ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದೇವರ ಆಭರಣ ನಾಪತ್ತೆ: ಪೊಲೀಸ್ ದೂರು

0

ಉಪ್ಪಿನಂಗಡಿ: ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವುದು ಅ.15ರಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್. ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.


ಕಳೆದ ಡಿಸೆಂಬರ್‌ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಮಯದಲ್ಲಿ ದೇವರಿಗೆ ಭಕ್ತಾದಿಯೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ ಮಾಲೆಯನ್ನು ಸಮರ್ಪಿಸಿದ್ದರು. ಅದು ಮತ್ತು ಎರಡು ಪವನಿನ ಚಿನ್ನದ ಸರ ನಾಪತ್ತೆಯಾಗಿದೆ. ಸರಕಾರ ದೇವಾಲಯಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ್ದು, ಅಧಿಕಾರ ಸ್ವೀಕರಿಸಿದ ಅವರು ಅ.15ರಂದು ಭಕ್ತಾದಿಗಳ ಸಮ್ಮುಖದಲ್ಲಿ ಮಹಜರು ನಡೆಸಿದಾಗ ಚಿನ್ನದ ಸರಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.


ಚಿನ್ನದ ಸರಗಳು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿರುವ ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಅವರು ಕಬ್ಬಿಣದ ಕಪಾಟನ್ನು ದೇವಾಲಯದ ಕಾರ್ಯಾಲಯದಿಂದ ಕಳ್ಳತನ ಮಾಡಿ ಅದನ್ನು ಒಡೆದು ಅದರಲ್ಲಿದ್ದ ದಾಖಲೆಪತ್ರಗಳನ್ನು ನಾಶ ಮಾಡಲಾಗಿದ್ದು, ಆ ಖಾಲಿ ಕಪಾಟು ಭದ್ರತಾ ಕೊಠಡಿಯಲ್ಲಿರುವುದು ಇಂದು ಕಂಡು ಬಂದಿರುತ್ತದೆ. ಭದ್ರತಾ ಕೊಠಡಿಯ ಕೀಲಿಕೈಯನ್ನು ಅನಧಿಕೃತವಾಗಿ ಹುಟ್ಟು ಹಾಕಿದ ಖಾಸಗಿ ಟ್ರಸ್ಟ್ ಮತ್ತು ಅದಕ್ಕೆ ಪೂರಕವಾದ ಸಮಿತಿಗೆ ದೇವಾಲಯದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಟಸ್ಟ್‌ನ ಅಧ್ಯಕ್ಷ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಪಡ್ನೂರು ಗ್ರಾಮದ ಅವಿನಾಶ್ ಜೈನ್ ಪರಂಗಾಜೆ ಇವರುಗಳು ಹಾಗೂ ಇದಕ್ಕೆ ಪೂರಕವಾದ ಸಮಿತಿಯ ಸದಸ್ಯರು ಇದಕ್ಕೆ ಕಾರಣಕರ್ತರಾಗಿದ್ದು, ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಎಲ್ಲಾ ಭಕ್ತಾದಿಗಳ ಕೂಡುವಿಕೆಯೊಂದಿಗೆ ನಮ್ಮ ದೇವಾಲಯದ ಬ್ರಹಕಲಶಾಭಿಷೇಕ ನಡೆದಿದೆ. ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷರಾಗಿ ರೋಹಿತಾಕ್ಷ ಬಾಣಬೆಟ್ಟು ಹಾಗೂ ಕಾರ್ಯದರ್ಶಿಯಾಗಿ ನಾನಿದ್ದೆ. ಮಹಾಸಭೆ ಕರೆದು ಮುಂದೆ ನೂತನ ಸಮಿತಿಯನ್ನು ರಚಿಸುವ ಆಲೋಚನೆಯಲ್ಲಿ ನಾವಿದ್ದೆವು. ಆದರೆ ಮಹಾಸಭೆ, ಲೆಕ್ಕಪತ್ರ ಪರಿಶೀಲನೆ ಆಗದ ಹೊರತಾಗಿಯೂ ಆಗ ಅಧ್ಯಕ್ಷರಾಗಿದ್ದ ರೋಹಿತಾಕ್ಷ ಬಾಣಬೆಟ್ಟು ಹಾಗೂ ಇತರರು ಸೇರಿಕೊಂಡು ಅವರಿಗೆ ಬೇಕಾದವರನ್ನು ಮಾತ್ರ ಸೇರಿಸಿ, ಅವರಷ್ಟಕ್ಕೆ ನೂತನ ಸಮಿತಿಯನ್ನು ರಚಿಸಿದರು. ಮತ್ತೆ ಫ್ಯಾಮಿಲಿ ಟ್ರಸ್ಟ್‌ವೊಂದು ರಚನೆಯಾಯಿತು. ಭದ್ರತಾ ಕೊಠಡಿ, ಅಡುಗೆ ಕೋಣೆ, ಕಾರ್ಯಾಲಯ ಸೇರಿದಂತೆ ಎಲ್ಲ ಕೀ ಗಳು ಅಧ್ಯಕ್ಷರ ವಶದಲ್ಲಿತ್ತು. ಈ ಎಲ್ಲಾ ಬೆಳವಣಿಗೆಗಳು ನಡೆದಾಗ ನಾವು ಇಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದೆವು. ಆ ಪ್ರಕಾರ ದೇವಾಲಯಕ್ಕೆ ಸರಕಾರ ಆಡಳಿತಾಧಿಕಾರಿಯವರನ್ನು ನೇಮಿಸಿದ್ದು, ಅವರು ಅವರಿಂದ ದೇವಸ್ಥಾನಕ್ಕೆ ಸಂಬಂಧಪಟ್ಟ ಬೀಗದ ಕೀಗಳನ್ನು ವಶಕ್ಕೆ ಪಡೆದು ಭಕ್ತಾದಿಗಳ ಸಮ್ಮುಖದಲ್ಲಿ ದೇವಾಲಯದ ಸೊತ್ತುಗಳನ್ನು ಮಹಜರು ನಡೆಸಿದಾಗ ಚಿನ್ನದ ಸರಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಗೋಪಾಲ ಶೆಟ್ಟಿ ಎನ್.
ಮಾಜಿ ಕಾರ್ಯದರ್ಶಿ,
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದೇಂತಡ್ಕ- ಕಳೆಂಜ

LEAVE A REPLY

Please enter your comment!
Please enter your name here