ಕ್ರೀಡಾಂಗಣವಿದ್ದಾಗ ಜಾಗತಿಕ ಮಟ್ಟದಲ್ಲಿ ಕ್ರೀಡಾ ಸಾಧನೆ ಸಾಧ್ಯ: ಮಠಂದೂರು
ಉಪ್ಪಿನಂಗಡಿ: ಊರಿನಲ್ಲಿ ಶೃದ್ಧಾಕೇಂದ್ರಗಳು ಎಷ್ಟು ಮುಖ್ಯವೋ ವಿದ್ಯಾಕೇಂದ್ರ ಹಾಗೂ ಅದಕ್ಕೊಂದು ಕ್ರೀಡಾಂಗಣ ಕೂಡಾ ಅಷ್ಟೇ ಮುಖ್ಯವಾಗಿದೆ. ಕ್ರೀಡಾಂಗಣವಿದ್ದಾಗ ಮಾತ್ರ ಜಾಗತಿಕ ಮಟ್ಟದಲ್ಲಿ ಕ್ರೀಡಾ ಸಾಧಕರ ಭವಿಷ್ಯ ರೂಪಿಸುವ ಕೆಲಸ ಮಾಡಲು ಸಾಧ್ಯ. ಕ್ರೀಡಾಂಗಣಗಳಲ್ಲಿ ಶಕ್ತಿಯ ಸಂಚಯನವಿದ್ದು, ರಾಷ್ಟ್ರಕ್ಕಾಗಿ ಹೇಗೆ ಬದುಕಬೇಕೆನ್ನುವ ಸಂದೇಶ ಇಲ್ಲಿಂದ ತಿಳಿಯಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ಕ್ರೀಡಾಕೂಟವನ್ನು ಅ.26ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಇಚ್ಛಾಶಕ್ತಿಯಿದ್ದರೆ ಗ್ರಾ.ಪಂ. ಏನು ಕೆಲಸ ಮಾಡಬಹುದು ಎಂಬುದನ್ನು ಹಿರೇಬಂಡಾಡಿ ಗ್ರಾ.ಪಂ. ಈ ಶಾಲೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ಮಾಡುವ ಮೂಲಕ ತೋರಿಸಿಕೊಟ್ಟಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಕೆರೆ ನಿರ್ಮಾಣ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹವಾನಿಯಂತ್ರಿತ ಭೋಜನಾಲಯ ಹೀಗೆ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಹಿರೇಬಂಡಾಡಿ ಗ್ರಾ.ಪಂ. ಹೊಸ ಇತಿಹಾಸ ನಿರ್ಮಾಣ ಮಾಡುವ ಕೆಲಸ ಮಾಡಿದೆ ಎಂದ ಅವರು, ಇಲ್ಲಿನವರಿಗೆ ತಾವು ಹುಟ್ಟಿದ ಊರಲ್ಲೇ ಕ್ರೀಡಾ ಸಾಧನೆಗೈದು ಸಾಧಕರಾಗಲು ಈ ಕ್ರೀಡಾಂಗಣ ಅವಕಾಶ ಮಾಡಿಕೊಡಲಿದ್ದು, ನಾವೆಲ್ಲಾ ಇದನ್ನು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಬೇಕು. ಈ ಕ್ರೀಡಾಕೂಟದಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್. ಮಾತನಾಡಿ, ಶಾಲೆ ಮತ್ತು ಅದರೊಂದಿಗೆ ಕ್ರೀಡಾಂಗಣವಿದ್ದಾಗ ಮಾತ್ರ ಊರು ಚೆನ್ನಾಗಿರಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನ್ನಷ್ಟು ಕ್ರೀಡಾ ಪ್ರತಿಭೆಗಳು ಇಲ್ಲಿಂದ ಮೂಡಿಬರಬೇಕು ಎಂದು ಶುಭಹಾರೈಸಿದರಲ್ಲದೆ, ಕರ್ನಾಟಕದಲ್ಲಿಯೇ ಅತೀ ಹೆಚ್ಚು ಕ್ರೀಡಾಂಗಣ, ಕ್ರೀಡೆಗೆ ಒತ್ತು ನೀಡುವ ತಾಲೂಕು ಪುತ್ತೂರು ಆಗಿದೆ ಎಂದರು.
ಪುತ್ತೂರು ತಾ.ಪಂ.ನ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕಿ ಶ್ರೀಮತಿ ಶೈಲಜಾ ಮಾತನಾಡಿ, ಕಟ್ಟಡ, ಶೌಚಾಲಯ, ಕ್ರೀಡಾಂಗಣದ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳಿದ್ದಾಗ ಮಾತ್ರ ಶಾಲೆಯೊಂದು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ. ತಾಲೂಕಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಗುರಿ ಸಾಧನೆಗೆ ಹಿರೇಬಂಡಾಡಿ ಗ್ರಾ.ಪಂ.ನ ಪಾಲು ಬಹಳಷ್ಟಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಕ್ರೀಡಾ ಧ್ವಜಾರೋಹಣಗೈದರು. ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಂಜುಶ್ರೀ ಭಜನಾ ಮಂದಿರದಿಂದ ತಂದ ಕ್ರೀಡಾ ಜ್ಯೋತಿಯಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕ್ರೀಡಾಳುಗಳ ಸಾಧನೆ ಗಗನದೆತ್ತರ ತಲುಪಲಿ ಎಂದು ಅತಿಥಿಗಳು ತ್ರಿವರ್ಣದ ಬಲೂನುಗಳನ್ನು ಅಗಸಕ್ಕೆ ಹಾರಿ ಬಿಟ್ಟರು. ಇದಕ್ಕೂ ಮೊದಲು ಕ್ರೀಡಾಳುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವಿಶೇಷ ಅಗತ್ಯವುಳ್ಳ ಮಕ್ಕಳ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಹಿರೇಬಂಡಾಡಿ ಶಾಲಾ ವಿದ್ಯಾರ್ಥಿನಿ ಮಾನ್ಯ ಅವರನ್ನು ಹಾಗೂ ಕ್ರೀಡಾಂಗಣ ನಿರ್ಮಾಣದಲ್ಲಿ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಶೆಟ್ಟಿ, ಉಪಾಧ್ಯಕ್ಷೆ ಶಾಂಭವಿ, ಹಿರೇಬಂಡಾಡಿ ಸರಕಾರಿ ಪ್ರೌಢಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ, ಪುತ್ತೂರು ಶೈಕ್ಷಣಿಕ ವಲಯದ ಶಿಕ್ಷಕರ ಸಂಘಗಳ ಪದಾಧಿಕಾರಿಗಳಾದ ಸುಧಾಕರ ರೈ ಪಾಣಾಜೆ, ಬೇಬಿ ನೂಜಿಬಾಳ್ತಿಲ, ಅಬ್ರಾಹಂ ಎಸ್., ಶಾಂತರಾಮ ಓಡ್ಲ, ನವೀನ್ ರೈ, ರಾಮಕೃಷ್ಣ ಮಲ್ಲಾರ, ವಿಮಲ್ ನೆಲ್ಯಾಡಿ, ಜಯರಾಮ ಶೆಟ್ಟಿ, ಶ್ಯಾಮಲ, ನಿಂಗರಾಜ, ಬಾಲಕೃಷ್ಣ ಗೌಡ, ಹರಿಪ್ರಸಾದ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರು ಹರಿಕಿರಣ್ ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ. ವಂದಿಸಿದರು. ಮುಖ್ಯ ಶಿಕ್ಷಕಿ ಲಲಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.