ಉಪ್ಪಿನಂಗಡಿ ಸಾಮಾನ್ಯ ಸಭೆಯಲ್ಲಿ ಮತ್ತದೇ ಹಾಡು… ಮತ್ತದೇ ರಾಗ…!
ಉಪ್ಪಿನಂಗಡಿ: ನದಿಗೆ ತ್ಯಾಜ್ಯ ನೀರು ಹರಿಯ ಬಿಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಈ ಹಿಂದಿನಂತೆ ಈ ಬಾರಿಯ ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದ್ದು, ಈ ಬಗ್ಗೆ ಚರ್ಚೆಯಾಗಿ ಬಳಿಕ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅಬ್ದುರ್ರಹ್ಮಾನ್ ಕೆ., ಬಿಳಿಯೂರು ಗ್ರಾಮದಲ್ಲಿ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ರಚನೆಯಾಗಿದೆ. ಇನ್ನು ಕೆಲ ತಿಂಗಳುಗಳಲ್ಲಿ ಈ ಅಣೆಕಟ್ಟಿಗೆ ಗೇಟು ಅಳವಡಿಸಿ, ನೀರು ನಿಲ್ಲಿಸುವ ಕಾರ್ಯ ನಡೆಯಲಿದೆ. ಇದರಿಂದಾಗಿ ಈ ಭಾಗದ ಹಳೆಗೇಟುವರೆಗೆ ನೀರು ನಿಲ್ಲುವ ಸಾಧ್ಯತೆಯಿದೆ. ಆದರೆ ಉಪ್ಪಿನಂಗಡಿಯಲ್ಲಿ ಹೆಚ್ಚಿನ ವಸತಿ, ವಾಣಿಜ್ಯ ಸಂಕೀರ್ಣ, ಹೊಟೇಲ್‌ಗಳ ತ್ಯಾಜ್ಯವನ್ನು ನದಿ ನೀರಿಗೆ ಹರಿಯಬಿಡಲಾಗುತ್ತಿದೆ. ಇದರಿಂದ ನದಿಯಲ್ಲಿ ನಿಂತ ನೀರು ಮಲೀನವಾಗುವ ಸಾಧ್ಯತೆಯಿದ್ದು, ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆಯಲ್ಲದೆ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಸುರೇಶ್ ಅತ್ರೆಮಜಲು, ಇದೊಂದು ಗಂಭೀರ ಸಮಸ್ಯೆ. ಒಂದನೇ ವಾರ್ಡ್‌ನ ಸದಸ್ಯೆಯಾಗಿರುವ ವಿದ್ಯಾಲಕ್ಷ್ಮೀ ಪ್ರಭು ಈ ಬಗ್ಗೆ ಹಲವು ಹೋರಾಟವನ್ನು ನಡೆಸಿದ್ದಾರೆ. ಇದೀಗ ಅವರೇ ಉಪಾಧ್ಯಕ್ಷೆಯಾಗಿರುವುದರಿಂದ ತ್ಯಾಜ್ಯ ನೀರು ನದಿಗೆ ಬಿಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ನಾವು ಅವರಿಗೆ ಸಂಪೂರ್ಣ ಬೆಂಬಲ ನೀಡೋಣ ಎಂದರು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿ, ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯ ಗುತ್ತಿಗೆದಾರರು ಕಾಮಗಾರಿ ಸಂದರ್ಭ ಅನಾಧಿಕಾಲದಿಂದ ಇದ್ದ ಕುಡಿಯುವ ನೀರಿನ ಪೈಪು ಲೈನು ಒಡೆದು ಹಾಕಿರುವುದರಿಂದ ಹಲವು ವಾರ್ಡ್‌ಗಳಿಗೆ ನೀರಿನ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಅಬ್ದುಲ್ ರಶೀದ್ ತಿಳಿಸಿದರು. ಸದಸ್ಯ ಲೊಕೇಶ್ ಬೆತ್ತೋಡಿ ಮಾತನಾಡಿ, ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇಲ್ಲಿನ ಸಮಸ್ಯೆ ಕುರಿತು ವಿವರಣೆಯೊಂದಿಗೆ ಪೈಪ್‌ಲೈನ್‌ಗಳ ತೆರವಿಗೆ ಅಂದಾಜು ಪಟ್ಟಿ ರಚಿಸಿ ಕಳುಹಿಸಿಕೊಡುವಂತೆ ತಿಳಿಸಿದರು. ಇದರಂತೆ ನಿರ್ಣಯ ಕೈಗೊಳ್ಳಲಾಯಿತು.
ಸದಸ್ಯ ಧನಂಜಯ ನಟ್ಟಿಬೈಲು ಮಾತನಾಡಿ, ಗಾಂಧಿಪಾರ್ಕ್‌ನಲ್ಲಿ ರಾಜೇಶ ನಾಯಕ್ ಎಂಬವರಿಗೆ ಸೇರಿದ ವಾಣಿಜ್ಯ ಸಂಕೀರ್ಣಕ್ಕೆ ಕಟ್ಟಡ ಪರವಾನಿಗೆ ನೀಡುತ್ತಿಲ್ಲ. ಇಲ್ಲಿ ಬಡವರಿಗೆ ಮತ್ತು ಶ್ರೀಮಂತರಿಗೆ ಬೇರೆ ಕಾನೂನುಗಳಿದ್ದರೆ ತಿಳಿಸಿ ಗ್ರಾಮದಲ್ಲಿ ಎಲ್ಲಾ ಕಟ್ಟಡಗಳನ್ನು ರಸ್ತೆ ಮಾರ್ಜಿನ್ ಬಿಟ್ಟು ಕಟ್ಟಲಾಗಿದೆಯೇ ನೋಡಿ. ಸುಮ್ಮನೆ ಇಲ್ಲಿ ಮಾತ್ರ ಸಮಸ್ಯೆ ಹುಟ್ಟುಹಾಕಬೇಡಿ ಎಂದರು. ಹೊಸ ಬಸ್ ನಿಲ್ದಾಣದಲ್ಲಿ ರಿಕ್ಷಾ ಪಾರ್ಕಿಂಗ್‌ಗೆ ಗೇಟು ಅಳವಡಿಸಿರುವ ಕುರಿತಂತೆ ಸಂಘಟನೆ ಪದಾಧಿಕಾರಿಗಳನ್ನು ಕರೆದು ವಿಚಾರವನ್ನು ಮನವರಿಕೆ ಮಾಡುವಂತೆ ಗ್ರಾ.ಪಂ. ಪಿಡಿಒ ಅವರಿಗೆ ಹೊಣೆ ಹೊರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಶೋಭಾ, ರುಕ್ಮಿಣಿ, ಜಯಂತಿ, ಸಂಜೀವ ಮಡಿವಾಳ, ಇಬ್ರಾಹೀಂ, ನೆಬಿಸಾ, ಸೌಧ, ಉಷಾ ನಾಯ್ಕ, ವಿನಾಯಕ ಪೈ ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಗೀತಾ ವಂದಿಸಿದರು.
ಗ್ರಾ.ಪಂ. ಸದಸ್ಯೆ ಉಷಾ ಮುಳಿಯ ಮಾತನಾಡಿ, ಪಟ್ಟಣದ ಬ್ಯಾಂಕ್ ರಸ್ತೆಯಲ್ಲಿ ಫುಟ್‌ಪಾತ್ ತುಂಬಾ ಅನಧಿಕೃತ ಅಂಗಡಿಗಳೇ ತುಂಬಿ ಹೋಗಿವೆ. ವಾಹನಗಳಲ್ಲಿ ಹಣ್ಣು ಹಂಪಲು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಮಾರಾಟ ಮಾಡುವುದರಿಂದ ಪಾದಚಾರಿಗಳಿಗೆ ನಡೆದಾಡಲೂ ಜಾಗವಿಲ್ಲದಂತಾಗಿದೆ ಎಂದರು. ಸದಸ್ಯೆ ವನಿತಾ ಮಾತನಾಡಿ, ನಮ್ಮ ಮಹಿಳಾ ಸದಸ್ಯೆಯೋರ್ವರು ಅದೇ ದಾರಿಯಲ್ಲಿ ತೆರಳುತ್ತಿದ್ದಾಗ ಇದೇ ಫುಟ್‌ಪಾತ್ ವ್ಯಾಪಾರಿಗಳು ಅವರನ್ನು ನೋಡಿ ಉಗುಳುವ ಮೂಲಕ ನಮ್ಮನ್ನು ಹೀಯಾಳಿಸುವ ಚಾಳಿ ನಡೆಸುತ್ತಿದ್ದಾರೆ ಎಂದರು. ಈ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಮೀನು ಮಾರಾಟದ ವಾಹನ ಕೂಡಾ ನಡು ಪೇಟೆಯಲ್ಲಿ ವ್ಯಾಪಾರ ನಡೆಸುತ್ತಿರುವುದು ಕುರಿತಾಗಿಯೂ ಚರ್ಚೆಗಳಾಯಿತು. ಸದಸ್ಯ ಯು.ಟಿ. ತೌಸೀಫ್ ಮಾತನಾಡಿ ಪಿಡಿಒ ಅವರು ಹಲವು ಬಾರಿ ಅಲ್ಲಿ ತೆರಳಿ ಎಚ್ಚರಿಕೆ ನೀಡಿದ್ದಾರೆ. ಆದರೂ ಅವರು ಮತ್ತೆ ಅಲ್ಲಿಯೇ ವ್ಯಾಪಾರ ನಡೆಸುತ್ತಿದ್ದಾರೆ. ಆದ್ದರಿಂದ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರಗಿಸಿ ಎಂದು ಸಲಹೆ ನೀಡಿದರು.