ಪುತ್ತೂರು: ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಸೌದಿ ಅರೇಬಿಯಾ ಜುಬೈಲ್ ನ ಅಲ್ ಮುಝೈನ್ ಕಂಪೆನಿ ಸಂಸ್ಥಾಪಕ ಹಾಗೂ ಮಂಗಳೂರಿನ ಪ್ರತಿಷ್ಟಿತ ಸಂಸ್ಥೆ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಝಕರಿಯಾ ಜೋಕಟ್ಟೆ “ಅನಿವಾಸಿ ಕನ್ನಡಿಗ” ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಝಕರಿಯಾ ಜೋಕಟ್ಟೆ ಬಜ್ಪೆಗುತ್ತು ಹಾಜಿ ಬಿ. ಶೇಕುಂಞಿ ಹಾಗೂ ಕತೀಜಮ್ಮ ದಂಪತಿಗಳ ಪುತ್ರ. 5 ಮಕ್ಕಳಲ್ಲಿ ಹಿರಿಯರಾದ ಝಕರಿಯಾ ಪ್ರೌಢ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕಠಿಣ ಕೆಲಸದ ಮೂಲಕ ಜೀವನ ಪ್ರಾರಂಭಿಸಿದರು. ಅವರ ಹಲವಾರು ವರ್ಷಗಳ ಕಠಿಣ ಪರಿಶ್ರಮ, ತ್ಯಾಗ ಹಾಗೂ ಅನುಭವದ ಫಲವಾಗಿ 2008ರಲ್ಲಿ ಮೂವರು ಕೆಲಸಗಾರನ್ನಿಟ್ಟುಕೊಂಡು ಹಿರಿಯ ಪುತ್ರ ಝಹೀರ್ ರನ್ನೂ ಸೇರಿಸಿಕೊಂಡು ಸೌದಿ ಅರೇಬಿಯಾದ ಜುಬೈಲ್ ನಲ್ಲಿ “ಅಲ್ ಮುಝೈನ್” ಮೇನ್ ಪವರ್ ಕಂಪೆನಿಯನ್ನು ಸ್ಥಾಪಿಸಿದರು. ಅವಿರತ ದುಡಿಮೆಯಿಂದ ಹಂತಹಂತವಾಗಿ ಬೆಳೆದ ಅಲ್ ಮುಝೈನ್ ಕಂಪೆನಿಯಲ್ಲಿ ಪ್ರಸ್ತುತ 8 ಸಾವಿರ ಉದ್ಯೋಗಿಗಳಿದ್ದು, 2027ಕ್ಕೆ 10 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಹಿದಾಯ ಫೌಂಡೇಶನ್, ಝರಾ ಫ್ಯಾಮಿಲಿ ಚಾರಿಟಿ ಟ್ರಸ್ಟಿನ ಅಧ್ಯಕ್ಷರಾಗಿರುವ ಝಕರಿಯಾ ಜೋಕಟ್ಟೆ ರಾಜ್ಯದ ಹಲವಾರು ಸಂಘಸಂಸ್ಥೆಗಳ ನಿರ್ದೇಶಕ, ಸಲಹೆಗಾರ, ಪ್ರಾಯೋಜಕರಾಗಿ ಅಶಕ್ತರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಾಗೂ ಉದ್ಯಮದ ಯಶಸ್ವಿಗಾಗಿ ಹಲವಾರು ಪ್ರಶಸ್ತಿಗಳು ಲಭಿಸಿವೆ.
