ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಸಂತಡ್ಕ ಹಾಗೂ ಜನವಸತಿ ಪ್ರದೇಶ ಸೇರಿದಂತೆ ಸುತ್ತಲೂ ಹತ್ತಾರು ಕಾಡುಕೋಣಗಳ ಹಿಂಡು ಕಂಡುಬಂದಿದ್ದು ಗ್ರಾಮಸ್ಥರು ಭಯಗೊಂಡಿದ್ದಾರೆ.ಅಸಂತಡ್ಕದಲ್ಲಿ ಅ.11ರಂದು ಈ ಕಾಡುಕೋಣಗಳ ಹಿಂಡು ಕಂಡು ಬಂದಿದ್ದು ,ಕಳೆದ ವರ್ಷವೂ ಈ ಪ್ರದೇಶದಲ್ಲಿ ಮತ್ತು ಪಾಲ್ತಾಡಿಯ ಬಂಬಿಲ ,ಅಂಕತಡ್ಕ ಪ್ರದೇಶದಲ್ಲಿ ಕಂಡು ಬಂದಿತ್ತು.
ಚಿರತೆಯ ಭೀತಿಯ ನಡುವೆ ಕಾಡುಕೋಣಗಳ ಆತಂಕ
ಕೆಯ್ಯೂರು ಗ್ರಾಮದ ಕಣಿಯಾರು ಮಲೆಯಲ್ಲಿ ದನವನ್ನು ಕೊಂದು ರಬ್ಬರ್ ಮರದಲ್ಲಿಟ್ಟ ಘಟನೆಯಿಂದ ಆತಂಕದಲ್ಲಿರುವ ಜನತೆಗೆ ಕೆಯ್ಯೂರು ಗ್ರಾಮದ ಪಕ್ಕದಲ್ಲೇ ಇರುವ ಪಾಲ್ತಾಡಿ ಗ್ರಾಮದ ಅಸಂತಡ್ಕ ಪ್ರದೇಶದಲ್ಲಿ ಕಾಡುಕೋಣಗಳ ಹಿಂಡಿನ ಸಂಚಾರ ಆತಂಕವನ್ನು ಹೆಚ್ಚಿಸಿದೆ.
ಆತಂಕ
ಕಾಡು ಕೋಣಗಳು ಹಾಡುಹಗಲೇ ಜನವಸತಿ ಪ್ರದೇಶ ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದು ,ಜನರಲ್ಲಿ ಆತಂಕ ಹೆಚ್ಚಿಸಿದೆ.ಕೂಡಲೇ ಅರಣ್ಯ ಇಲಾಖೆಯವರು ಕಾಡುಕೋಣಗಳ ಹಿಂಡನ್ನು ಜನವಸತಿ ಪ್ರದೇಶದಿಂದ ರಕ್ಷಿತಾರಣ್ಯಕ್ಕೆ ಸೇರುವಂತೆ ಮಾಡಬೇಕಿದೆ.