ಪುತ್ತೂರು:ರಾಜ್ಯ ರಾಜಧಾನಿ ಬೆಂಗಳೂರು ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಬೆಂಗಳೂರು ಕಂಬಳ’ಕ್ಕೆ ಕರೆ ಮುಹೂರ್ತ ಅ.11ರಂದು ಬೆಳಿಗ್ಗೆ ನಡೆಯಲಿದೆ. ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ, ಕಂಬಳದ ಉಳಿವಿಗಾಗಿ ಸುಪ್ರೀಂ ಕೋರ್ಟ್ ತನಕ ಕಾನೂನು ಹೋರಾಟ ಮಾಡಿ ಯಶಸ್ವಿಯಾಗಿರುವ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆಬೆಂಗಳೂರು ಕಂಬಳ’ ನಡೆಯಲಿದೆ.
ಕಂಬಳಕ್ಕೆ ಕರೆ ಮುಹೂರ್ತ ಅ.11ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ ಬೆಳ್ಳಿಪ್ಪಾಡಿ, ಮುರಳೀಧರ್ ರೈ ಮಠಂತಬೆಟ್ಟು ಸಹಿತಿ ಕಂಬಳ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕರೆ ಮುಹೂರ್ತ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.ಡಿ.ಕೆ.ಶಿವಕುಮಾರ್ ಅವರು ಪೂರಕವಾಗಿ ಸ್ಪಂದಿಸಿದರು.
ನ.25,26ರಂದು ಬೆಂಗಳೂರು ಕಂಬಳ ನಡೆಯಲಿದ್ದು ಈಗಾಗಲೇ 75 ಜೋಡಿ ಕೋಣಗಳು ಭಾಗವಹಿಸುವ ಕುರಿತು ಮಾಲಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.ಇನ್ನಷ್ಟು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.ಬೆಂಗಳೂರು ಕಂಬಳವನ್ನು ದೇಶ ವಿದೇಶದ ಲಕ್ಷಾಂತರ ಮಂದಿ ವೀಕ್ಷಿಸಲಿದ್ದಾರೆ.