ಪೇರಲ್ತಡ್ಕ: ಚರಂಡಿಯಲ್ಲಿ ಹರಿಯುತ್ತಿದೆ ಫ್ಲ್ಯಾಟ್‌ನ ಕೊಳಚೆ ನೀರು-ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನತೆ

0

ಪುತ್ತೂರು:ಬೆಟ್ಟಂಪಾಡಿ ಗ್ರಾ.ಪಂ ವ್ಯಾಪ್ತಿಯ ಪೇರಲ್ತಡ್ಕದಲ್ಲಿರುವ ಖಾಸಗಿ ವಸತಿ ಸಮುಚ್ಚಯದ ಕೊಳಚೆ ನೀರು ರಸ್ತೆ ಬದಿಯ ಚರಂಡಿಯಲ್ಲಿ ಹರಿಯುತ್ತಿದ್ದು ಪರಿಸರದಲ್ಲಿ ದುರ್ನಾತ ಬೀರುತ್ತಿದೆ ಎಂದು ದೂರು ವ್ಯಕ್ತವಾಗಿದೆ.ಕಳೆದ ಹಲವು ದಿನಗಳಿಂದ ಸಮುಚ್ಚಯದ ನೀರನ್ನು ಪೈಪ್ ಮೂಲಕ ಮುಖ್ಯರಸ್ತೆಯ ಚರಂಡಿ ಮೂಲಕ ಹರಿಯ ಬಿಡಲಾಗುತ್ತಿದೆ.ಇದರಿಂದ ಪರಿಸರದಲ್ಲಿ ಗಬ್ಬು ನಾತ ಬೀರುತ್ತಿದೆ.ಇದಲ್ಲದೆ ಕೆಲವು ಮನೆಗಳ ಕೊಳಚೆ ನೀರು ಕೂಡ ಚರಂಡಿಯಲ್ಲಿ ಹರಿಯಬಿಡಲಾಗುತ್ತಿದೆ.ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿರುವ ಸಾರ್ವಜನಿಕರು,ಇದರ ಬಗ್ಗೆ ಗ್ರಾಮ ಪಂಚಾಯತ್‌ನ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮಕೈಗೊಂಡಿರುವುದಿಲ್ಲ.ಕೊಳಚೆ ನೀರು ಚರಂಡಿಯಲ್ಲಿ ನಿರಂತರವಾಗಿ ಹರಿಯುತ್ತಿದೆ.ಜನರ ಆರೋಗ್ಯದ ದೃಷ್ಠಿಯಿಂದ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


ರಸ್ತೆ ಬದಿ ತ್ಯಾಜ್ಯ: ಇರ್ದೆಯಿಂದ ದೂಮಡ್ಕ ರಸ್ತೆಯ ಇಕ್ಕೆಲಗಳಲ್ಲಿ ಗ್ರಾ.ಪಂ ಸದಸ್ಯರ ನೇತೃತ್ವದಲ್ಲಿ ಗಿಡ, ಗಂಟಿಗಳನ್ನು ತೆರವುಗೊಳಿಸಿ, ತ್ಯಾಜ್ಯವನ್ನು ತರೆವುಗೊಳಿಸಿ ಕೆಲವು ದಿನಗಳ ಹಿಂದೆ ಸ್ವಚ್ಛಗೊಳಿಸಲಾಗಿತ್ತು.ಇದೀಗ ಮತ್ತೆ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯಗಳನ್ನು ತುಂಬಿಸಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.ಪ್ಲಾಸ್ಟಿಕ್ ಬಾಟಲಿಗಳು, ಮದ್ಯ, ಬಿಯರ್ ಬಾಟಲಿಗಳು ರಸ್ತೆಯ ಇಕ್ಕೆಲಗಳ ಚರಂಡಿಯಲ್ಲಿ ಎಸೆದಿರುವುದು ಕಂಡು ಬರುತ್ತಿದೆ.


ಅಪಾಯಕಾರಿ ಮರಗಳು: ಇರ್ದೆ-ದೂಮಡ್ಕ ರಸ್ತೆಯ ಪಂಜೊಟ್ಟು ಎಂಬಲ್ಲಿ ಬೃಹದಾಕಾರದ ಮರದ ಕೊಂಬೆಗಳು ವಿದ್ಯುತ್ ಹೈ ಟೆನ್ಶನ್ ಲೈನ್‌ನ ಮೇಲೆಯೇ ವಾಲಿ ನಿಂತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ.ನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು ಸಂಭಾವ್ಯ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here