ಸುಲಲಿತ ವಾಹನ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸಾರ್ವಜನಿಕರ ಆಗ್ರಹ
ಬರಹ: ಸುಧಾಕರ್ ಕಾಣಿಯೂರು
ಕಾಣಿಯೂರು: ಹೇಳೋಕೆ ಹೋದರೆ ಇದು ರಾಜ್ಯದ ಹೆಸರಾಂತ ಪುಣ್ಯ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ. ಈ ರಸ್ತೆಯಲ್ಲಿ ಬಹುತೇಕ ಕಡೆ ಹೊಂಡ ಗುಂಡಿಗಳದ್ದೇ ಕಾರುಬಾರು. ಪುತ್ತೂರು -ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ಪುತ್ತೂರಿನಿಂದ ಕೆಲ ದೂರದಲ್ಲಿಯೇ ಇರುವ ಮರೀಲಿನಿಂದ ಪುರುಷರಕಟ್ಟೆಯವೆರೆಗೆ ರಸ್ತೆ ತುಂಬಾ ಹೊಂಡ ಗುಂಡಿಗಳಿಂದ ಕೂಡಿದೆ. ಇಲ್ಲಿ ಸರಿಯಾದ ರಸ್ತೆಯೇ ಕಾಣಸಿಗದು. ಹೊಂಡಮಯವಾಗಿರುವ ಈ ರಸ್ತೆಯಲ್ಲಿ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯ ಪರಿಸ್ಥಿತಿ.ಇಲ್ಲಿರುವ ಗುಂಡಿಗಳು ಸವಾರರ ಮತ್ತು ಪ್ರಯಾಣಿಕರ ಹೃದಯಬಡಿತ ಹೆಚ್ಚಿಸುವಂತಿವೆ. ಸ್ವಲ್ಪ ಎಚ್ಚರ ತಪ್ಪಿದರೂ, ವಾಹನ ಹೊಂಡಕ್ಕೆ ಬೀಳುವುದು ಖಚಿತ. ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಕಾಸರಗೋಡು ಭಾಗದಿಂದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಚರಿಸುವ ಯಾತ್ರಾರ್ಥಿಗಳು ಪುತ್ತೂರು ಕಾಣಿಯೂರು – ಸುಬ್ರಹ್ಮಣ್ಯ ರಸ್ತೆಯನ್ನೇ ಅವಲಂಬಿಸಿರುವುದರಿಂದ ದಿನ ನಿತ್ಯ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಚಲಿಸುತ್ತಿರುತ್ತವೆ. ಮರೀಲಿನಲ್ಲಿ ತಿರುವು ಬಳಿ ರಸ್ತೆಯಲ್ಲಿ ಹೊಂಡ ಗುಂಡಿಗಳಿದ್ದು, ಸಂಚಾರಕ್ಕೆ ಅಸಾಧ್ಯವಾಗಿದೆ. ಇಲ್ಲಿ ಹಲವಾರು ವಾಹನ ಅಪಘಾತಗಳು ನಡೆದರೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಿಲ್ಲ. ಸುಲಲಿತವಾಗಿ ವಾಹನ ಸಂಚರಿಸುವಂತೆ ಮಾಡಲು ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ರಸ್ತೆಯಲ್ಲಿ ಸಂಚಾರ ಅಂದರೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ. ರಸ್ತೆಯಲ್ಲಿ ಹಲವಾರು ಹೊಂಡ ಗುಂಡಿಗಳು ಇರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಈ ರಸ್ತೆಯನ್ನು ಮರು ಡಾಮರೀಕರಣ ಮಾಡಿ ಅಭಿವೃದ್ಧಿಪಡಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು.
ಚಂದ್ರಶೇಖರ್, ವಾಹನ ಸವಾರ