ಸೀತಾರಾಮ ರೈಯವರ ಬದುಕೇ ಆದರ್ಶ-ಒಡಿಯೂರು ಶ್ರೀ
ಪುತ್ತೂರು: ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ಬದುಕೇ ಆದರ್ಶವಾಗಿದ್ದು, ಅವರಲ್ಲಿ ಇರುವ ಕರ್ತವ್ಯ ಪ್ರಜ್ಞೆ, ನಾಯಕತ್ವ ಗುಣ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು, ಇವರ ಜೀವನ ಕ್ರಮ ಸಮಾಜದ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಿದೆ ಎಂದು ಶ್ರೀ ಕ್ಷೇತ್ರ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಅ.15 ರಂದು ಸವಣೂರಿನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಸಂಕೀರ್ಣಕ್ಕೆ ಶಂಕು ಸ್ಥಾಪನೆಗೈದು, ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿ, ಸಮಾಜದಲ್ಲಿ ಸರ್ವರಿಂದಲೂ ಗೌರವಕ್ಕೆ ಪಾತ್ರರಾಗಿರುವ ಸೀತಾರಾಮ ರೈಯವರು ಗ್ರಾಮೀಣ ಪ್ರದೇಶವಾಗಿರುವ ಸವಣೂರಿನಲ್ಲಿ ಆದರ್ಶ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿಯನ್ನು ತೆರೆಯಲು ಮನಸ್ಸು ಮಾಡಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಇದು ಅವರ ಊರು ಸವಣೂರಿನ ಮೇಲೆ ಇಟ್ಟಿರುವ ಪ್ರೀತಿಯ ಸಂಕೇತವಾಗಿದೆ. ಆದರ್ಶ ಸಹಕಾರ ಸಂಸ್ಥೆಯು ಸಹಕಾರ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಮಾಡಿದ್ದು, ಇದರ ಕೇಂದ್ರ ಕಚೇರಿ ಕಟ್ಟಡ ಅತ್ಯಂತ ಶೀಘ್ರವಾಗಿ ನಿರ್ಮಾಣಗೊಂಡು ಉದ್ಘಾಟನೆಯಾಗಲಿ ಎಂದು ಒಡಿಯೂರು ಶ್ರೀ ಹಾರೈಸಿದರು.
ಸಹಕಾರ ಕ್ಷೇತ್ರ ಪವಿತ್ರ ಕ್ಷೇತ್ರ- ಭಾಗೀರಥಿ: ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ, ಸವಣೂರಿನ ಸುಂದರವಾದ ಈ ಪರಿಸರದಲ್ಲಿ ಸೀತಾರಾಮ ರೈಯವರು ಆದರ್ಶ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣದ ನಿರ್ಮಾಣಕ್ಕೆ ಹೊರಟಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಆದರ್ಶ ಸಹಕಾರ ಸಂಸ್ಥೆಯ ಮೂಲಕ ಜನರಿಗೆ ಒಳ್ಳೆಯ ಸೇವೆ ದೊರೆಯುತ್ತಿದ್ದು, ಸಹಕಾರ ಕ್ಷೇತ್ರ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಸೀತಾರಾಮ ರೈಯವರ ಸಹಕಾರ ಕ್ಷೇತ್ರದ ಸಾಧನೆಯು ಸಮಾಜಕ್ಕೆ ಗೌರವ ತಂದಿದೆ ಎಂದು ಹೇಳಿ, ಹೊಸ ಕಟ್ಟಡ ಆದಷ್ಟು ಶೀಘ್ರ ಲೋಕಾರ್ಪಣೆಯಾಗಲಿ ಎಂದು ಹೇಳಿ ಶುಭಹಾರೈಸಿದರು.
ಸೇವಾ ಕಾರ್ಯ ಪ್ರಶಂಸನೀಯ- ಶಶಿಕುಮಾರ್ ರೈ: ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ಸೀತಾರಾಮ ರೈಯವರು 25 ವರ್ಷಗಳ ಹಿಂದೆ ಹಳ್ಳಿ ಪ್ರದೇಶವಾಗಿದ್ದ ಸವಣೂರಿನಲ್ಲಿ ಪದ್ಮಾಂಭಾ ಕಾಂಪ್ಲೆಕ್ಸ್ ಮತ್ತು ವಿದ್ಯಾರಶ್ಮಿ ವಿದ್ಯಾಲಯವನ್ನು ಸ್ಥಾಪಿಸಿ, ಸಾರ್ವಜನಿಕರ ಪ್ರೀತಿ-ವಿಶ್ವಾಸವನ್ನು ಸಂಪಾದಿಸಿದರು. ಸತತ ಸಾಧನೆಯ ಮೂಲಕ ಸೀತಾರಾಮ ರೈಯವರು ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡುವುದರ ಜೊತೆಗೆ ತಮ್ಮದೇ ಆದ ಆದರ್ಶ ಸಹಕಾರ ಸಂಸ್ಥೆಯನ್ನು ಜಿಲ್ಲೆಯಾದ್ಯಂತ ಕಟ್ಟಿ ಸುದೃಢವಾಗಿ ಬೆಳೆಸಿದ್ದಾರೆ. ಯುವ ಪೀಳಿಗೆಗೆ ಉದ್ಯೋಗದಾತರಾಗಿ ಸೀತಾರಾಮ ರೈ ಮಾಡಿರುವ ಸೇವಾಕಾರ್ಯವನ್ನು ಪ್ರಶಂಸಿಸಬೇಕು ಎಂದು ಹೇಳಿದರು.
ಸವಣೂರಿನ ಅಭಿವೃದ್ಧಿಗೆ ಪೂರಕ- ಭವಾನಿಶಂಕರ್: ಕಡಬ ತಾ.ಪಂ. ಕಾರ್ಯನಿರ್ವಾಹಕ ಅಽಕಾರಿ ಭವಾನಿಶಂಕರ್ರವರು ಮಾತನಾಡಿ, ಆದರ್ಶ ಸಹಕಾರ ಸಂಸ್ಥೆಯು 13 ಶಾಖೆಗಳನ್ನು ಹೊಂದಿರುವುದು ತುಂಬಾ ಸಂತೋಷವಾಗಿದ್ದು, ಸವಣೂರಿನ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಸೀತಾರಾಮ ರೈಯವರು ಕೈಗೊಂಡಿರುವ ಎಲ್ಲಾ ಕೆಲಸಗಳು ಯಶಸ್ಸುಗೊಂಡಿದೆ ಎಂದು ಹೇಳಿದರು.
ಹೆಸರನ್ನು ಪಡೆಯಲಿ- ಸುಂದರಿ: ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಿ.ಎಸ್.ರವರು ಮಾತನಾಡಿ, ಆದರ್ಶ ಸಹಕಾರ ಸಂಸ್ಥೆಯು ಮತ್ತಷ್ಟು ಹೆಸರನ್ನು ಪಡೆಯಲಿ ಎಂದು ಹೇಳಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಕಸ್ತೂರಿಕಲಾ ಎಸ್ ರೈ ಸವಣೂರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ ಮತ್ತು ರಶ್ಮಿ ಆಶ್ವಿನ್ ಶೆಟ್ಟಿ ದಂಪತಿ ಒಡಿಯೂರು ಶ್ರೀಗಳನ್ನು ಗೌರವಿಸಿದರು.
ಸನ್ಮಾನ: ಸವಣೂರು ಗ್ರಾ.ಪಂ.ಗೆ ಗಾಂಽ ಗ್ರಾಮ ಪುರಸ್ಕಾರ ಹಾಗೂ ಕೋಟ ಡಾ| ಶಿವರಾಮ ಕಾರಂತ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್, ನಿಕಟಪೂರ್ವಾಧ್ಯಕ್ಷೆ ರಾಜೀವಿ ವಿ. ಶೆಟ್ಟಿ ಹಾಗೂ ಲೆಕ್ಕಸಹಾಯಕ ಮನ್ಮಥ ಅಜಿರಂಗಳರವರನ್ನು ಆದರ್ಶ ಸಹಕಾರ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಪ್ರಬಂಧಕ ವಸಂತ್ ಜಾಲಾಡಿ ವಂದಿಸಿದರು. ಸಂಸ್ಥೆಯ ಉದ್ಯೋಗಿ ಪ್ರಜ್ಞಾಶ್ರೀ ಪ್ರಾರ್ಥನೆಗೈದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಽಕಾರಿ ಚಂದ್ರಶೇಖರ್ ಪಿ. ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರಾದ ಮಹಾಬಲ ರೈ ಬೊಳಂತೂರು, ಜಯಪ್ರಕಾಶ್ ರೈ ಚೊಕ್ಕಾಡಿ, ಆಶ್ವಿನ್ ಎಲ್ ಶೆಟ್ಟಿ, ಎಂ.ಎಸ್. ಬಾಪು ಸಾಹೇಬ್ ಸುಳ್ಯ, ರವೀಂದ್ರನಾಥ ಶೆಟ್ಟಿ ಕೇನ್ಯ, ರಾಮಯ್ಯ ರೈ ತಿಂಗಳಾಡಿ, ಚಿಕ್ಕಪ್ಪ ನಾಕ್ ಅರಿಯಡ್ಕ, ವಿ.ವಿ.ನಾರಾಯಣ ಭಟ್, ಜೈರಾಜ್ ಭಂಡಾರಿ ನೊಣಾಲು, ಮಹಾದೇವ ಮಂಗಳೂರು, ಪೂರ್ಣಿಮಾ ಎಸ್.ಆಳ್ವ, ಯಮುನಾ ಎಸ್ ರೈ ಗುತ್ತುಪಾಲ್ ಹಾಗೂ ಕೇಂದ್ರ ಕಚೇರಿಯ ವ್ಯವಸ್ಥಾಪಕ ಸುನಾದ್ರಾಜ್ ಶೆಟ್ಟಿ, ಬೊಳುವಾರು, ಶಾಖೆ ವ್ಯವಸ್ಥಾಪಕಿ ದಯಾಕಾಂತಿರವರು ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯಕ್ರಮ ನಿರೂಪಿಸಿದ ಚಂದ್ರಶೇಖರ್ ಪಿ.ಯವರನ್ನು ಓಡಿಯೂರು ಶ್ರೀಯವರು ಗೌರವಿಸಿದರು. ಬೆಳಿಗ್ಗೆ ಪುರೋಹಿತ ನರಸಿಂಹಪ್ರಸಾದ್ ಪಾಂಗಣ್ಣಾಯರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ಒಂದೂವರೇ ವರ್ಷದೊಳಗೆ ಕಟ್ಟಡ ಲೋಕಾರ್ಪಣೆ
3.25 ಕೋಟಿ ರೂ. ವೆಚ್ಚದಲ್ಲಿ ಸವಣೂರಿನಲ್ಲಿ ನಿರ್ಮಾಣವಾಗಲಿರುವ ಆದರ್ಶ ಸಹಕಾರ ಸಂಘದ ಕೇಂದ್ರ ಕಚೇರಿ, ವಾಣಿಜ್ಯ ಮಳಿಗೆಗಳ ಸಂಕೀರ್ಣವು ಒಂದೂವರೇ ವರ್ಷದೊಳಗೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ. ನೂತನ ಕಟ್ಟಡದಲ್ಲಿ ಅದರ್ಶ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿ ಮತ್ತು ಸವಣೂರು ಶಾಖಾ ಕಚೇರಿ ಹೊಂದಲಿದ್ದು, ಸುಮಾರು 750 ಮಂದಿ ಕುಳಿತುಕೊಳ್ಳುವ ಸಭಾಭವನ, ವಾಣಿಜ್ಯ ಮಳಿಗೆಗಳು ಮತ್ತು ರೆಸ್ಟೋರೆಂಟ್ ಜನರ ಸೇವೆಗೆ ಲಭ್ಯವಾಗಲಿದೆ, ಅಲ್ಲದೇ ಸಂಘದ 14ನೇ ಶಾಖೆಯು ಬಿಸಿರೋಡ್ನಲ್ಲಿ ನವೆಂಬರ್ ತಿಂಗಳಲ್ಲಿ ಉದ್ಘಾಟನೆಯಾಗಲಿದೆ.
ಕೆ.ಸೀತಾರಾಮ ರೈ ಸವಣೂರು
ಅಧ್ಯಕ್ಷರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ