ಪುತ್ತೂರು: ಗ್ರಾಮದಲ್ಲಾಗಲಿ, ನಗರದಲ್ಲಾಗಲಿ ವಾಸ್ತವ್ಯ ಇರುವ ಮನೆಗೆ ನೀರಿನ ಸಂಪರ್ಕ ನೀಡಲು ಮನೆಯವರಲ್ಲಿ ಯಾವುದೇ ದಾಖಲೆಗಳನ್ನು ಕೇಳಬೇಡಿ, ಕುಡಿಯುವ ನೀರು ಎಲ್ಲರಿಗೂ ದೊರೆಯುವಂತಾಗಬೇಕು , ದಾಖಲೆ ಇಲ್ಲ ಎಂದು ನೀರಿನ ಸಂಪರ್ಕ ಕೊಡದೆ ಇರಬಾರದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಖಡಕ್ ಸೂಚನೆಯನ್ನು ನೀಡಿದ್ದಾರೆ.
ಪುತ್ತೂರು ಶಾಸಕರ ಭವನದಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಸೂಚನೆಯನ್ನು ನೀಡಿದ್ದಾರೆ.
ಆರ‍್ಯಾಪು ಗ್ರಾಮದ ಒಳತ್ತಡ್ಕ ನಿವಾಸಿಯೋರ್ವರಿಗೆ ಗ್ರಾಪಂ ಕುಡಿಯುವ ನೀರಿನ ಸಂಪರ್ಕ ನೀಡಿಲ್ಲ ಎಂಬ ದೂರುಗಳು ಬಂದಿದೆ, ಆ ಮನೆಯವರು ಪಿಕಪ್‌ನಲ್ಲಿ ಬೇರೆ ಕಡೆಯಿಂದ ಕುಡಿಯುವ ನೀರು ಮನೆಗೆ ತರುತ್ತಿದ್ದಾರೆ ಎಂಬ ಮಾಹಿತಿ ಇದ್ದು ತಕ್ಷಣವೇ ಆ ಮನೆಗೆ ನೀರಿನ ಸಂಪರ್ಕ ನೀಡುವಂತೆ ಗ್ರಾಪಂ ಪಿಡಿಒ ರವರಿಗೆ ಶಾಸಕರು ಸೂಚನೆಯನ್ನು ನೀಡಿದ್ದಾರೆ.
ಕೆಲವು ಗ್ರಾಪಂ ನಲ್ಲಿ ಮನೆಗೆ ಡೋರ್ ನಂಬರ್ ಇಲ್ಲ, ರೇಶನ್ ಕಾರ್ಡ್ ಇಲ್ಲ, ಆಧಾರ್ ಕಾರ್ಡ್ ಇಲ್ಲ ಎಂದು ನೆಪ ಹೇಳಿ ಕುಡಿಯುವ ನೀರಿನ ಸಂಪರ್ಕ ನೀಡದೇ ಇರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರುಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಂತಹ ಮನೆಗಳಿಗೆ ತಕ್ಷಣ ನೀರಿನ ಸಂಪರ್ಕ ನೀಡಬೇಕು. ನನ್ನ ಕ್ಷೇತ್ರದಲ್ಲಿ ಯಾರು ಕೂಡಾ ಹಸಿವನಿಂದ ಇರಬಾರದು, ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಇರಬಾರದು, ಕುಡಿಯುವ ನೀರು ಇಲ್ಲದೇ ಇರಬಾರದು . ಈ ಮೂರು ವ್ಯವಸ್ಥೆಗಳಿಂದ ಯಾವುದಾದರೂ ಕುಟುಂಬ ವಂಚಿತರಾಗಿದ್ದರೆ ನಾನೇ ಫೀಲ್ಡಿಗೆ ಇಳಿಯಬೇಕಾಗುತ್ತದೆ ಎಂದು ಶಾಸಕರು ಸೂಚನೆಯನ್ನು ನೀಡಿದ್ದಾರೆ.