ಮರಾಟಿ ಸಮಾಜ ಸೇವಾ ಸಂಘದಿಂದ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಮರಾಟಿ ಸಾಂಸ್ಕೃತಿಕ ಭವನ ನಿರ್ಮಾಣದ ಅನುದಾನಕ್ಕಾಗಿ ಸಂಘದಿಂದ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಭವನದ ಅಂದಾಜು ಪಟ್ಟಿ ಸಹಿತ ನೀಡಬೇಕು. ಅದಕ್ಕೆ ಸಚಿವರ ಮೂಲಕ ಅನುದಾನ ಮಂಜೂರುಗೊಳಿಸಲು ಪ್ರಯತ್ನಿಸಲಾಗುವುದು ಅಲ್ಲದೆ ಶಾಸಕ ನೆಲೆಯಲ್ಲಿಯೂ ವೈಯಕ್ತಿಕವಾಗಿ ಸಹಕಾರ ನೀಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಯುವ ವೇದಿಕೆ ಹಾಗೂ ಮರಾಟಿ ಮಹಿಳಾ ವೇದಿಕೆ ಇವುಗಳ ಆಶ್ರಯದಲ್ಲಿ ನ.5ರಂದು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ನಡೆದ ಗಣಹೋಮ, ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮರಾಟಿ ಸಮಾಜದ ಆಶೀರ್ವಾದಿಂದಾಗಿ ಶಾಸಕನಾಗಿ ವೇದಿಕೆಯಲ್ಲಿ ನಿಲ್ಲಲು ಸಹಕಾರಿಯಾಗಿದೆ. ಸಮಾಜದ ಋಣ ನನ್ನ ಮೇಲಿದೆ. ಈ ಋಣವನ್ನು ಸಮಾಜದ ಪ್ರತಿಯೊಬ್ಬರ ಮನೆಗೆ ತೆರಳಿ ಸಂದಾಯಿಸಲು ಸಾಧ್ಯವಿಲ್ಲ. ಮತ ನಿಡುವ ಮೂಲಕ ನನಗೆ ಸನ್ಮಾನ ಮಾಡಿದ್ದೀರಿ. ಇನ್ನು ನಾನು ನಿಮಗೆ ಸನ್ಮಾನ ಮಾಡಬೇಕಿದೆ ಎಂದರು. ಪ್ರಾಮಾಣಿಕವಾಗಿ, ಭ್ರಷ್ಟಾಚಾರ ರಹಿತವಾಗಿ ಆಡಳಿತ ನೀಡುವ ಮೂಲಕ ಅಕ್ರಮ ಸಕ್ರಮ, 94ಸಿ, 94ಸಿಸಿ ಸೇರಿದಂತೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊಕಿಸಲಾಗುವುದು. ಈಗ ನಾನು ಎಲ್ಲರಿಗೂ ಶಾಸಕ. ನೀವು ಪಕ್ಷ ಯಾವುದೇ ಇರಲಿ. ನನ್ನ ಬಳಿ ಬಂದರೆ ಎಲ್ಲರಿಗೂ ಸೇವೆ ನೀಡಲು ನಾನು ಬದ್ದ ಎಂದ ಅವರು ಪ.ಜಾತಿ, ಪ.ಪಂಗಡದ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದ್ದು ಸಮಾಜದ ಅಭಿವೃದ್ಧಿ ಸಹಕಾರ ನೀಡಲಾಗುವುದು. ಎಂದ ಅವರು ಅ.13ರಂದು ದೀಪಾವಳಿಯ ಅಂಗವಾಗಿ ಟ್ರಸ್ಟ್‌ನ ವತಿಯಿಂದ ಕೊಂಬೆಟ್ಟು ಮೈದಾನನಲ್ಲಿ ವಸ್ತ್ರ ವಿತರಣೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.


ಮುಖ್ಯ ಅತಿಥಿಯಾಗಿದ್ದ ತೆಂಕಿಲ ವಿವೇಕಾನಂದ ಶಾಲಾ ಅಧ್ಯಾಪಕ ರಾಮ ನಾಯ್ಕ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರವು ಮಕ್ಕಳ ಮುಂದಿನ ಬೆಳವಣಿಗೆಗೆ ಪ್ರೇರಣೆಯಾಗಲಿದೆ. ಈ ಕಾರ್ಯಕ್ರಮವು ಸಮಾಜದ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ನಿರಂತರ ಪ್ರೇರಣೆ ನೀಡಿದಾಗಿ ಸಾಧನೆ,ಬೆಳವಣಿಗೆ ಪೂರಕವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಮನೆಯ ಕಾರ್ಯಕ್ರಮದ ವಾತಾವರಣ ನಿರ್ಮಾಣವಾಗಿದ್ದು ನನಗೂ ಸಂಘದ ಸಕ್ರೀಯ ಸದಸ್ಯನ್ನಾಗಿಸುವ ಪ್ರೇರಣೆ ದೊರತಿದೆ ಎಂದರು.


ಮಂಗಳೂರು ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪುಷ್ಪರಾಜ ಕೆ ಮಾತನಾಡಿ, ಜಗತ್ತು ಸ್ಪರ್ಧಾತ್ಮಕವಾಗಿದೆ. ನಮಗೆ ಮೀಸಲಾತಿಯಿದೆ ಎಂಬ ಭ್ರಮೆ ಬೇಡ. ಹಲವು ಜಾತಿಗಳು ಸೇರ್ಪಡೆಯಾಗಿದ್ದು ನಮ್ಮ ಪಾಲು ಕಡಿಮೆಯಿದೆ. ಇದರಿಂದಾಗಿ ಬಹಳಷ್ಟು ಸ್ಪರ್ದೆಯಿದೆ. ಹೀಗಾಗಿ ನಮ್ಮಲ್ಲಿಯೂ ಕಠಿನ ಪರಿಶ್ರಮ ಅವಶ್ಯಕ. ನಮ್ಮಲ್ಲಿ ಪರಿಶ್ರಮದ ಜೊತೆಗೆ ಕೌಶಲ್ಯವನ್ನು ಹೊಂದಿರಬೇಕು. ಸಾಧನೆಯ ಹದಿ ಯಶಸ್ಸಿನ ಹಂತ ತಲುಪಿದಾದ ಅಹಂಕಾರವಿರಬಾರದು. ಅದಕ್ಕೆ ಪ್ರಪಂಚವೇ ಬುದ್ದಿ ಕಲಿಸುತ್ತದೆ. ಸಾಧಕರ ಬಗ್ಗೆ ಅಸೂಯೆಪಡಬಾರದು. ಸಾಧಕರನ್ನು ಗೌರವಿಸಿ, ಅವರ ಸಾಧನೆಯನ್ನು ಸಂಭ್ರಮಿಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್ ಮಾತನಾಡಿ, ಸಂಘದ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಂಘಟನೆಯ ಶಕ್ತಿಯನ್ನು ತೋರಿಸಿರುವುದು ಸಂತೋಪ ತಂದಿದೆ. ಕಾರ್ಯಕ್ರಮದಲ್ಲಿ ಸಮಾಜದ ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಿದೆ. ಸಮಾಜದ ಬಾಂಧವರು ಪ್ರೀತಿ, ವಿಶ್ವಾಸದಿಂದ ಸಂಘಟನೆಯ ಕಾರ್ಯಕ್ರಮಗಳಲ್ಲಿ ಭಾಗವಹಸುವ ಮೂಲಕ ಶಕ್ತಿ ನೀಡಬೇಕು ಎಂದು ಹೇಳಿದ ಅವರು ಡಿ.3ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಸಂಘದ ವಾರ್ಷಿಕ ಕ್ರೀಡಾಕೂಟ ಜರುಗಲಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.


ಸಮಾಜದ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ವಿದ್ಯಾನಿಧಿಯಲ್ಲಿ ರೂ.3.32ಲಕ್ಷ ಹೊಂದಿದ್ದು ಅದನ್ನು ರೂ.5ಲಕ್ಷಕ್ಕೆ ಏರಿಕೆ ಮಾಡುವ ಯೋಜನೆಗೆ ಸಮಾಜದ ಬಾಂಧವರು ಸಹಕರಿಸಬೇಕು. ಸಂಘದ ಸದಸ್ಯತ್ವವನ್ನು ಒಂದು ಸಾವಿರಕ್ಕೆ ಏರಿಕೆ ಮಾಡಲು ಪ್ರಯತ್ನಿಸಲಾಗುವುದು. ಪ್ರತಿ ಮನೆಯವರು ಸದಸ್ಯರಾಗುವುದರ ಜೊತೆಗೆ ಇತರರನ್ನು ಸದಸ್ಯರನ್ನಾಗಿಸಬೇಕು. ಸಂಘಟನೆ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಸಂಘದಿಂದ ನೀಡುವ ತರಬೇತಿಗಳ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್ ಹೇಳಿದರು.
ಸಂಘದ ಕೋಶಾಧಿಕಾರಿ ಬಾಬು ನಾಯ್ಕ ತೆಂಕಿಲ, ಮರಾಟಿ ಯುವ ವೇದಿಕೆ ಅಧ್ಯಕ್ಷ ಗಂಗಾಧರ ಕೌಡಿಚ್ಚಾರು, ಮಹಿಳಾ ವೇದಿಕೆ ಅಧ್ಯಕ್ಷೆ ಚೇತನ ಲೋಕಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಸಕರಿಗೆ ಅಭಿನಂದನೆ;
ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರನ್ನು ಸಂಘದಿಂದ ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರಾದ ಯು.ಕೆ ನಾಯ್ಕ, ಸುಂದರ ನಾಯ್ಕ, ಕೃಷ್ಣ ನಾಯ್ಕ ಉಪಸ್ಥಿತರಿದ್ದರು.


ಶಾಸಕರಿಗೆ ಮನವಿ:
ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಸ.ನಂ 2491ಎ1ಎಪಿ ರಲ್ಲಿ ಮಂಜೂರಾಗಿರುವ 18.5 ಸೆಂಟ್ಸ್ ಜಾಗದಲ್ಲಿ ಸಂಘದ ಸಾಂಸ್ಕೃತಿಕ ಕಲಾ ಭವನ ನಿರ್ಮಿಸಲು ಸರಕಾರದಿಂದ ಅನುದಾನ ಒದಗಿಸುವಂತೆ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಪ್ರತಿಭಾ ಪುರಸ್ಕಾರ:
ಎಸ್‌ಎಸ್‌ಎಸ್‌ಸಿ, ಪಿಯುಸಿ, ಪದವಿ, ಡಿಪ್ಲೊಮಾ, ಸ್ನಾತಕೋತ್ತರ ವಿಭಾಗದ ಸಮಾಜದ ಸುಮಾರು 150ಕ್ಕೂ ಅಧಿಕ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಸಾಧಕರಿಗೆ ಅಭಿನಂದನೆ:
ಸಮಾಜದ ವಿಶೇಷ ಸಾಧಕರಾದ ಸಾವಯವ ಕ್ಷೇತ್ರದ ಸಾಧಕ ಉಮಾನಾಥ ನಾಯ್ಕ ಕೊಡಿಪ್ಪಾಡಿ, ಪಾರಂಪರಿಕ ನಾಟಿ ವೈದ್ಯೆ ದಮಯಂತಿ ಕೋಡಿಂಬಾಡಿ, ಪಿಎಚ್ ಡಿಯಲ್ಲಿ ಚಿನ್ನದ ಪದಕ ವಿಜೇತೆ ಶ್ವೇತ ಕುಮಾರಿ ಉಪ್ಪಳಿಗೆ, ಕ್ರೀಡಾ ಕ್ಷೇತ್ರದ ಕೃತಿ ಡಿ, ಕರಾಟೆಯಲ್ಲಿ ಚೇತನ್ ಎನ್.ಆರ್, ಭರತನಾಟ್ಯದಲ್ಲಿ ಅನುಶ್ರೀ, ವಾಲಿಬಾಲ್ ರಾಷ್ಟ್ರ ಮಟ್ಟದ ಸಾಧಕಿ ದೀಕ್ಷಿತಾ, ಭಜನಾ ತರಬೇತುದಾರರಾದ ನಾಗೇಶ್ ಸಾಜ, ಕಾರ್ತಿಕ್ ಆರ್ಯಾಪು, ರಮೇಶ್ ಬಳ್ಳ ರವರನ್ನು ಅಭಿನಂದಿಸಿ, ಗೌರವಿಸಲಾಯಿತು.


ಸಂವಿಧಾನದ ಪೀಠಿಕೆ ಅನಾವರಣ ಹಸ್ತಾಂತರ:
ಸಂಘದ ಕಚೇರಿಯಲ್ಲಿ ಅಳವಡಿಸಲಾಗುವ ಸಂವಿಧಾನದ ಪೀಠಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ಸಂಘದ ಅಧ್ಯಕ್ಷ ಮಂಜುನಾಥ ಎನ್.ಎಸ್‌ರವರಿಗೆ ಹಸ್ತಾಂತರಿಸಿದರು.


ವಿದ್ಯಾನಿಧಿಗೆ ದೇಣಿಗೆ:
ಸಂಘದಿಂದ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಸಂಘದ ಕೋಶಾಧಿಕಾರಿ ಬಾಬು ನಾಯ್ಕ ತೆಂಕಿಲರವರು ರೂ.20,೦೦೦ಮೊತ್ತದ ಚೆಕ್‌ನ್ನು ಹಸ್ತಾಂತರಿಸಿದರು.


ಅಸ್ಮಿತಾ, ಜಸ್ಮಿತ್ ಪ್ರಾರ್ಥಿಸಿದರು. ಉಪಾಧ್ಯಕ್ಷ ದುಗ್ಗಪ್ಪ ನಾಯ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಗಿರೀಶ್ ಸೊರಕೆ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಅಶೋಕ್ ಬಲ್ನಾಡು ವಂದಿಸಿದರು. ಶೈಕ್ಷಣಿಕ ಸಮಿತಿ ಸಂಚಾಲಕ ಲೋಕಾನಂದ, ಪೂಜಾ ಸಮಿತಿ ಸಂಚಾಲಕ ಪೂವಪ್ಪ ನಾಯ್ಕ, ಮಾಜಿ ಅಧ್ಯಕ್ಷ ಯು.ಕೆ ನಾಯ್ಕ, ಶೀನಪ್ಪ ನಾಯ್ಕ ನೆಲ್ಯಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದ ನಂತರ ಸಮಾಜದ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಲೈಸಿದವು.

LEAVE A REPLY

Please enter your comment!
Please enter your name here