ವಕೀಲರಿಗೆ ದುಬೈನಿಂದ ಕರೆ ಮಾಡಿ ರೂ.25ಲಕ್ಷಕ್ಕೆ ಬೇಡಿಕೆ, ಕೊಲೆ ಬೆದರಿಕೆ

0

ಪುತ್ತೂರು: ಪುತ್ತೂರಿನ ವಕೀಲರೊಬ್ಬರ ಮೊಬೈಲ್‌ಗೆ ದುಬೈನಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ರೂ.25 ಲಕ್ಷಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆಯೊಡ್ಡಿರುವ ಕುರಿತು ನ್ಯಾಯಾಲಯದ ಆದೇಶದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ.2ರಂದು ರಾತ್ರಿ ಕರೆ ಮಾಡಿದ ವ್ಯಕ್ತಿಯೊಬ್ಬ, ಆತನನ್ನು ಭೂಗತ ಮಾಫಿಯಾದ ಜಗ್ಗು ಶೆಟ್ಟಿ ಯಾನೆ ಜಗದೀಶ್ ಶೆಟ್ಟಿ ಎಂದು ಪರಿಚಯಿಸಿಕೊಂಡು ನಾನು ಕಳುಹಿಸುವ ರೌಡಿ ಗ್ಯಾಂಗ್‌ನ ಸದಸ್ಯರಿಗೆ ರೂ.25ಲಕ್ಷ ನೀಡಬೇಕು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಇಲ್ಲಿನ ಪುತ್ತೂರು ಸೆಂಟರ್‌ನಲ್ಲಿ ಕಚೇರಿ ಹೊಂದಿರುವ ವಕೀಲ ಪ್ರಶಾಂತ್ ಪಿ ರೈ ಅವರು ಪುತ್ತೂರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ಕರೆ ಮಾಡಿದ ಅಪರಿಚಿತ ವ್ಯಕ್ತಿ ‘ನೀನು ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ತುಂಬಾ ಹಣ ಗಳಿಸಿದ್ದೀಯಾ, ಆ ಹಣದಿಂದ ಜಮೀನು, ಕಟ್ಟಡಗಳು ಹಾಗೂ ಇತರ ಸ್ವತ್ತುಗಳನ್ನು ಹೊಂದಿದ್ದಿಯಾ’ ಎಂದು ಪ್ರಶ್ನಿಸಿದ್ದ. ಇದೆಲ್ಲ ನಿನಗ್ಯಾಕೆ ಎಂದು ಕೇಳಿದಾಗ ಆತ ರೂ. 25ಲಕ್ಷ ನೀಡುವಂತೆ ಬೇಡಿಕೆಯಿಟ್ಟು ಬೆದರಿಕೆಯೊಡಿದ್ದ. ಇದಾದ ಬಳಿಕ ಜು.6ರಂದು ಸಂಜೆ ನಾನು ಕಕ್ಷಿದಾರರೊಂದಿಗೆ ನ್ಯಾಯಾಲಯಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಬಳಿಗೆ ಬಂದು ‘ನಮ್ಮನ್ನು ಬಾಸ್ ಜಗ್ಗು ಶೆಟ್ಟಿ ಕಳುಹಿಸಿದ್ದಾರೆ. ನಮಗೆ ರೂ. 25ಲಕ್ಷ ನೀಡದಿದ್ದಲ್ಲಿ ನಿಮ್ಮನ್ನು ಕೊಲೆ ಮಾಡಲು ಬಾಸ್ ಆದೇಶ ನೀಡಿದ್ದಾರೆ’ ಎಂದು ಬೆದರಿಕೆಯೊಡ್ಡಿ ಕಣ್ಮರೆಯಾಗಿದ್ದರು. ಆಗಸ್ಟ್ ತಿಂಗಳಲ್ಲಿಯೂ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ನನ್ನ ಕಚೇರಿಯ ಬಳಿ ಸುತ್ತಾಡುವುದು ಕಂಡು ಬಂದಿದೆ ಎಂದು ಪ್ರಶಾಂತ್ ರೈ ಅವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here