ರಾಮಕುಂಜ: ಅಡಿಕೆ ಕಳವುಗೈದು ಮನೆಯಲ್ಲಿಟ್ಟಿರುವ ಗುಮಾನಿಯ ಮೇಲೆ ಕೇಳಲು ಬಂದ ಮಹಿಳೆಗೆ ತಲ್ವಾರ್ ತೋರಿಸಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಶ್ರಫ್ ವಿರುದ್ದ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕೊಯಿಲ ಗ್ರಾಮದ ಎಲ್ಯಂಗ ನಿವಾಸಿ ಅಬೂಬಕ್ಕರ್ ಸಿದ್ಧೀಕ್‌ರವರ ಪತ್ನಿ ನೆಬಿಸಾ ಎಂಬವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಮ್ಮ ಮನೆಯ ಮುಂಭಾಗದ ಅಂಗಳದಲ್ಲಿ ಅಡಿಕೆಯನ್ನು ಒಣಗಲು ಹಾಕಿದ್ದು ನ.7ರಂದು ಬೆಳಗ್ಗೆ ಎದ್ದು ನೋಡಿದಾಗ ಸುಮಾರು 50 ಸಾವಿರ ರೂ.ಮೌಲ್ಯದ ಅಡಿಕೆಯನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಅನುಮಾನಗೊಂಡು ಮೈದುನ ಸಿರಾಜ್‌ರವರೊಂದಿಗೆ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿರುವ ಅಶ್ರಫ್ ಎಂಬವರ ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿ ನೋಡಿದಾಗ ಆತನ ಮನೆಯಲ್ಲಿ ನಮ್ಮ ಮನೆಯಿಂದ ಕಳವಾದ ಅಡಿಕೆ ಇರುವುದು ಕಂಡು ಬಂದಿದೆ. ಈ ಬಗ್ಗೆ ಅಶ್ರಫ್ ಅವರಲ್ಲಿ ಕೇಳಿದಾಗ ಅಡಿಕೆಯನ್ನು ನಾನು ತಂದದ್ದಲ್ಲ ನನ್ನ ಗೆಳೆಯ ನವಾಜ್ ಎಂಬಾತನು ತಂದಿಟ್ಟಿರುವುದು ಎಂದು ತಿಳಿಸಿ, ನನಗೆ ಹಾಗೂ ಮೈದುನ ಸಿರಾಜ್‌ಗೆ ಆರೋಪಿತ ಅಶ್ರಫ್ ತಲ್ವಾರ್ ಮತ್ತು ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದು ಬೊಬ್ಬೆ ಹಾಕಿದಾಗ ಆರೋಪಿ ಅಶ್ರಫ್, ನೀನು ಪೊಲೀಸರಿಗೆ ದೂರು ಕೊಟ್ಟಲ್ಲಿ ನಾನು ಬಿಡಿಸಿಕೊಂಡು ಬಂದ ನಂತರ ನಿಮ್ಮ ಮನೆಗೆ ಬೆಂಕಿ ಇಡುತ್ತೇನೆ ಹಾಗೂ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ನೆಬಿಸಾ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 96/2023 ಕಲಂ: 379,504,506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.