ಹಾಕಿ ಅರ್ಧದಲ್ಲೇ ಕಾಮಗಾರಿ ಬಿಟ್ಟು ಹೋಗಿದ್ದಾರೆ. ಪ್ರಶ್ನಿಸಿದರೆ ನಿಮ್ಮ ಏರಿಯಾವನ್ನು ನಗರಸಭೆ ಕೊಟ್ಟಿಲ್ಲ ಅನ್ನುತ್ತಾರೆ. ಇದರ ಜೊತೆಗೆ ನಮ್ಮ ಮನೆಗಳಿಗೆ ಈ ಹಿಂದಿರುವ ಬೋರ್‌ವೆಲ್ ಸಂಪರ್ಕದ ಪಿವಿಎಸ್ ಪೈಪ್‌ಗೆ ಜಲಸಿರಿ ಮೀಟರ್ ಅಳವಡಿಸಿದ್ದಾರೆ ಎಂದರು.ಶೈಲಾ ಪೈ ಅವರು ಮಾತನಾಡಿ ಮುಕ್ರಂಪಾಡಿಯಲ್ಲೂ ಇದೇ ಪರಿಸ್ಥಿತಿ ಎಂದರು.ಯುಸುಫ್ ಡ್ರೀಮ್ ಅವರು ಮಾತನಾಡಿ ಸಂಜಯನಗರದಲ್ಲೂ ಇದೇ ಪರಿಸ್ಥಿತಿ ಎಂದರು.ಈ ಕುರಿತು ಶಾಸಕರು ಜಲಸಿರಿ ಯೋಜನೆ ಕಾಮಗಾರಿ ಪ್ರೊಜೆಕ್ಟ್ ಮೆನೇಜರ್ ಅವರನ್ನು ಪ್ರಶ್ನಿಸಿದರು.ನಗರಸಭೆಯ ಕೆಲವು ಕಡೆ ಕ್ಲಸ್ಟರ್ ಮಾದರಿಯಲ್ಲಿ ಮನೆಗಳಿವೆ.ಅಲ್ಲಿ ಮನೆಗಳಿದ್ದರೂ ಅಲ್ಲಿಗೆ ನಗರಸಭೆ ರಸ್ತೆಯಿಲ್ಲ.ಪೈಪ್ ಲೈನ್ ಮಾಡಲು ಹೋದಾಗ ಅಲ್ಲಿ ಖಾಸಗಿ ರಸ್ತೆಯಲ್ಲಿ ಅವಕಾಶ ಕೊಡುತ್ತಿಲ್ಲ.ಇದರೊಂದಿಗೆ ಕೆಲವು ಕಡೆ ಹೆಚ್ಚುವರಿ 25 ಕಿ.ಮೀ ಪೈಪ್‌ಲೈನ್ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪ್ರೊಜೆಕ್ಟ್ ಮ್ಯಾನೇಜರ್ ಉತ್ತರಿಸಿದರು. ಶಾಸಕರು ಮಾತನಾಡಿ, ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ನಿಮ್ಮ ಅನುದಾನದಲ್ಲೇ ಮುಗಿಸಬೇಕು.ಅದಕ್ಕೆ ಪ್ರತ್ಯೇಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಬಾರದು ಎಂದು ಜಲರಿಸಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರಸಭೆ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(ಕೆಯುಐಡಿಎಫ್‌ಸಿ)ದ ಕಾರ್ಯಪಾಲಕ ಇಂಜಿನಿಯರ್ ಕುಮಾರ ಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾಂತೇಶ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಮೀಸಲಾತಿಗೆ ಮನವಿ
ನಗರಸಭೆ ಆಡಳಿತವಿಲ್ಲದೆ 6 ತಿಂಗಳಾಗಿದೆ.ಈ ನಿಟ್ಟಿನಲ್ಲಿ ಮೀಸಲಾತಿಯನ್ನು ಆದಷ್ಟು ಬೇಗ ಮಾಡಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮನವಿ ಮಾಡಿದರು.ಗೌರಿ ಬನ್ನೂರು ಧ್ವನಿಗೂಡಿಸಿದರು.ನಗರಸಭೆಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಆಗುತ್ತಿದೆ.ರಸ್ತೆ ಬದಿಯ ಪೊದೆಯ ಕಟಾವಿಗೂ ಅನುಮತಿ ಸಿಕ್ಕಿಲ್ಲ ಎಂದು ಇತರ ಸದಸ್ಯರು ಪ್ರಸ್ತಾಪಿಸಿದರು.ಉತ್ತರಿಸಿದ ಶಾಸಕರು, ರಸ್ತೆ ಬದಿಯ ಪೊದೆಗಳ ತೆರವು ಕಾರ್ಯಕ್ಕೆ ಒಂದು ವಾರದೊಳಗೆ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ಸದಸ್ಯ ಸುಂದರ ಪೂಜಾರಿ ಬಡಾವು ಅವರು ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಕುರಿತು ಪ್ರಸ್ತಾಪಿಸಿದರು. ಉತ್ತರಿಸಿದ ಶಾಸಕರು ಹೊಸ ಸರಕಾರ ಬಂದು ಮೂರು ತಿಂಗಳಾಯಿತು. ನೀವು ಅದು ಬೇಕು. ಇದು ಬೇಕೆಂದು ಹೇಳಿದರೆ ಎಲ್ಲವನ್ನೂ ಮಾಡುವ, ಆದರೆ ಮೊದಲು ನೀರಿನ ಸಮಸ್ಯೆ ಬಗೆಹರಿಸುವ ಎಂದರು.

ನೀರಿನ ಶುಲ್ಕ ಏರಿಕೆ ಅಗುವ ಮುನಸೂಚನೆ
ನಗರಸಭೆಯ ತಿಂಗಳ ನೀರಿನ ಶುಲ್ಕ ಕೇವಲ 20 ಸಾವಿರ ಬಂದರೆ ಅದರ ನಿರ್ವಹಣೆಗೆ ಅದಕ್ಕಿಂತ ಹೆಚ್ಚು ಖರ್ಚಾಗಿರುವುದರಿಂದ ಅದನ್ನು ಹೇಗೆ ಭರಿಸುವುದುಎಂದು ಸದಸ್ಯ ರಿಯಾಜ್ ಪರ್ಲಡ್ಕ ಪ್ರಸ್ತಾಪಿಸಿದರು.ನೀರಿನ ಸೌಲಭ್ಯ ಹೆಚ್ಚಾದಂತೆ ನೀರಿನ ಶುಲ್ಕದಲ್ಲೂ ಪರಿಷ್ಕರಣೆ ಆಗುವುದು ಸಹಜ ಎಂದು ಶಾಸಕರು ಹೇಳಿದರು. ಡಿಸೆಆಗ ನಮಗೂ ಸಮಸ್ಯೆ ಬರಬಹುದು ಎಂದು ಸದಸ್ಯರು ಹೇಳಿದರು.ಮುಂದಿನ ದಿನ ಜಲಸಿರಿ ಕಾಮಗಾರಿ ಪೂರ್ಣ ಅನುಷ್ಟಾನದ ಬಳಿಕ ನೀರಿನ ಶುಲ್ಕ ಏರಿಕೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

LEAVE A REPLY

Please enter your comment!
Please enter your name here