ಮಕ್ಕಳಿಗೆ ನಾಡು ನುಡಿ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ – ಉಮೇಶ್ ನಾಯಕ್
ಪುತ್ತೂರು: ನಮ್ಮ ಮಕ್ಕಳು ನಾಡು ನುಡಿ ಸಂಸ್ಕೃತಿಯ ಹರಿಕಾರರಾಗಬೇಕಾದರೆ ಕಲಿಕೆಯೊಂದಿಗೆ ಅವರಿಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಬೇಕು.ಈ ನಿಟ್ಟಿನಲ್ಲಿ ಯುವ ಕಲಾವಿದೆ ದೀಪಶ್ರೀ ಪುತ್ತೂರು ಇವರ ಕಾರ್ಯ ಶ್ಲಾಘನೀಯ. ಎಂದು ರೋಟರಿ ಕ್ಲಬ್ ಪುತ್ತೂರು ಯುವ, ಇನ್ನರ್ ವೀಲ್ ಕ್ಲಬ್ ಪುತ್ತೂರು ಮತ್ತು ದೀಪ್ಸ್ ಆರ್ಟ್ ಹಬ್ ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ರೋಟರಿ ಕ್ಲಬ್ ನ ಮನಿಷಾ ಸಭಾಂಗಣದಲ್ಲಿ ಜರಗುತ್ತಿರುವ, ಐದು ದಿನಗಳ ಉತ್ಕರ್ಷಣ-23, ದಸರಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಪುತ್ತೂರು ತಾ/ಕ.ಸಾ.ಪ.ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಾ. ಅದ್ವೈತ್ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ನನಗೆ ಪ್ರಥಮಬಾರಿಗೆ ವೇದಿಕೆ ಹತ್ತಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಮಾತನಾಡಿ ಎಲ್ಲರ ಅಭಿಮಾನಕ್ಕೆ ಪಾತ್ರರಾದರು.
ಪುತ್ತೂರು ಇನ್ನರ್ ವೀಲ್ ಕ್ಲಬ್ಬಿನ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಂದು ಎಲ್ಲರೂ ಮೊಬೈಲ್ ಪ್ರೇಮಿಗಳಾಗಿ ಓದುವ ಬರೆಯುವ ಹವ್ಯಾಸಗಳಿಂದ ವಿಮುಖರಾಗುತ್ತಿರುವುದು ತುಂಬಾ ಶೋಚನೀಯ.ಇಂತಹ ಕಾಲಘಟ್ಟದಲ್ಲಿ ಉತ್ಕರ್ಷಣದಂಥ ಶಿಬಿರ ಹಮ್ಮಿಕೊಂಡಿರುವುದು,ಅದೂ ನವರಾತ್ರಿಯ ಶುಭಾರಂಭದೊಂದಿಗೆ ನಡೆಯುತ್ತಿರುವುದು ಯೋಗಾಯೋಗ.ದೀಪಶ್ರೀಯವರ ಈ ಸಂಘಟನಾ ಕಾರ್ಯಕ್ಕೆ ಅಭಿನಂದನೆಗಳು ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ರೋಟರೀ ಕ್ಲಬ್ ಯುವ ಅಧ್ಯಕ್ಷ ಪಶುಪತಿ ಶರ್ಮ, ಸುದ್ದಿ ಬಿಡುಗಡೆ ಪ್ರತಿಭಾರಂಗದ ನಿರ್ವಾಹಕ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ, ನ್ಯಾಯವಾದಿ ಸಂಜಯ್ ಪುತ್ತೂರು ಸಂದರ್ಭೋಚಿತವಾಗಿ ಮಾತನಾಡಿ ಶಿಬಿರಕ್ಕೆ ಶುಭಹಾರೈಸಿದರು. ಪುತ್ತೂರು ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಶ್ರೀದೇವಿ ರೈ ಪುತ್ತೂರು ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಶಿಬಿರದ ಸಂಘಟಕಿ ಕು.ದೀಪಶ್ರೀ ಶಿಬಿರದ ಉದ್ದೇಶ, ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರನ್ನೂ ನೆನಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕಿ ಶ್ರೀಮತಿ ಶ್ವೇತಾ ಎನ್.ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಉತ್ಕರ್ಷಣ ಶಿಬಿರದ ಮೊದಲ ಅವಧಿಯಲ್ಲಿ ಪ್ರಣವ್ ಭಟ್ ಪುತ್ತೂರು ಶಿಬಿರಾರ್ಥಿಗಳಿಗೆ ತಂದೆ ತಾಯಿಯ ಮಹತ್ವ, ಅಜ್ಜಿ ಕಥೆಯ ಮಹತ್ವ ಪರಸ್ಪರ ಮಾತುಕತೆ ವಿಚಾರ- ವಿನಿಮಯ ನಡೆಸಿದರು. ಮಧ್ಯಾಹ್ನ ಉಪಾಹಾರದ ನಂತರ ಮೊದಲ ಅವಧಿಯಲ್ಲಿ ಕುಮಾರಿ ದೀಪಶ್ರೀ ಅವರು ಕೆಲವು ಚಟುವಟಿಕೆಗಳನ್ನು ನಡೆಸಿಕೊಟ್ಟರು. ವಿಜೇತರಾದವರನ್ನು ಅಭಿನಂದಿಸಲಾಯಿತು. ಮಹೇಶ್ ಹಿರೇಮನಿ, ಚಿತ್ರಕಲೆ ತರಬೇತಿ ನೀಡಿದರು.