10 ದಿನಗಳೊಳಗೆ ಮರಳು ಕೊರತೆ ನೀಗಿಸದಿದ್ದರೆ ನಿರ್ಮಾಣ ಚಟುವಟಿಕೆ ಸ್ಥಗಿತಗೊಳಿಸಿ ಪ್ರತಿಭಟನೆ-ಜಿಲ್ಲಾ ಸಿವಿಲ್ ಕಾಂಟ್ರಾಕ್ಟರ‍್ಸ್ ಅಸೋಸಿಯೇಷನ್ ಎಚ್ಚರಿಕೆ

0

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗಿರುವ ಮರಳು ಪೂರೈಕೆ ಕೊರತೆಯನ್ನು 10 ದಿನಗಳಲ್ಲಿ ನಿವಾರಿಸದಿದ್ದರೆ ನಿರ್ಮಾಣ ಚಟುವಟಿಕೆ ಸ್ಥಗಿತಗೊಳಿಸಿ ಕಾರ್ಮಿಕರನ್ನೂ ಸೇರಿಸಿಕೊಂಡು ಪ್ರತಿಭಟನೆ ನಡೆಸಲಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಎಸೋಸಿಯೇಷನ್‌ನ ಅಧ್ಯಕ್ಷ ಮಹಾಬಲ ಕೊಟ್ಟಾರಿಯವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನೈಸರ್ಗಿಕ ಮರಳು ಯಥೇಚ್ಚವಾಗಿದೆ.ಆದರೆ ಅದರ ಪೂರೈಕೆ ಸಮರ್ಪಕವಾಗಿ ಆಗದ ಕಾರಣ ಗುತ್ತಿಗೆದಾರರು ಮತ್ತು ಸಾರ್ವಜನಿಕರು ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮರಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಮತ್ತು ಗಣಿ ಇಲಾಖೆಗೆ ಹಲವು ಸಲ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.ಜಿಲ್ಲೆಯಲ್ಲಿ ನಿರ್ಮಾಣ ಚಟುವಟಿಕೆ ಸರಾಗವಾಗಿ ನಡೆಯಲು ನಿತ್ಯ ಏನಿಲ್ಲವೆಂದರೂ 500 ಲೋಡ್‌ಗಳಷ್ಟು ಮರಳಿನ ಅಗತ್ಯ ಇದೆ.ಕರಾವಳಿ ನಿಯಂತ್ರಣ ವಲಯ(ಸಿಆರ್‌ಝೆಡ್)ದಲ್ಲಿ ಹಾಗೂ ಅದರಾಚೆಯ ಪ್ರದೇಶಗಳೆರಡರಲ್ಲೂ ಕಾನೂನುಬದ್ಧ ಮರಳುಗಾರಿಕೆ ನಡೆಯುತ್ತಿಲ್ಲ.ಮರಳು ಕಳ್ಳಸಾಗಣೆಗೆ ಜಿಲ್ಲಾಡಳಿತ ಕಡಿವಾಣ ಹಾಕಿದೆ.ಹಾಗಾಗಿ ನಿರ್ಮಾಣ ಚಟುವಟಿಕೆ ದುಸ್ತರವಾಗಿ ಪರಿಣಮಿಸಿದೆ ಎಂದು ಕೊಟ್ಟಾರಿ ಹೇಳಿದರು.

ಕಾನೂನುಬದ್ಧವಾಗಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಿದರೆ ಮರಳು ಅಕ್ರಮ ಮಾರಾಟ ತಪ್ಪಲಿದೆ.ಸರ್ಕಾರಕ್ಕೂ ರಾಯಧನ ಸಿಗಲಿದೆ.ಸಿಆರ್‌ಝೆಡ್ ಆಚೆಯ ಪ್ರದೇಶದಲ್ಲಿ ಮರಳು ದಿಬ್ಬಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಗುತ್ತಿಗೆದಾರರು ವಾಹನ ತೂಗುವ ಉಪಕರಣ ಅಳವಡಿಸಿಲ್ಲ.ಹಾಗಾಗಿ ಆ ಮರಳು ಸಾಗಾಟಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅವಕಾಶ ಕಲ್ಪಿಸುತ್ತಿಲ್ಲ.ಸಿಆರ್‌ಝೆಡ್ ವ್ಯಾಪ್ತಿಯಲ್ಲೂ ಆಗಸ್ಟ್ ತಿಂಗಳ ಬಳಿಕ ಮರಳು ಪೂರೈಕೆ ಆರಂಭಿಸುವ ಭರವಸೆ ಇನ್ನೂ ಈಡೇರಿಲ್ಲ ಎಂದು ಅವರು ದೂರಿದರು.
ನಮ್ಮ ಹೋರಾಟಕ್ಕೆ ಸಿವಿಲ್ ಎಂಜಿನಿಯರ್ ಅಸೋಸಿಯೇಷನ್, ಕೆನರಾ ಬಿಲ್ಡರ್ ಅಸೋಸಿಯೇಷನ್, ಕ್ರೆಡೈ ಬಿಲ್ಡರ್ ಅಸೋಸಿಯೇಷನ್, ಸಿಮೆಂಟ್, ಸ್ಟೀಲ್ ಮಾರಾಟಗಾರರ ಅಸೋಸಿಯೇಷನ್, ಪೇಂಟ್, ಹಾರ್ಡ್ವೇರ್ ಮಾರಾಟಗಾರರ ಅಸೋಸಿಯೇಷನ್, ಪಿಡಬ್ಲೂö್ಯಡಿ ಕಂಟ್ರಾಕ್ರ‍್ಸ್ ಅಸೋಸಿಯೇಷನ್, ಮಂಗಳೂರು ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘದವರು ಬೆಂಬಲ ಘೋಷಿಸಿದ್ದಾರೆ ಎಂದು ಕೊಟ್ಟಾರಿ ತಿಳಿಸಿದರು.

ಕ್ರೆಡೈ ಬಿಲ್ಡರ್ ಅಸೋಸಿಯೇಷನ್‌ನ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ್ ಪಿಂಟೋ ಮಾತನಾಡಿ,ಸದ್ಯಕ್ಕೆ ಜಿಲ್ಲೆಯಲ್ಲಿ 60 ದೊಡ್ಡ ಕಟ್ಟಡ ನಿರ್ಮಾಣ ಯೋಜನೆಗಳು ಹಾಗೂ 400ರಷ್ಟು ಸಣ್ಣಮಟ್ಟದ ಕಟ್ಟಡ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ.ಕೆಲವು ಬಿಲ್ಡರ್‌ಗಳು ಎಂ.ಸ್ಯಾAಡ್ ಬಳಸಿ ನಿರ್ಮಾಣ ಚಟುವಟಿಕೆ ಮುಂದುವರಿಸುತ್ತಿ‌ದ್ದೇವೆ.ಎಂ.ಸ್ಯಾಂಡ್ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಮತ್ತು ಜನ ಇದನ್ನು ಬಳಸಲು ಹಿಂದೇಟು ಹಾಕುತ್ತಾರೆ. ಎಲ್ಲ ಬಿಲ್ಡರ್‌ಗಳು ಕಾಮಗಾರಿಗಳನ್ನು ಸಂಪೂರ್ಣ ನಿಲ್ಲಿಸಬೇಕಾಗುತ್ತದೆ.ಇದರಿಂದ ಮೇಸ್ತಿçಗಳು, ಮರದ ಕೆಲಸಗಾರರು, ಕಬ್ಬಿಣದ ಕೆಲಸಗಾರರು, ಎಂಜಿನಿಯರ್‌ಗಳು ಹಾಗೂ ಕೂಲಿಕಾರ್ಮಿಕರು, ಕೆಲಸವಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಸಿವಿಲ್ ಎಂಜಿನಿರ‍್ಸ್ ಅಸೋಸಿಯೇಷನ್‌ನ ವಿಜಯವಿಷ್ಣು ಮಯ್ಯ ಮಾತನಾಡಿ,12 ವರ್ಷಗಳಿಂದ ಮರಳು ಸಮಸ್ಯೆ ಇದೆ. ಇದನ್ನು ಬಗೆಹರಿಸಲು ಕರಾವಳಿಗೆ ಪ್ರತ್ಯೇಕ ಮರಳು ನೀತಿಯ ಅಗತ್ಯ ಇದೆ.ಆದರೆ ಇಲ್ಲಿನ ಜನಪ್ರತಿನಿಧಿಗಳು ಈ ಸಮಸ್ಯೆ ನೀಗಿಸಲು ಆಸಕ್ತಿಯನ್ನೇ ತೋರುತ್ತಿಲ್ಲ ಎಂದರು.ಕೆನರಾ ಬಿಲ್ಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಸಿವಿಲ್ ಕಾಂಟ್ರಾಕ್ರ‍್ಸ್ ಅಸೋಸಿಯೇಷನ್‌ನ ಖಜಾಂಚಿ ಏಕನಾಥ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here