ಕಲ್ಟಿನ್ನೋ ಇನ್ನೋವೇಶನ್ ಹಬ್ ಚಾಲೆಂಜ್-ವಾಟರ್ ಹೀಟರ್‌ನ ಕಾಯಿಲ್‌ಗಳ ಮೇಲೆ ಗಡಸು ನೀರಿನ ಪರಿಣಾಮ-ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ನೂತನ ಆವಿಷ್ಕಾರ ಮತ್ತು ಕೌಶಲ್ಯದ ಗಮನಾರ್ಹ ಪ್ರದರ್ಶನದ ಮೂಲಕ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವು ಪ್ರತಿಷ್ಟಿತ ಕಲ್ಟಿನ್ನೋ ಇನ್ನೋವೇಶನ್ ಹಬ್ ಚಾಲೆಂಜಿನ ಅಂತಿಮ ಹಂತಕ್ಕೆ ತಲುಪುವ ಮೂಲಕ ಅಸಾಧಾರಣ ಸಾಧನೆಯನ್ನು ಮಾಡಿದ್ದಾರೆ. ಕಲ್ಟಿನ್ನೋ ಸಂಸ್ಥೆಯು ಆಯೋಜಿಸಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆಯು ಗುರುತಿಸಲ್ಪಟಿದ್ದು, ಯೋಜನೆಯ ಅಂತಿಮ ಹಂತದ ಅಭಿವೃದ್ಧಿಗೆ 25000 ರೂ ಗಳ ಅನುದಾನ ದೊರಕಿದೆ.

ಎಲೆಕ್ಟ್ರಿಕಲ್ ವಾಟರ್ ಹೀಟರ್‌ನ ಕಾಯಿಲ್‌ಗಳ ಮೇಲೆ ಗಡಸು ನೀರಿನ ಪರಿಣಾಮವನ್ನು ಕಡಿಮೆಮಾಡುವ ಸವಾಲಿನ ಸ್ಪರ್ಧೆ ಇದಾಗಿದ್ದು, ಸ್ಪರ್ಧೆಯುದ್ದಕ್ಕೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಕೌಶಲ ಹಾಗೂ ಹೊಸತನವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರಮಟ್ಟದ ತಂಡಗಳೊಂದಿಗೆ ಸ್ಪರ್ಧಿಸಿ ಅಂತಿಮ ಹಂತಕ್ಕೆ ತಲುಪಿದ್ದಾರೆ. ಸೂಕ್ತ ಪರಿಹಾರದ ಜತೆಗೆ ಶಕ್ತಿಯ ಪರಿಣಾಮಕಾರೀ ಸದ್ಭಳಕೆ, ಕಡಿಮೆ ವೆಚ್ಚ ಹಾಗೂ ಪರಿಸರ ಸ್ನೇಹಿ ಯೋಜನೆಗಳ ಮೂಲಕ ಆಯೋಜಕರ ಗಮನ ಸೆಳೆದಿದ್ದಾರೆ. ದೊರೆತ ಅನುದಾನವನ್ನು ಬಳಸಿ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಮತ್ತು ಮುಂದಿನ ಹಂತದ ಸ್ಪರ್ಧೆಗೆ ಮಾದರಿಯನ್ನು ಸಜ್ಜುಗೊಳಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ನಾವೀನ್ಯತೆಯನ್ನು ಬೆಳೆಸುವ ಮೂಲಕ ಅವರಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಕಾಲೇಜು ನಿರಂತರವಾಗಿ ಮಾಡುತ್ತಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಜೀವಿತ್.ಎಸ್, ಸಾತ್ವಿಕ್.ವಿ.ನಾಯಕ್, ಸಾಕ್ಷಿ ಶೆಟ್ಟಿ.ಪಿ, ಆಕಾಂಕ್ಷ್ ರೈ, ಅಶ್ವೀಜಾ.ಯು.ಪೈ, ನಿಪುಣ್.ಕೆ.ಎಲ್, ಸುಜಿತ್, ಜೋತಿಶ್ ರಾಫೆಲ್ ಜೋಸೆಫ್ ಮತ್ತು ಹರ್ಷಿತಾ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಯೋಜನೆಯ ಯಶಸ್ಸು ಅನೇಕ ನವೋದ್ಯಮಗಳ ಪ್ರಾರಂಭಕ್ಕೆ ಸಹಕಾರಿಯಾಗಲಿದ್ದು, ಅಂತಿಮ ಹಂತದ ಫಲಿತಾಂಶಕ್ಕೆ ಕುತೂಹಲದಿಂದ ಕಾಯುವಂತೆ ಮಾಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here