ಗ್ರಾಪಂ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ
ಪುತ್ತೂರು: ಕರ್ನಾಟಕ ವಿಧಾನ ಪರಿಷತ್ತು ಸದಸ್ಯ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಅರಿಯಡ್ಕ ಗ್ರಾಮ ಪಂಚಾಯತ್ ಕಛೇರಿಗೆ ನ.10 ರಂದು ಭೇಟಿ ನೀಡಿ ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದವರ ಜೊತೆ ಮಾತನಾಡಿ ಗ್ರಾಪಂ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಸ್ವಾಗತಿಸಿ, ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಾಹಿತಿ ಪಡೆದು ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, ಗ್ರಾಪಂಗೆ ಮಂಜೂರುಗೊಂಡ ವಸತಿ ಯೋಜನೆಯಲ್ಲಿ ಕೆಲಸ ಆರಂಭಿಸದೇ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ತಕ್ಷಣವೇ ಫಲಾನುಭವಿಗಳಿಗೆ ಕೆಲಸ ಆರಂಭಿಸಲು ಸದಸ್ಯರುಗಳು ಪ್ರೋತ್ಸಾಹ ನೀಡಬೇಕು, ಸರಕಾರದಿಂದ ಸಿಗುವುದು ಕೇವಲ ಪ್ರೋತ್ಸಾಹ ಧನ ಅದರಿಂದ ದೊಡ್ಡ ಮನೆ ನಿರ್ಮಿಸಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ ಆದರೆ ವಾಸಕ್ಕೆ ತಕ್ಕುದಾದ ಮನೆ ನಿರ್ಮಿಸಲು ಫಲಾನುಭವಿಗಳಿಗೆ ಗ್ರಾಪಂನಿಂದ ಪ್ರೋತ್ಸಾಹ ಕೊಡಬೇಕು ಎಂದು ತಿಳಿಸಿದರು. ಇದೇ ರೀತಿ ನಿವೇಶನಕ್ಕೆ ಸಂಬಂಧಪಟ್ಟಂತೆ ಗ್ರಾಮದಲ್ಲಿ ಸರಕಾರಿ ಜಾಗವಿದ್ದರೆ ಅದನ್ನು ಗುರುತಿಸಿ ಕಂದಾಯ ಇಲಾಖೆ ಮೂಲಕ ಗ್ರಾಪಂ ವ್ಯಾಪ್ತಿಗೆ ಪಡೆದುಕೊಂಡು ಅರ್ಹರಿಗೆ ಮನೆ ನಿವೇಶನ ಕೊಡುವ ಕೆಲಸ ಆಗಬೇಕು ಎಂದರು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವ ಮೂಲಕ ಹೆಚ್ಚು ಮಾನವ ದಿನದ ಗುರಿಯನ್ನು ಪಂಚಾಯತ್ ಸಾಧಿಸಬೇಕು ಎಂದು ತಿಳಿಸಿದರು. ತೆರಿಗೆ ಸಂಗ್ರಹದಲ್ಲಿ ಪಂಚಾಯತ್ ಸ್ವಲ್ಪ ಮಟ್ಟಿಗೆ ಹಿಂದೆ ಬಿದ್ದಿದೆ, ಮುಂದಿನ ದಿನಗಳಲ್ಲಿ 100 ಶೇ.ಗುರಿ ಸಾಧಿಸಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಘನ ತ್ಯಾಜ್ಯ ನಿರ್ವಹಣೆಯು ವೈಜ್ಞಾನಿಕವಾಗಿ ಇರಬೇಕು.ಈ ಬಗ್ಗೆ ಸದಸ್ಯರು ಸಭೆ ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳಿ
ಪಂಚಾಯತ್‌ನಲ್ಲಿ ತಿಂಗಳಿಗೊಂದು ಸಾಮಾನ್ಯ ಸಭೆ ನಡೆಯುತ್ತದೆ ಆದರೆ ಸಾಮಾನ್ಯ ಸಭೆಯಲ್ಲದೆ ಇತರ ದಿನಗಳಲ್ಲಿ ಪಂಚಾಯತ್‌ನ ಎಲ್ಲಾ ಸದಸ್ಯರುಗಳು ಒಮ್ಮತದಿಂದ ಕಛೇರಿಯಲ್ಲಿ ಸಭೆ ಸೇರಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತುಕತೆ ನಡೆಸಬೇಕು ಎಂದು ಸೂಚನೆ ನೀಡಿದ ಕೋಟ ಶ್ರೀನಿವಾಸ ಪೂಜಾರಿಯವರು ಇದರಿಂದ ಪಂಚಾಯತ್‌ನ ಅಭಿವೃದ್ಧಿ ಮತ್ತಷ್ಟು ಸಾಧ್ಯವಿದೆ ಎಂದರು. ರಾಜಕೀಯ ರಹಿತವಾಗಿ ಸೇರಿಕೊಂಡು ಗ್ರಾಮದ ಅಭಿವೃದ್ಧಿಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಹಾಗೂ ಈ ನಿರ್ಧಾರಗಳನ್ನು ಸಾಮಾನ್ಯ ಸಭೆಯಲ್ಲಿಟ್ಟು ನಿರ್ಣಯಗಳನ್ನು ಜಾರಿ ಮಾಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು. ಇದಲ್ಲದೆ ವಿಶೇಷ ಕೆಡಿಪಿ ಸಭೆಯನ್ನು ಕರೆಯಬೇಕು ಇದಕ್ಕೆ ಶಾಸಕರನ್ನು, ವಿಧಾನ ಪರಿಷತ್ತು ಸದಸ್ಯರುಗಳನ್ನು ಅಲ್ಲದೆ ಎಲ್ಲಾ ಅಧಿಕಾರಿಗಳನ್ನು ಕೂಡ ಆಹ್ವಾನಿಸಬೇಕು ಎಂದು ತಿಳಿಸಿದರು.
ಪಂಚಾಯತ್ ಸದಸ್ಯೆ ಉಷಾ ರೇಖಾ ರೈ ಮಾತನಾಡಿ 2019ರ ವರೆಗೆ ಹಕ್ಕುಪತ್ರ ಪಡೆದು ಕೊಂಡವರಿಗೆ ಕಿಸಾನ್ ಸಮ್ಮಾನ್ ಹಣ ಬರುತ್ತಿದೆ,2019 ನಂತರ ಹಕ್ಕು ಪತ್ರ ಪಡೆದು ಕೊಂಡವರಿಗೆ ಹಣ ಬರುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.
3 ಲಕ್ಷ ರೂ.ಅನುದಾನ ಭರವಸೆ
ಪಂಚಾಯತ್ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗುವಂತೆ ವಿಧಾನ ಪರಿಷತ್ತು ಸದಸ್ಯರ ಸ್ವಂತ ನಿಧಿಯಿಂದ 3 ಲಕ್ಷ ರೂ.ಅನುದಾನವನ್ನು ಅರಿಯಡ್ಕ ಗ್ರಾಪಂಗೆ ನೀಡುವುದಾಗಿ ಕೋಟ ಶ್ರೀನಿವಾಸ ಪೂಜಾರಿಯವರು ಈ ಸಂದರ್ಭದಲ್ಲಿ ಭರವಸೆ ನೀಡಿದರು ಇದನ್ನು ಪಂಚಾಯತ್ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.
ಮನವಿ….
ಸುಮಾರು ರೂ.80 ಲಕ್ಷ ವೆಚ್ಚದಲ್ಲಿ ನೂತನ ಗ್ರಾಮ ಪಂಚಾಯತ್ ನಿರ್ಮಾಣ ಮಾಡಲು ಅನುದಾನ ನೀಡಬೇಕೆಂದು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ನೀಡುವ ಮೂಲಕ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಮತ್ತು ಉಪಾಧ್ಯಕ್ಷರಾದ ಮೀನಾಕ್ಷಿ ಪಾಪೆಮಜಲು ವಿನಂತಿಸಿಕೊಂಡರು.ಪಂಚಾಯತ್ ವತಿಯಿಂದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಶಾಲು, ಹೂ ಗುಚ್ಛ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು,ತಾಪಂ ಸಹಾಯಕ ಲೆಕ್ಕ ಪರಿಶೋಧಕ ಪ್ರವೀಣ್ ,ಪಿ.ಡಿ.ಓ ಸುನೀಲ್ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಸೌಮ್ಯಾ ಬಾಲಸುಬ್ರಹ್ಮಣ್ಯ ಮುಂಡ ಕೊಚ್ಚಿ ,ನಾರಾಯಣ ನಾಯ್ಕ ಚಾಕೋಟೆ, ಲೋಕೇಶ್ ಚಾಕೋಟೆ, ಪುಷ್ಪಲತಾ ಮರತ್ತಮೂಲೆ, ಪ್ರವೀಣ್ ಅಮ್ಚಿನಡ್ಕ , ರಾಜೇಶ್ ಮಣಿಯಾಣಿ ತ್ಯಾಗರಾಜೆ ಸದಾನಂದ ಮಣಿಯಾಣಿ ಕೊಪ್ಪಳ, ಅನಿತಾ ಆಚಾರಿ ಮೂಲೆ, ಹೇಮಾವತಿ ಚಾಕೋಟೆ, ಉಷಾ ರೇಖಾ ರೈ ಅಮೈ ಮತ್ತು ರೇಣುಕಾ ಸತೀಶ್ ಮಡ್ಯಂಗಳ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ,ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ, ಸಚಿನ್ ಪಾಪೆಮಜಲು, ಪಂಚಾಯತ್ ಮಾಜಿ ಸದಸ್ಯ ಸುಬ್ಬಪ್ಪ ಪಾಟಾಳಿ, ಹರಿಪ್ರಸಾದ್ ಮಾಯಿಲಕೊಚ್ಚಿ, ಪ್ರಮೋದ್ ರೈ ಪನೆಕ್ಕಳ, ಅಪ್ಪಯ್ಯ ನಾಯ್ಕ, ಹರಿಶ್ಚಂದ್ರ ಆಚಾರ್ಯ, ನವೀನ್ ಶೆಟ್ಟಿ ಹಾಗೂ ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.