ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 13,552 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಅ.21(ಶನಿವಾರ) ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ನಡೆಸಲಿದೆ.
ಮಾ.8ರಂದು ಪ್ರಕಟಿಸಲಾಗಿರುವ 1:1 ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸಿಲಿಂಗ್ ಗೆ ಅರ್ಹ ಅಭ್ಯರ್ಥಿಗಳ ವಿವರವನ್ನು ಅ.19ರಂದು ಶಾಲಾ ಶಿಕ್ಷಣ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿರುವ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಆಂಗ್ಲ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಅ.21ರಂದು ಬೆಳಗ್ಗೆ 10.30ಕ್ಕೆ ಆಯಾ ಜಿಲ್ಲೆಗಳ ನೇಮಕಾತಿ ಪ್ರಾಧಿಕಾರಿಯಾದ ಜಿಲ್ಲಾ ಉಪನಿರ್ದೇಶಕರು ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಕಚೇರಿಯಲ್ಲಿ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ ನಲ್ಲಿರುವ ಎಲ್ಲ ಅಗತ್ಯ ವಿವರಗಳನ್ನು ಪಡೆದು ಸಕಾಲದಲ್ಲಿ ಕೌನ್ಸಿಲಿಂಗ್ ಸ್ಥಳದಲ್ಲಿ ಭಾವಚಿತ್ರವಿರುವ ಗುರುತಿನ ಚೀಟಿ ಮತ್ತು ನೇಮಕಾತಿಗೆ ಸಂಬಂಧಪಟ್ಟ ಅಗತ್ಯ ದಾಖಲೆಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಉಪನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.