ಉಜಿರೆಯಲ್ಲಿ ಧರ್ಮ ಸಂರಕ್ಷಣಾ ಪಾದಯಾತ್ರೆಯ ಪೂರ್ವಭಾವಿ ಸಭೆ

0

ಉಜಿರೆ: ಧರ್ಮದ ಹೆಸರಿನಲ್ಲಿ ಚರ್ಚೆಗಳು ಬೀದಿಯಲ್ಲಿ ನಡೆಯಬಾರದು. ಧಾರ್ಮಿಕ ಶ್ರದ್ಧಾ ಕೇಂದ್ರಗಳ ಉಳಿವಿಗಾಗಿ, ಧಾರ್ಮಿಕ ಜಾಗೃತಿಗಾಗಿ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಧರ್ಮದ ಮಹತ್ವವನ್ನರಿತು ಅದರ ಉಳಿವಿಗಾಗಿ ಭಕ್ತರೆಲ್ಲ ಜಾತಿ, ಪಕ್ಷ ಭೇದ ಮರೆತು ಧರ್ಮ ಸಂರಕ್ಷಣಾ ಪಾದಯಾತ್ರೆಯಲ್ಲಿ ಸ್ವಯಂಪ್ರೇರಿತರಾಗಿ ಭಕ್ತಿಯಿಂದ ದೇವರ ಸ್ಮರಣೆಯೊಂದಿಗೆ ಹೆಜ್ಜೆ ಹಾಕಬೇಕು. ಯಾವುದೇ ವೇದಿಕೆ, ಭಾಷಣ ಇರುವುದಿಲ್ಲ. ಜನ ಸೇರಿಸುವ ಉದ್ದೇಶವೂ ಇಲ್ಲ. ಯಾವುದೇ ಕುಂದು ಕೊರತೆ ಆಗದಂತೆ ಎಲ್ಲರೂ ತಮ್ಮನ್ನು ತಾವು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧರ್ಮ ಜಾಗೃತಿ ಸಮಿತಿ ಸಂಚಾಲಕರಾದ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮನವಿ ಮಾಡಿದರು.


ಅ.29ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯವರೆಗೆ ನಡೆಯಲಿರುವ ಧರ್ಮ ಸಂರಕ್ಷಣಾ ಪಾದಯಾತ್ರೆ ಪ್ರಯುಕ್ತ ಅ.20ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಸನಾತನ ಧರ್ಮದ ಮೂಲವಾದ ಶ್ರದ್ಧಾಕೇಂದ್ರಗಳ ಮೇಲಾಗುತ್ತಿರುವ ದಾಳಿ ನಿಲ್ಲಬೇಕು. ಸನಾತನ ಧರ್ಮದ ಹೆಸರಿನಲ್ಲಿ ಧರ್ಮೀಯರನ್ನು ಒಂದೇ ದಾರದಲ್ಲಿ ಪೋಣಿಸಿ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನವಾಗಿ ಧರ್ಮ ಸಂರಕ್ಷಣಾ ಯಾತ್ರೆ ಆಯೋಜಿಸಲಾಗಿದೆ. ಭಕ್ತರು ಒಂದಾಗಿ ಸಂಘಟಿತರಾಗಿ ಕಾರ್ಯಕ್ರಮಕ್ಕೆ ಬರಬೇಕು ಎಂದು ಹೇಳಿದರು.


ಧರ್ಮ ಜಾಗೃತಿ ಮೂಡಿಸುವ ಕೇಂದ್ರಗಳಾಗಿದೆ-ಪ್ರತಾಪಸಿಂಹ ನಾಯಕ್:
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ ದೇವಸ್ಥಾನ, ಶ್ರದ್ಧಾಕೇಂದ್ರಗಳು ನಮಗೆ ಸಂಸ್ಕಾರ ನೀಡುವ ಜತೆಗೆ ಧರ್ಮ ಜಾಗೃತಿ ಮೂಡಿಸುವ ಕೇಂದ್ರಗಳಾಗಿವೆ. ಶ್ರದ್ಧಾಕೇಂದ್ರಗಳು ವೈಯಕ್ತಿಕ ಆತ್ಮೋನ್ನತಿಯ ಜತೆಗೆ ಜಗತ್ತಿನ ಹಿತ ಕಾಯುತ್ತಿವೆ ಎಂದರು.


ವಿಘಟನೆಯನ್ನು ಉಂಟು ಮಾಡುವ ಕಾರ್ಯ ನಡೆಯುತ್ತಿದೆ-ಬಿ.ಕೆ. ಧನಂಜಯ ರಾವ್:
ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ಅವರು ನಮ್ಮ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಹಾಗೂ ನಮ್ಮ ಮಣ್ಣಿನ ಮೇಲೆ ಎಷ್ಟೋ ದಾಳಿ ಆಗಿದ್ದರೂ ನಮ್ಮ ಸನಾತನ ನಂಬಿಕೆಗಳು ಇಂದಿಗೂ ಅಜರಾಮರವಾಗಿ ಉಳಿಯಲು ನಮ್ಮ ಸನಾತನ ಧರ್ಮೀಯರು ಧರ್ಮದ ಮೇಲೆ ಇಟ್ಟಿರುವ ಶ್ರದ್ಧೆ ಕಾರಣವಾಗಿದೆ ಎಂದರು. ಇಂದು ಸನಾತನ ಧರ್ಮೀಯರ ಮಧ್ಯೆ ವಿಘಟನೆಯನ್ನು ಉಂಟು ಮಾಡುವ ಕಾರ್ಯ ನಡೆಯುತ್ತಿದೆ. ಇಂದು ಯುವ ಪೀಳಿಗೆ ನಮ್ಮ ಶ್ರದ್ಧಾ ಕೇಂದ್ರಗಳಿಗೆ, ನಂಬಿಕೆಗಳ ಮೇಲೆ ಅಪನಂಬಿಕೆಯನ್ನು ಹೊಂದುವ ಹೆಜ್ಜೆಯನ್ನು ಇಡುತ್ತಿದೆ. ನಮ್ಮ ಧರ್ಮ ಹಾಗೂ ನಂಬಿಕೆಗಳ ಮೇಲೆ ಅಚಲವಾದ ದೃಷ್ಠಿಯನ್ನು ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.

ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮ ಅಲ್ಲ-ವಸಂತ ಗಿಳಿಯಾರ್:
ಕಾರ್ಯಕ್ರಮದ ಸಂಘಟಕ, ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ ಅಕ್ಟೋಬರ್ 28ರಂದು ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಧರ್ಮ ಸಂರಕ್ಷಣಾ ರಥ ಯಾತ್ರೆಗೆ ಧಾರ್ಮಿಕ ಮುಂದಾಳುಗಳಾದ ಅಪ್ಪಣ್ಣ ಹೆಗ್ಡೆ ಮತ್ತು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯರವರು ಚಾಲನೆ ನೀಡಲಿದ್ದಾರೆ. ರಥ ಯಾತ್ರೆ ಅಂದು ಉಡುಪಿ ಮಾರ್ಗವಾಗಿ ಸಂಜೆ ಮಂಗಳೂರು ಕದ್ರಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಚಿತ್ತೈಸಲಿದೆ. ಅಕ್ಟೋಬರ್ 29ರಂದು ಬೆಳಿಗ್ಗೆ ಅಲ್ಲಿ ಪೂಜೆ ನೆರವೇರಿಸಿ ಬಂಟ್ವಾಳ, ಮಡಂತ್ಯಾರು, ಬೆಳ್ತಂಗಡಿ ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ಉಜಿರೆಗೆ ಪಾದಯಾತ್ರೆ ಆಗಮಿಸಲಿದೆ. ಮಧ್ಯಾಹ್ನ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಽಯಿಂದ ಧರ್ಮಸ್ಥಳಕ್ಕೆ ಸಹಸ್ರಾರು ಭಕ್ತಾದಿಗಳ ಭಕ್ತಿ ಶ್ರದ್ಧೆಯ ಪಾದಯಾತ್ರೆಯೊಂದಿಗೆ ಧರ್ಮ ಸಂರಕ್ಷಣಾ ಪಾದಯಾತ್ರೆ ಸಾಗಿ ಬರಲಿದೆ. ಅಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಾಗುವುದು. ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಪಾದಯಾತ್ರಿಗಳನ್ನುದ್ದೇಶಿಸಿ ಸಂದೇಶ ನೀಡಲಿದ್ದಾರೆ. ಧರ್ಮ ಸಂರಕ್ಷಣಾ ಯಾತ್ರೆಯಲ್ಲಿ ಯಾರೂ ಭಾಗವಹಿಸಬಹುದು. ಆ ಬಗ್ಗೆ ಒಂದೇ ರೀತಿಯ ಬ್ಯಾನರ್ ಅಳವಡಿಸಲು ಅವಕಾಶವಿದೆ. ಸಂವಿಧಾನಕ್ಕೆ ಬದ್ಧರಾಗಿ ಪರವಾನಗಿ ಪಡೆದು ಬ್ಯಾನರ್ ಅಳವಡಿಸಿ ನಂತರ ತೆಗೆಯುವ ಜವಾಬ್ದಾರಿಯೂ ನಮ್ಮದೇ ಆಗಿರುತ್ತದೆ. ಧರ್ಮಿಷ್ಟರು ಧರ್ಮ ಕಾರ್ಯಕ್ಕಾಗಿ ಸೇರಿದ್ದೇವೆ. ಧರ್ಮ ಸಂರಕ್ಷಣಾ ಯಾತ್ರೆಯ ಪಾದಯಾತ್ರೆಯ ನಂತರ ಯಾವುದೇ ಭಾಷಣಗಳಿರುವುದಿಲ್ಲ. ಇದು ಬಿಜೆಪಿ ಪ್ರಾಯೋಜಿತ ಅಥವಾ ಬಿಜೆಪಿ ಅಜೆಂಡವಾಗಿ ನಡೆಯುವ ಕಾರ್ಯವಲ್ಲ, ಬದಲಾಗಿ ಧರ್ಮವನ್ನು ಗೌರವಿಸುವವರು ಈ ಯಾತ್ರೆಯಲ್ಲಿ ಭಾಗಿಯಾಗಬಹುದು ಎಂದು ವಸಂತ ಗಿಳಿಯಾರ್ ತಿಳಿಸಿದರು.ಸಮಿತಿ ಸಂಚಾಲಕ ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, ಧರ್ಮ ಸಂರಕ್ಷಣಾ ಪಾದಯಾತ್ರೆಗೆ ಸಹಕಾರ ಕೋರಿದರು.

ಸಂಚಾಲಕರಾಗಿ ಶಶಿಧರ ಶೆಟ್ಟಿ ನೇಮಕ
ಧರ್ಮ ಸಂರಕ್ಷಣಾ ಯಾತ್ರೆಯ ಯಶಸ್ಸಿಗಾಗಿ ಧರ್ಮಜಾಗೃತಿ ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯ ಸಂಚಾಲಕರಾಗಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ನೇಮಕಗೊಂಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಧರ್ಮಾಭಿಮಾನಿಗಳನ್ನು ಧರ್ಮ ಜಾಗೃತಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.
ಸಂಚಾಲಕರಾಗಿ ನೇಮಕಗೊಂಡ ಬಳಿಕ ಮಂಜುನಾಥ ಸ್ವಾಮಿಯ ಓಂಕಾರದೊಂದಿಗೆ ಮಾತನಾಡಿದ ಶಶಿಧರ ಶೆಟ್ಟಿಯವರು ಧರ್ಮಸ್ಥಳ ಎಂದು ಹೇಳಿದ ಕೂಡಲೇ ನಮಗೆ ಅಪಾರ ಗೌರವ ಸಿಗುತ್ತಿದೆ. ಈ ಯಾತ್ರೆಯಲ್ಲಿ ಸ್ವಾಮೀಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಯಾವುದೇ ವೇದಿಕೆಗಳಿರುವುದಿಲ್ಲ. ರಾಜಕೀಯ ರಹಿತವಾಗಿ ಧರ್ಮಸ್ಥಳದ ಭಕ್ತರೆಲ್ಲರು ಭಾಗಿಯಾಗಬಹುದು. ಈ ಕಾರ್ಯಕ್ರಮ ಆದ ನಂತರ ಯಾವ ಕಾಮೆಂಟ್ಸ್ ಬಂದರೂ ಅದಕ್ಕೆ ಪ್ರತಿಕ್ರಿಯಿಸಬೇಡಿ ಎಂದು ಹೇಳಿದರು.

LEAVE A REPLY

Please enter your comment!
Please enter your name here