ಪುತ್ತೂರು: ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಯಾಗಿ ಜೈಲಲ್ಲಿರುವ ಅಪರಾಧಿ ರವಿ ಎಂಬಾತನನ್ನು ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ 2 ತಿಂಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ನ್ಯಾಯಾಲಯಿಂದ ಬಾಡಿವಾರಂಟ್ ಮೂಲಕ ಪಡೆದುಕೊಂಡ ಪೊಲೀಸರು ನ.8ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗುರುಪ್ರಸಾದ್ ರೈ ಮನೆಯಲ್ಲಿ ನಡೆದಿದ್ದ ದರೋಡೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿ, ಕೇರಳದ ಇಚಿಲಂಕೋಡು ಕುಂಪಳ ಪಚ್ಚಂಬಳ ನಿವಾಸಿ ಸುಬ್ಬ ಎಂಬವರ ಪುತ್ರ ರವಿ ಎಂಬಾತನನ್ನು ತಮ್ಮ ಕಸ್ಟಡಿಗೆ ನೀಡಲು ಕಾರಾಗೃಹ ಅಧಿಕಾರಿಗಳಿಗೆ ಆದೇಶಿಸುವಂತೆ ಕೋರಿ ಪೊಲೀಸರು ಪುತ್ತೂರು ನ್ಯಾಯಾಲಯದಲ್ಲಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದರು. ಕಾಸರಗೋಡು ಜಬ್ಬಾರ್ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೊಳಗಾಗಿ ಕಣ್ಣೂರು ಸೆಂಟ್ರಲ್ ಜೈಲಲ್ಲಿರುವ ರವಿ ದರೋಡೆ ಪ್ರಕರಣಕ್ಕೆ ಸಂಚು ರೂಪಿಸಿದ್ದ ವಿಚಾರವನ್ನು ಬಂಧಿತ ಇತರ ಆರೋಪಿಗಳಿಂದ ತಿಳಿದುಕೊಂಡಿದ್ದ ಪೊಲೀಸರು ಆತನಿಗಾಗಿ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಆತನನ್ನು ಕಣ್ಣೂರು ಜೈಲಿನಿಂದ ನೇರವಾಗಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.