ಉಪ್ಪಿನಂಗಡಿ: ಗಾಳಿ- ಮಳೆ: ಹಲವೆಡೆ ಹಾನಿ

0

ಉಪ್ಪಿನಂಗಡಿ: ಒಮ್ಮಿಂದೊಮ್ಮೆಲೆ ಅಗಸದಲ್ಲಿ ಆವರಿಸಿದ ಕಾರ್ಮೋಡದಿಂದಾಗಿ ದಿಢೀರ್ ಎಂಬಂತೆ ಬುಧವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಹಲವೆಡೆ ಹಾನಿಯುಂಟಾದ ಬಗ್ಗೆ ವರದಿಯಾಗಿದೆ.
ಮಳೆ ಬರುವ ಲಕ್ಷಣವಿಲ್ಲ ಎಂದು ಒಣಗಿಸಲು ಹಾಕಲಾದ ಕೃಷಿ ಉತ್ಪನ್ನಗಳು ಬುಧವಾರ ರಾತ್ರಿ ಸುರಿದ ಡಿಢೀರ್ ಮಳೆಯಿಂದಾಗಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕೃಷಿಕರನೇಕರು ನಷ್ಟಕ್ಕೀಡಾಗಿದ್ದಾರೆ. ಮಳೆಯುದ್ದಕ್ಕೂ ಅಪ್ಪಳಿಸುತ್ತಿದ್ದ ಸಿಡಿಲಾಘಾತಕ್ಕೆ ಸಿಲುಕಿ 50 ಕ್ಕೂ ಮಿಕ್ಕಿದ ಪಂಪು ಸೆಟ್‌ಗಳು, ಇನ್‌ವರ್ಟರ್ ಗಳು ಹಾನಿಗೀಡಾಗಿದ್ದು, ಉಪ್ಪಿನಂಗಡಿ ಪರಿಸರದಲ್ಲಿ ಎರಡು ವಿದ್ಯುತ್ ಪರಿವರ್ತಕಗಳು ಸಿಡಿಲಿಗೆ ಸಿಲುಕಿ ಹಾನಿಗೊಂಡಿದೆ. ಮಾತ್ರವಲ್ಲದೆ ಹಲವೆಡೆ ವಿದ್ಯುತ್ ತಂತಿಗೆ ಅಳವಡಿಸಲಾದ ಇನ್ಸುಲೇಟರ್‌ಗಳು ಸಿಡಿಲ ಹೊಡೆತಕ್ಕೆ ಛಿದ್ರವಾಗಿದ್ದು ಇದರಿಂದಾಗಿ ವಿದ್ಯುತ್ ಸರಬರಾಜಿಗೆ ವ್ಯತ್ಯಯವುಂಟಾಗಿದೆ.
ಕಳೆದ ಕೆಲ ದಿನಗಳಿಂದ ಸಾಯಂಕಾಲದ ವೇಳೆ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ- ಕುಮಾರಧಾರಾ ನದಿಗಳ ನೀರಿನ ಹರಿವಿನಲ್ಲಿ ಹೆಚ್ಚಳವುಂಟಾಗಿದ್ದು, ಮಳೆಗಾಲದಲ್ಲಿ ಮಳೆಯ ಪ್ರಮಾಣ ಕುಸಿತವಾಗಿರುವುದನ್ನು ಈಗ ಸುರಿಯುತ್ತಿರುವ ಅಕಾಲಿಕ ಮಳೆಯು ಸರಿದೂಗಿಸುವಂತಿದೆ.

LEAVE A REPLY

Please enter your comment!
Please enter your name here