ನರೇಂದ್ರ ಪ.ಪೂ.ಕಾಲೇಜಿನಲ್ಲಿ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಕಾರ‍್ಯಕ್ರಮ

0

ಪುತ್ತೂರು: ವಾಹನಗಳ ವೇಗದ ಮಿತಿ ಕಡಿಮೆಗೊಳಿಸಿ ಪ್ರತಿಯೊಬ್ಬರು ತಾಳ್ಮೆಯಿಂದ ವಾಹನ ಚಾಲನೆ ಮಾಡಿದಾಗ ಎಷ್ಟೋ ಅಫಘಾತಗಳನ್ನು ತಡೆಯಲು ಸಾಧ್ಯವಿದೆ. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವುದರೊಂದಿಗೆ ರಸ್ತೆ ಸಂಚಾರಿ ಕಾನೂನುಗಳನ್ನು ತಿಳಿದುಕೊಂಡು ವಾಹನ ಚಾಲನೆ ಮಾಡುವುದು ಸೂಕ್ತ. ಕಾನೂನು ಉಲ್ಲಂಘನೆ ಆಗದಂತೆ ಪ್ರತಿಯೊಬ್ಬ ಚಾಲಕನೂ ಕೂಡ ಎಚ್ಚರ ವಹಿಸಬೇಕು. ರಸ್ತೆ ಸುರಕ್ಷತಾ ಕ್ರಮ ಹಾಗೂ ಸಂಚಾರ ನಿಯಮಗಳು ಕೇವಲ ಪೊಲೀಸರಿಗೆ ಸಂಬಂಧಿಸಿದ್ದಲ್ಲ. ಅದು ಸಾರ್ವಜನಿಕರ ಹೊಣೆಗಾರಿಕೆ. ಪ್ರತಿಯೊಬ್ಬರಲ್ಲೂ ರಸ್ತೆ ಸುರಕ್ಷತೆ ಬಗ್ಗೆ ಕನಿಷ್ಟ ಮಟ್ಟದ ತಿಳಿವಳಿಕೆ ಇದ್ದರೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ದ.ಕ. ಜಿಲ್ಲೆಯ ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಧರ್ಮಪ್ಪ ಹೇಳಿದರು.ನರೇಂದ್ರ ಪ.ಪೂ.ಕಾಲೇಜಿನಲ್ಲಿ ಆಯೋಜಿಸಿದ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.


ಪುತ್ತೂರು ಸಂಚಾರಿ ಠಾಣೆಯ ಪೋಲೀಸ್ ಉಪನಿರೀಕ್ಷಕರಾದ ಉದಯರವಿ ಮಾತನಾಡುತ್ತಾ, ಕೆಲವು ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸದೆ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸವಾರಿ ಮಾಡುವ ಸಂದರ್ಭದಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ವೇಗವಾಗಿ ಸವಾರಿ ಮಾಡಿದರೆ ಅಪಘಾತವಾಗುವ ಸಂಭವವಿದೆ ಎಂಬ ಅರಿವು ಸವಾರನಿಗೂ ಕೂಡಾ ಅವಶ್ಯವಾಗಿದೆ. ಸವಾರರು ರಸ್ತೆ ಸಂಚಾರ ನಿಯಮ ಪಾಲಿಸುವದರ ಜೊತೆಗೆ ಹೆಲ್ಮೆಟ್ ಬಳಸಿ ಸುರಕ್ಷಿತ ಸವಾರಿ ಮಾಡಬೇಕೆಂದು ತಿಳಿಸಿದರು.

ಸಂಚಾರಿ ನಿಯಮಗಳ ಉಲ್ಲಂಘನೆ ಕಾನೂನು ದೃಷ್ಟಿಯಲ್ಲಿ ಅಪರಾಧವಾದ್ದರಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ .ಇಂತಹ ಅಪರಾಧವನ್ನು ತಡೆಗಟ್ಟುವಲ್ಲಿ ತಾವೆಲ್ಲರೂ ಸಹಕರಿಸಬೇಕು. ಎಂದು ಹೇಳಿದರು. ರಸ್ತೆ ಪಕ್ಕದಲ್ಲಿ ಅಳವಡಿಸಿರುವ ಸಂಚಾರ ನಿಯಮ ಫಲಕಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.ರಕ್ಷಣೆಯ ಸೇವೆಗೆ ಬೇಕಾದ ತುರ್ತು ಸಹಾಯವಾಣಿಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.


ಕಾರ‍್ಯಕ್ರಮದಲ್ಲಿ ಪುತ್ತೂರು ಸಂಚಾರಿ ಠಾಣೆಯ ಪೋಲೀಸ್ ಉಪನಿರೀಕ್ಷಕರಾದ ಕುಟ್ಟಿ ಎಮ್.,ಹೆಡ್ ಕಾನ್‌ಸ್ಟೇಬಲ್‌ಗಳಾದ ಪ್ರಶಾಂತ್ ರೈ,ದಿನೇಶ್ ಮತ್ತು ಪೋಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ‍್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ರೇಣುಕಾ ಸ್ವಾಗತಿಸಿ,ಪುತ್ತೂರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಆದ ದಿನೇಶ್ ವಂದಿಸಿದರು.

LEAVE A REPLY

Please enter your comment!
Please enter your name here