ಪುತ್ತೂರು: ಚೈತನ್ಯ ಅಭಿವ್ಯಕ್ತಿ ವೇದಿಕೆ ಪೆರ್ಲಂಪಾಡಿ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ, ಗ್ರಾಮ ವಿಕಾಸ ಸಮಿತಿ ಕೊಳ್ತಿಗೆ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ರೋಟರಿ ಕ್ಲಬ್ ಸುಳ್ಯ ಸಿಟಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ಕೆ.ಜಯರಾಮ ಪೆರ್ಲಂಪಾಡಿ ಸ್ಮರಣಾರ್ಥ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ, ಮೂಳೆ ಸಾಂದ್ರತೆ, ರಕ್ತದೊತ್ತಡ, ಮಧುಮೇಹ ತಪಾಸಣೆ ಮತ್ತು ರಕ್ತದಾನ ಶಿಬಿರ ಅ.27 ರಂದು ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ| ಪಿ.ಗೌರಿ ಪೈಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕೆ.ಜಯರಾಮ ಪೆರ್ಲಂಪಾಡಿಯವರ ಬಗ್ಗೆ ಸಂಸ್ಮರಣಾ ಮಾತುಗಳನ್ನಾಡಿದ ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೆ.ವಸಂತ ಕುಮಾರ್ ರೈ ದುಗ್ಗಳರವರು, ಜಯರಾಮ ಪೆರ್ಲಂಪಾಡಿಯವರು ಸರಳತೆ ಮತ್ತು ಕರ್ತವ್ಯನಿಷ್ಠೆಯ ಮೂಲಕ ಸಂಸ್ಥೆಯಲ್ಲಿ 12 ವರ್ಷಗಳ ಸೇವೆಯಲ್ಲಿ ಸಮಾಜದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಓರ್ವ ವ್ಯಕ್ತಿಯಾಗಿದ್ದಾರೆ. ಇಂತಹ ವ್ಯಕ್ತಿಗಳು ವಿರಳ ಇವರ ಹೆಸರಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುವ ಮೂಲಕ ಅವರನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುವ ಅವಕಾಶ ಸಿಕ್ಕಿರುವುದು ಪುಣ್ಯ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಚೈತನ್ಯ ಅಭಿವ್ಯಕ್ತಿ ವೇದಿಕೆಯ ಅಧ್ಯಕ್ಷ ಸೀತಾರಾಮ ಅಮಳರವರು ಮಾತನಾಡಿ, ಜಯರಾಮ ಪೆರ್ಲಂಪಾಡಿಯವರು ವೃತ್ತಿಯೊಂದಿಗೆ ಸಮಾಜಮುಖಿ ಕೆಲಸಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ ವ್ಯಕ್ತಿಯಾಗಿ ಎಲ್ಲರ ಮನಸ್ಸನ್ನು ಗೆದ್ದವರಾಗಿದ್ದರು.ಇವರ ಹೆಸರಿನಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಲು ಸರ್ವರು ಸಹಕಾರ ನೀಡಿದ್ದಾರೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಗಿರೀಶ್ ನಾರ್ಕೊಡುರವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೆ.ಜಯರಾಮ ಪೆರ್ಲಂಪಾಡಿಯವರ ಸ್ಮರಣಾರ್ಥ ಹಮ್ಮಿಕೊಂಡಿರುವ ಒಂದು ಒಳ್ಳೆಯ ಕಾರ್ಯಕ್ರಮ ಇದಾಗಿದೆ. ಇಂತಹ ಕಾರ್ಯಕ್ರಮದಲ್ಲಿ ನಮಗೂ ಅವಕಾಶ ಮಾಡಿಕೊಟ್ಟಿರುವುದಕ್ಕೆ ಸಂಘಟಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಮುಂದೆಯೂ ಇಂತಹ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿದರು.
ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್.ವೆಂಕಟರಮಣ ಗೌಡರವರು ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು, ೪೦ ವರ್ಷ ದಾಟಿದ ಪ್ರತಿಯೊಬ್ಬರು ತಿಂಗಳಿಗೊಮ್ಮೆಯಾದರೂ ತಮ್ಮ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಕೊಳ್ಳಬೇಕು ಅದರಲ್ಲೂ ಬಿಪಿ, ಶುಗರ್ ಬಗ್ಗೆ ಜಾಗೃತರಾಗಿರಬೇಕು ಎಂದರು. ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಉತ್ತಮ ಸೇವೆ ಸಿಗುತ್ತಿದ್ದು ಡಾ| ಅಮಿತ್ ಕುಮಾರ್‌ರವರು ಜನರಿಗೆ ಒಳ್ಳೆಯ ಸೇವೆ ನೀಡುತ್ತಿದ್ದಾರೆ. ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳಬೇಕು ಎಂದ ಅವರು, ಜಯರಾಮ ಪೆರ್ಲಂಪಾಡಿಯವರ ವ್ಯಕ್ತಿತ್ವ ಎಂತಹುದು ಎಂಬುದಕ್ಕೆ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು ಸೇರಿದ ಜನಸ್ತೋಮ ಅರ್ಥ ಮಾಡಿಸಿದೆ. ಅವರ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ಇಟ್ಟುಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್ ಕುಮಾರ್, ಷಣ್ಮುಖದೇವ ಪ್ರೌಢ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ತೀರ್ಥಾನಂದ ದುಗ್ಗಳ, ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ, ಕೊಳ್ತಿಗೆ ಯುವಕ ಮಂಡಲದ ಅಧ್ಯಕ್ಷ ಭರತ್‌ರಾಜ್ ಕುದ್ಕುಳಿ, ನವೋದಯ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್, ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲಾ ಮುಖ್ಯಶಿಕ್ಷಕಿ ಕೃಷ್ಣವೇಣಿ, ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್‌ನ ಡಾ| ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಕೆ.ಜಯರಾಮ ಪೆರ್ಲಂಪಾಡಿಯವರ ಹೆಸರಿನಲ್ಲಿ ಷಣ್ಮುಖದೇವ ಪ್ರೌಢ ಶಾಲಾ ವಿದ್ಯಾರ್ಥಿನಿ ಧನ್ಯಶ್ರೀಯವರಿಗೆ ನಗದು ಪುರಸ್ಕಾರ ನೀಡಲಾಯಿತು. ಚೈತನ್ಯ ಅಭಿವ್ಯಕ್ತಿ ವೇದಿಕೆಯ ಕಾರ್ಯದರ್ಶಿ ಕೃಷ್ಣಭಟ್ ಎಕ್ಕಡ್ಕ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕೊಳ್ತಿಗೆ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ದಿವಾಕರ ರೈ ಕೆರೆಮೂಲೆ ವಂದಿಸಿದರು. ಶಿವರಾಮ ಭಟ್ ಅಮಳ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆದ ಶಿಬಿರದಲ್ಲಿ ಮೂಳೆ ಸಾಂದ್ರತೆ ತಪಾಸಣೆ, ಚಿಕಿತ್ಸೆ, ಸಲಹೆ, ರಕ್ತದೊತ್ತಡ, ಮಧುಮೇಹ ತಪಾಸಣೆ, ಚಿಕಿತ್ಸೆ, ಸಲಹೆ, ಕಣ್ಣಿನ ಪರೀಕ್ಷೆ,ಕಣ್ಣಿನ ಪೊರೆ ಅಪರೇಷನ್ ಇತ್ಯಾದಿ ಪರೀಕ್ಷೆಗಳು ಉಚಿತವಾಗಿ ನಡೆಯಿತು.
ಶಿಬಿರದಲ್ಲಿ 235 ಮಂದಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು ಇದರಲ್ಲಿ 127 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. 10 ಮಂಧಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹೆಸರು ದಾಖಲಿಸಿಕೊಳ್ಳಲಾಯಿತು. 127 ಮಂದಿ ಮೂಳೆ ಸಾಂದ್ರತೆ ತಪಾಸಣೆ ಮಾಡಿಸಿಕೊಂಡರೆ, 30 ಮಂದಿ ರಕ್ತದಾನ ಮಾಡಿದರು. ಸುಮಾರು 250 ಕ್ಕೂ ಅಧಿಕ ಮಂದಿ ಬಿಪಿ,ಶುಗರ್ ಪರೀಕ್ಷೆ ಮಾಡಿಸಿಕೊಂಡರು.