ಪುತ್ತೂರು : ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೂ ಒಂದರಂತೆ 5980 ಡೇಟಾ ಎಂಟ್ರಿ ಆಪರೇಟರ್ಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ.ಗ್ರಾಮ ಪಂಚಾಯಿತ್ಗಳಲ್ಲಿ ಕೆಲಸದ ಒತ್ತಡ ನಿರ್ವಹಣೆ ಹಿನ್ನೆಲೆಯಲ್ಲಿ ಈ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಪಂಚಾಯತ್ ರಾಜ್ ಆಯುಕ್ತಾಲಯ , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದೆ.
ನೇರ ನೇಮಕಾತಿಗೆ ಈ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲೆಯನ್ನು ಒಂದು ಜೇಷ್ಠತಾ ಘಟಕವೆಂದು ಪರಿಗಣಿಸಿ ಜಿಲ್ಲಾ ಪಂಚಾಯಿತಿಯ ಸಿಇಒ ಅಧ್ಯಕ್ಷತೆಯ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳತಕ್ಕದ್ದು ಹಾಗೂ ಈ ಹುದ್ದೆಗೆ ಆಯ್ಕೆಯಾದ ನೌಕರರಿಗೆ ಕನಿಷ್ಠ 16,738 ರೂ. ವೇತನ ನಿಗದಿಪಡಿಸಲಾಗಿದೆ.ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನ ಪಾವತಿಸಬೇಕು ಎಂದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಸೂಚಿಸಿದ್ದಾರೆ.
ನೇಮಕದಲ್ಲಿ ಮೊದಲ ಆದ್ಯತೆ ನೀಡಿ
ಪ್ರಸ್ತುತ ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್ಗಳಿಗೆ ಈ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ನೌಕರರು ಒತ್ತಾಯಿಸಿದ್ದಾರೆ.