ಪುತ್ತೂರಿನ ಬಾಲಕಿಯರನ್ನೊಳಗೊಂಡ ದ.ಕ ತಂಡ ರನ್ನರ್ಸ್
ಪುತ್ತೂರು: ಬ್ರಹ್ಮಾವರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಅಂಡರ್ 14 ಮತ್ತು ಅಂಡರ್ 17ರ ವಯೋಮಿತಿಯ ಬಾಲಕ-ಬಾಲಕಿಯರ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಅಂಡರ್ 17 ವಯೋಮಿತಿಯ ಪಂದ್ಯದಲ್ಲಿ ಬೆಥನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಏಂಜಲಿಕಾ ಮೆಲಾನಿ ಪಿಂಟೋರವರ ನಾಯಕತ್ವದ ದಕ್ಷಿಣ ಕನ್ನಡ ತಂಡ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ.
ಉಡುಪಿ ಜಿಲ್ಲಾ ತಂಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ತಂಡದ ನಡುವೆ ನಡೆದ ಫೈನಲ್ ಹೋರಾಟದಲ್ಲಿ ದಕ್ಷಿಣ ಕನ್ನಡ ತಂಡದ ನಾಯಕಿ ದರ್ಬೆ ಬೆಥನಿ ಪ್ರೌಢಶಾಲೆಯ ಏಂಜಲಿಕಾ ಮೆಲಾನಿ ಪಿಂಟೋ ಹಾಗೂ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶ ಆರ್.ಎಸ್.ರವರು ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದಿದ್ದು, ತಂಡವು ನಿಗದಿತ 15 ಓವರ್‌ಗಳಲ್ಲಿ ನೋಲಾಸ್ 79 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಏಂಜಲಿಕಾ ಮೆಲಾನಿರವರು ಅಜೇಯ ೩೬ ರನ್ ಹಾಗೂ ಶ್ರೀಶ ಅಜೇಯ 11 ರನ್‌ಗಳನ್ನು ಬಾರಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ತಂಡದಲ್ಲಿ ಬೆಥನಿ ಪ್ರೌಢಶಾಲೆಯ ಏಂಜಲಿಕಾ ಮೆಲಾನಿ, ಹಫೀದ, ಹಿತಾಶ್ರೀ, ಫಿಲೋಮಿನಾ ಪ್ರೌಢಶಾಲೆಯ ಶ್ರೀಶ ಆರ್.ಎಸ್, ಆಸ್ತಿಕ, ಜಸ್ಮಿ, ಜೀವಿತ, ಪುಣ್ಯಶ್ರೀ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಅಂಕಿತಾ, ಪೂರ್ವಿತಾ, ಪುಣ್ಯ, ಮಂಗಳೂರು ಪ್ರೌಢಶಾಲೆಯ ವಿದ್ಯಾರ್ಥಿನಿ ಜಾನ್ವಿರವರು ಭಾಗವಹಿಸಿದ್ದರು. ತಂಡದ ತರಬೇತುದಾರರಾಗಿ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ತರಬೇತಿ ನೀಡಿದ್ದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಶಾಲಾ ಶಿಕ್ಷಣ ಇಲಾಖೆ, ವಿಭಾಗೀಯ ಉಪನಿರ್ದೇಶಕರ ಕಛೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ, ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಮತ್ತು ಬ್ರಹ್ಮಾವರ ತಾಲೂಕು ಅಥ್ಲೆಟಿಕ್ಸ್ ಅಸೋಸಿಯೇಶನ್ ಬ್ರಹ್ಮಾವರ ಇವುಗಳ ಸಹಯೋಗದೊಂದಿಗೆ ಪಂದ್ಯಾಕೂಟವನ್ನು ಆಯೋಜಿಸಲಾಗಿತ್ತು.
ನಾಲ್ಕು ಮಂದಿ ರಾಜ್ಯ ಮಟ್ಟಕ್ಕೆ…
ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಯಕಿ ಏಂಜಲಿಕಾ ಮೆಲಾನಿ ಪಿಂಟೋ, ಶ್ರೀಶ ಆರ್.ಎಸ್, ಆಸ್ತಿಕ, ಪೂರ್ವಿತಾರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಚಿಕ್ಕೋಡಿ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.