ಕಜೆಕ್ಕಾರ್‌ನ ಶ್ರೀ ಸತ್ಯಸಾರಮಾನಿ ಸಪರಿವಾರ ದೈವಗಳ ಪುನರ್ ನವೀಕರಣ, ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

0

ಮೂಲ ಪರಂಪರೆ, ಸಂಪ್ರದಾಯಗಳನ್ನು ಪಾಲಿಸುವುದೇ ಧರ್ಮ ರಕ್ಷಣೆ: ಸಾಧ್ವಿ ಶ್ರೀ ಮಾತಾನಂದಮಯಿ


ಉಪ್ಪಿನಂಗಡಿ: ಆಧ್ಯಾತ್ಮದ ತಳಹದಿ ಭಾರತವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನಮ್ಮ ಮೂಲ ಪರಂಪರೆ, ಆಚರಣೆ, ಸಂಪ್ರದಾಯಗಳನ್ನು ಆಚರಿಸಿಕೊಂಡು ಹೋಗುವುದೇ ಧರ್ಮ ರಕ್ಷಣೆಯಾಗಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ತಿಳಿಸಿದರು.


ಕಜೆಕ್ಕಾರ್‌ನ ಶ್ರೀ ಸತ್ಯಸಾರಮಾನಿ ಸಪರಿವಾರ ದೈವಗಳ ಪುನರ್ ನವೀಕರಣ, ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನ.4ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದ ಅವರು, ಮಾಡುವ ಕೆಲಸದಲ್ಲಿ ಪ್ರಯತ್ನ, ದೃಢ ಸಂಕಲ್ಪವಿದ್ದಾಗ ದೇವರ ಅನುಗ್ರಹ ದೊರಕಲು ಸಾಧ್ಯವಿದೆ. ದೈವಸ್ಥಾನಗಳ ಜೀರ್ಣೋದ್ಧಾರ ಮಾಡುವ ಮೂಲಕ ಕಜೆಕ್ಕಾರಿನಲ್ಲಿ ಧರ್ಮ ಜಾಗೃತಿಯ ಕಾರ್ಯ ಆಗಿದ್ದು, ಇಂದು ಬೆಳಗಿದ ಬೆಳಕು ಶಾಶ್ವತವಾಗಿ ಪ್ರಾಜಲ್ಯಮಾನ್ಯವಾಗಿ ಬೆಳಗುವ ಕೆಲಸವಾಗಬೇಕು. ಆಗ ಸಾನಿಧ್ಯ ವೃದ್ಧಿಯಾಗಲು ಸಾಧ್ಯವಿದೆಯಲ್ಲದೆ, ಸತ್ಕಾರ್ಯ, ಸದ್ಗುಣ, ಪ್ರಾಮಾಣಿಕತೆಯಿದ್ದಲ್ಲಿ ನಮ್ಮ ಜೀವನವು ಶಾಶ್ವತವಾಗಲಿದೆ ಎಂದರು.


ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಮಾತನಾಡಿ, ಒಂದು ಸಮುದಾಯದೊಂದಿಗೆ ಇತರ ಸಮುದಾಯಗಳು ಕೂಡಿಕೊಂಡಾಗ ಶಕ್ತಿ ಜಾಸ್ತಿ ಸಿಗುತ್ತದೆ. ಇಂದು ಜೀರ್ಣೋದ್ಧಾರಗೊಂಡ ದೈವಸ್ಥಾನದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಬೇಕು. ಹಿಂದೂ ಸಂಸ್ಕೃತಿಯಡಿಯಲ್ಲಿ ನಾವೆಲ್ಲಾ ಸಂಘಟಿತರಾಗಬೇಕು. ಯಾವುದೇ ಕೀಳರಿಮೆ ತೋರಿಸದೇ, ಇತರರೊಂದಿಗೆ ಪ್ರತ್ಯೇಕವಾಗಿರದೇ ಎಲ್ಲರೊಂದಿಗೆ ಬೆರೆತು ಬದುಕಬೇಕು ಎಂದರಲ್ಲದೆ, ಇಲ್ಲಿ ದೈವಸ್ಥಾನದ ಉಪಯೋಗಕ್ಕೆ ಒಂದು ಕೊಠಡಿಯನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಏಕ ಮನಸ್ಸಿನಿಂದ ಎಲ್ಲರೂ ಒಗ್ಗೂಡಿದಾಗ ಮಾತ್ರ ಇಂತಹ ಕೆಲಸಗಳು ನಡೆಯಲು ಸಾಧ್ಯ. ಈ ಕ್ಷೇತ್ರ ಇನ್ನಷ್ಟು ಬೆಳಗುವುದರೊಂದಿಗೆ ಜನರ ಅಭಿವೃದ್ಧಿಯೂ ಆಗಲಿ ಎಂದು ಶುಭ ಹಾರೈಸಿದರು.


ಉಪನ್ಯಾಸಕ ಡಾ. ರವೀಶ್ ಪಡುಮಲೆ ಮಾತನಾಡಿ, ಸನಾತನ ಹಿಂದೂ ಧರ್ಮದಲ್ಲಿ ಜಾತಿಯ ಪರಿಕಲ್ಪನೆ ಇರಲಿಲ್ಲ. ಅದನ್ನು ಹುಟ್ಟು ಹಾಕಿದವರು ಮಾನವರು. ಎಲ್ಲರೂ ಏಕಭಾವದಲ್ಲಿ ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂಬ ಒಗ್ಗಟ್ಟಿನಿಂದಿದ್ದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಭಜನೆಯ ಮೂಲಕ ಸತ್ಯ, ಧರ್ಮದ, ನ್ಯಾಯದ, ಒಗ್ಗಟ್ಟಿನ ಬದುಕು ನಮ್ಮದಾಗಬೇಕು. ಮೂಲ ಪದ್ಧತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪುತ್ತೂರು ಮಾತನಾಡಿ, ಪಾಳು ಬಿದ್ದು ಹೋಗಿದ್ದ ದೈವಸ್ಥಾನವನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಜೀರ್ಣೋದ್ಧಾರಗೊಳಿಸುವ ಮೂಲಕ ದೈವ ಕ್ಷೇತ್ರವನ್ನು ಬೆಳಗಿಸಿದ ಇಲ್ಲಿನ ಯುವ ಸಮೂಹ ಊರಿಗೆ ಶಕ್ತಿ ನೀಡುವ ಕಾರ್ಯ ಮಾಡಿದೆ. ನಾವು ಯಾವುದನ್ನು ರಕ್ಷಣೆ ಮಾಡಬೇಕೋ ಅದು ನನ್ನದು ಎಂಬ ಭಾವನೆ ಬಂದಾಗ ಮಾತ್ರ ಆ ಕೆಲಸ ನಮ್ಮಿಂದ ಸಾಧ್ಯವಾಗುತ್ತದೆ. ಇದು ಧರ್ಮ ಜಾಗೃತಿಯ ಮೊದಲ ಸೂತ್ರವಾಗಿದೆ ಎಂದರು.


ಆಕಾಶವಾಣಿ ಕಲಾವಿದ ಬಾಬು ಬಳಜ್ಜ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭ ದೈವ ಪರಿಚಾರಕರಾದ ಗುರುವ, ರಾಜೇಶ್ ಹಾಗೂ ದೈವಸ್ಥಾನ ನಿರ್ಮಾಣದ ಕೆಲಸಗಳಲ್ಲಿ ಶ್ರಮಿಸಿದ ಭಾಗ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಶಂಕರ ಭಟ್, ಆದಿ ದ್ರಾವಿಡ ಸಮಾಜದ ಸ್ಥಾಪಕಾಧ್ಯಕ್ಷ ಸೋಮನಾಥ, ಕದಿಕ್ಕಾರು ಬೀಡಿನ ಪ್ರವೀಣ್ ಕುಮಾರ್, ಉದ್ಯಮಿ ನಟೇಶ್ ಪೂಜಾರಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಧನ್ವಂತರಿ ಕ್ಲಿನಿಕ್‌ನ ಡಾ. ನಿರಂಜನ್ ರೈ, ಕಳಿಯ ಗ್ರಾ.ಪಂ. ಕಾರ್ಯದರ್ಶಿ ಕುಂಞಣ್ಣ ಕೆ., ಶ್ರೀ ಸತ್ಯಸಾರಮಾನಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಭಜನಾ ಮಂಡಳಿಯ ಅಧ್ಯಕ್ಷ ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಅಶೋಕ್ ಕುಮಾರ್ ರೈ ನೆಕ್ಕರೆ, ವೆಂಕಪ್ಪ ಗೌಡ ಮರುವೇಲು, ಬಾಲಕೃಷ್ಣ ಶೆಟ್ಟಿ ಕಜೆಕ್ಕಾರು, ಹೊನ್ನಪ್ಪ ಪೂಜಾರಿ, ಜತ್ತಪ್ಪ ಗೌಡ ರಂಗಾಜೆ ಮತ್ತಿತರರು ಉಪಸ್ಥಿತರಿದ್ದರು.


ಶ್ರೀ ಸತ್ಯಸಾರಮಾನಿ ಜೀರ್ಣೋದ್ಧಾರ ಸಮಿತಿಯ ಜೊತೆ ಕಾರ್ಯದರ್ಶಿ ಭಾರತಿ ಮಹಾಲಿಂಗ ಸ್ವಾಗತಿಸಿದರು. ಗೌರವಾಧ್ಯಕ್ಷ ಮಹಾಲಿಂಗ ಕಜೆಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನಾ ವಂದಿಸಿದರು. ಸಂದೇಶ್, ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಥಳೀಯರಿಂದ ಹಾಗೂ ಪುತ್ತೂರಿನ ಡಿಂಡಿಮ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

LEAVE A REPLY

Please enter your comment!
Please enter your name here