ನೆಲ್ಯಾಡಿ: ನೆಲ್ಯಾಡಿ ಬೆಥನಿ ಶಾಲಾ ಬಳಿಯಿಂದ ಪೊಸೊಳಿಕೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪೊಸೊಳಿಕೆಯಲ್ಲಿನ ಸೇತುವೆ ಬದಿ ಅಳವಡಿಸಿರುವ ಮೋರಿ ಮೇಲಿನ ಮಣ್ಣು ಕುಸಿತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ.
ನ.4 ಹಾಗೂ 5ರಂದು ಸುರಿದ ಭಾರೀ ಮಳೆಗೆ ಹೊಳೆಯಲ್ಲಿ ಉಕ್ಕಿ ಬಂದಿರುವ ನೆರೆ ನೀರಿನಿಂದಾಗಿ ಸೇತುವೆ ಬದಿ ಅಳವಡಿಸಿರುವ ಮೋರಿ ಮೇಲಿನ ಮಣ್ಣು ಕುಸಿತಗೊಂಡಿದೆ. ಪೊಸೊಳಿಕೆ ಸೇತುವೆ ಕಿರಿದಾದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹೊಳೆಯ ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗಿ ಪಕ್ಕದ ತೋಟಗಳಿಗೆ ನುಗ್ಗುತಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷದ ಹಿಂದೆ ಸೇತುವೆಯ ಎರಡೂ ಬದಿ ಮೋರಿ ಅಳವಡಿಸಿ ಅದರ ಮೇಲೆ ಮಣ್ಣು ಹಾಕಿ ಏರಿಸಲಾಗಿತ್ತು. ಮೋರಿ ಮೂಲಕ ಹೊಳೆ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮಳೆ ನೀರಿನಿಂದಾಗಿ ಒಂದು ಬದಿಯ ಮೋರಿ ಮೇಲೆ ಹಾಕಲಾಗಿದ್ದ ಮಣ್ಣು ಕುಸಿತಗೊಂಡು ದೊಡ್ಡ ಹೊಂಡ ನಿರ್ಮಾಣಗೊಂಡಿದೆ. ಇದರಿಂದಾಗಿ ಇಲ್ಲಿ ಸಂಪರ್ಕವೇ ಕಡಿತಗೊಂಡಿದೆ. ಇದರಿಂದಾಗಿ ಪೊಸೊಳಿಕೆ ಭಾಗದಿಂದ ನೆಲ್ಯಾಡಿಗೆ ಬರುವ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ತೀರಾ ತೊಂದರೆಯಾಗಿದ್ದು ಸುತ್ತು ಬಳಸಿ ನೆಲ್ಯಾಡಿಗೆ ಬರಬೇಕಾಗಿದೆ. ಮೋರಿ ದುರಸ್ತಿಗೊಳಿಸಿ ರಸ್ತೆ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.