ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರದ ಫಲಾನುಭವಿಗಳ ಸಮಾವೇಶ, ‘ಸೇವಾ ಸೌರಭ’ – ವಸ್ತ್ರ ವಿತರಣಾ ಸಮಾರಂಭ

0

*ಸಂಸ್ಕೃತಿಯ ಸಾರ ಇಲ್ಲಿ ಕಾಣಸಿಗುತ್ತದೆ-ಯು.ಟಿ.ಖಾದರ್
*ದಾನ ಮಾಡಿದರೆ ಸಂಪತ್ತಿಗೆ ಮೌಲ್ಯ ಬರುತ್ತದೆ-ಗುರುದೇವಾನಂದ ಸ್ವಾಮೀಜಿ

* ಕೊಂಬೆಟ್ಟು ಕ್ರೀಡಾಂಗಣದಲ್ಲಿ ಜನಸಾಗರ
* 65 ಸಾವಿರ ಮಂದಿಗೆ ವಸ್ತ್ರ ವಿತರಣೆ,ಸಹಭೋಜನ
* ಇತಿಹಾಸ ಸೃಷ್ಟಿಸಿದ ಕಾರ್ಯಕ್ರಮ
* ಸಾಂಸ್ಕೃತಿಕ ಕಾರ್ಯಕ್ರಮ,ಗೂಡುದೀಪ ಸ್ಪರ್ಧೆ


ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ -ಲಾನುಭವಿಗಳ ಸಮಾವೇಶ, ವಸ ವಿತರಣಾ ಕಾರ್ಯಕ್ರಮ ‘ಸೇವಾ ಸೌರಭ’ ಮತ್ತು ಗೂಡು ದೀಪ ಸ್ಪರ್ಧೆ ನ.13ರಂದು ಇಲ್ಲಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ.ಬೆಳಗ್ಗೆಯಿಂದ ಸಂಜೆ ತನಕ ನಿರಂತರವಾಗಿ ವಸ ವಿತರಣೆ ನಡೆದಿದ್ದು ಸುಮಾರು 65 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರ ವಿತರಣೆ, ಸಹಭೋಜನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಇತಿಹಾಸ ಸೃಷ್ಟಿಸಿದೆ.

ದ.ಕ.ಜಿಲ್ಲೆಯ ಸಂಸ್ಕೃತಿಯ ಸಾರ ಪುತ್ತೂರಿನ ಈ ಮೈದಾನದಲ್ಲಿ ಕಾಣಸಿಗುತ್ತದೆ. ಒಂದೇ ತಾಯಿಯ ಮಕ್ಕಳಂತೆ ಇಲ್ಲಿ ಎಲ್ಲರೂ ಸೇರಿದ್ದೀರಿ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ‘ಸೇವಾ ಸೌರಭ’ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಅಶೋಕ್ ರೈ ಅವರಂತಹ ಮನಸ್ಸು, ಹೃದಯ, ಎಲ್ಲರಿಗೂ ಬರಬೇಕು. ಅವರ ಒಳ್ಳೆಯ ಮನಸ್ಸು, ಗುಣ ಅವರ ಕುಟುಂಬದಿಂದ ಅವರಿಗೆ ಬಂದಿದೆ. ಪುತ್ತೂರಿನಲ್ಲಿರುವ ಏಕತೆ, ಸೌಹಾರ್ದತೆ, ಒಗ್ಗಟ್ಟು ಪುತ್ತೂರಿನ ಗೌರವ ಆಗಿದೆ ಎಂದ ಅವರು, ಜನರ ಪ್ರೀತಿ ವಿಶ್ವಾಸವೇ ಅಶೋಕ್ ಕುಮಾರ್ ರೈ ಅವರು ಶಾಸಕರಾಗಲು ಕಾರಣ. ಚುನಾವಣೆ ಹಾಗೂ ಅಭಿವೃದ್ಧಿ ಬೇರೆ ಬೇರೆಯಾಗಿದೆ. ಈಗ ಅಭಿವೃದ್ಧಿಯ ಚಾನೆಲ್ ಆನ್ ಮಾಡಿರುವ ಅಶೋಕ್ ಕುಮಾರ್ ರೈರವರು ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಕಂಬಳ ಆಯೋಜನೆ ಮಾಡುವ ಮೂಲಕ ಕರ್ನಾಟಕದ ಜನರ ಮನಸ್ಸು ಸೆಳೆದಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ಸುಮವಿಲ್ಲದೆ ಸೌರಭವಿಲ್ಲ-ಗುರುದೇವಾನಂದ ಸ್ವಾಮೀಜಿ: ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ತೆಂಗಿನ ಹಿಂಗಾರ ಅರಳಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾನ ಮಾಡಿದರೆ ಸಂಪತ್ತಿಗೆ ಮೌಲ್ಯ ಬರುತ್ತದೆ. ರೋಷ ದ್ವೇಷದಿಂದ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯ ಬಲದಿಂದ ಲೋಕದ ಜನರನ್ನು ಗೆಲ್ಲಬಹುದು.ಇದನ್ನು ಅಶೋಕ್ ಕುಮಾರ್ ರೈ ತೋರಿಸಿಕೊಟ್ಟಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಹೊಟ್ಟೆಗೆ ಅನ್ನ, ಉಡಲು ವಸ್ತ್ರದಾನ ನಡೆಯುತ್ತಿದೆ. ಸುಮವಿಲ್ಲದೆ ಸೌರಭವಿಲ್ಲ. ಅದೇ ರೀತಿ ಅಶೋಕ್ ಕುಮಾರ್ ರೈ ಅವರು ಪತ್ನಿ ಸುಮಾರವರೊಂದಿಗೆ ಈ ಸೇವಾ ಸೌರಭ ಕಾರ್ಯಕ್ರಮ ಮಾಡಿದ್ದಾರೆ. ಇದೊಂದು ಆದರ್ಶವಾದ ಕಾರ್ಯಕ್ರಮ ಎಂದು ಸ್ವಾಮೀಜಿ ಹೇಳಿದರು. ನಮ್ಮ ನಡೆನುಡಿಯೇ ಧರ್ಮದ ಮರ್ಮ, ರಾಜಕೀಯದಲ್ಲಿ ಧರ್ಮ ಬೇಕು. ಆದರೆ ಧರ್ಮದಲ್ಲಿ ರಾಜಕೀಯ ಬೇಡ. ಮಾನವೀಯತೆ ಇದ್ದಲ್ಲಿ ಬದುಕು ಒಳ್ಳೆಯದಾಗುತ್ತದೆ. ಹಿಂದಿನ ಬಾಗಿಲು ತೆರೆಯುವ ಕೆಲಸ ಮಾಡುವುದು ಬೇಡ. ಭ್ರಷ್ಟಾಚಾರ ರಹಿತ ಕೆಲಸ ಮಾಡಿ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶಾಸಕ ಅಶೋಕ್ ಕುಮಾರ್ ರೈರವರಿಗೆ ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ದೇವರು ಮೆಚ್ಚುವಂತಹ ಕೆಲಸ-ರಮಾನಾಥ ರೈ: ಮಾಜಿ ಸಚಿವ ರಮಾನಾಥ ರೈ ಬೆಳ್ಳಿಪ್ಪಾಡಿ ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ದೇವರು ಆಶೀರ್ವಾದ ಮಾಡಿ ಅವರು ಶಾಸಕರಾಗಿದ್ದಾರೆ. ಇಲ್ಲಿ ದೇವರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಜನಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ಶುಭಹಾರೈಸಿದರು.

ಒಳ್ಳೆಯ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ-ಫಾ|ಲಾರೆನ್ಸ್ ಮಸ್ಕರೇನಸ್: ಮಾದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ರೆ|ಫಾ|ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಅಶೋಕ್ ಕುಮಾರ್ ರೈಯವರು ಎಲ್ಲರನ್ನೂ ಜತೆ ಸೇರಿಸಿಕೊಂಡು ಕಾರ್ಯಕ್ರಮ ನಡೆಸಿದ್ದಾರೆ. ವಸ್ತ್ರದಾನ, ಅನ್ನದಾನ ಸಾವಿರಾರು ಜನರಿಗೆ ಮಾಡಲಾಗುತ್ತದೆ. ಈ ಕಾರ್ಯಕ್ರಮದ ಹಿಂದೆ ಕಠಿಣ ಪರಿಶ್ರಮ ಇದೆ. ಜನರ ಸೇವೆ ಮಾಡುವ ತುಡಿತ ಮೆಚ್ಚುವಂಥದ್ದು. ಇದೊಂದು ವಿಶಿಷ್ಟವಾದ ಕಾರ್ಯಕ್ರಮವಾಗಿದೆ. ಒಳ್ಳೆಯ ಕೆಲಸಕ್ಕೆ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ ಎಂದು ಹೇಳಿ ಶುಭಹಾರೈಸಿದರು.

ಅವರ ಪುಣ್ಯ ಅವರನ್ನು ಕಾಪಾಡುತ್ತದೆ- ಹರೀಶ್ ಕುಮಾರ್: ವಿಧಾನ ಪರಿಷತ್ ಶಾಸಕ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹರೀಶ್ ಕುಮಾರ್ ಮಾತನಾಡಿ ಹಿಂದಿನ ಪರಂಪರೆಯಂತೆ ದೀಪಾವಳಿಗೆ ವಸವಿತರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಮೂಲಕ ಮಾತಾಪಿತೃಗಳಿಗೆ, ಊರಿನವರಿಗೆ ಸಂತೃಪ್ತಿಯಾಗುವ ಕಾರ್ಯಕ್ರಮ ಮಾಡುತ್ತಿದ್ದಾರೆ. ದಾನ ಧರ್ಮ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಅಶೋಕ್ ಕುಮಾರ್ ರೈಯವರು ದುಡಿದ ಹಣದಿಂದ ರಾಜಕೀಯೇತರವಾಗಿ ಕಾರ್ಯಕ್ರಮ ಮಾಡಿದ್ದಾರೆ. ಪಕ್ಷಾತೀತವಾಗಿ ಪುಣ್ಯದ ಕೆಲಸ ಮಾಡಿದ್ದಾರೆ. ಅವರ ಪುಣ್ಯ ಅವರನ್ನು ಎಂದಿಗೂ ಕಾಪಾಡುತ್ತದೆ ಎಂದು ಹೇಳಿ ಶುಭಹಾರೈಸಿದರು.

ಅಶೋಕ್ ರೈರವರ ಸೇವೆ ಸಹಕಾರ ಮರೆಯಬಾರದು-ಶಕುಂತಳಾ ಶೆಟ್ಟಿ: ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಅಶೋಕ್ ಕುಮಾರ್ ರೈರವರ ಮನಸ್ಸು, ಹೃದಯ ಪುತ್ತೂರಿನ ಜನರಿಗೆ ಬಂದರೆ ಪುತ್ತೂರಿನಲ್ಲಿ ಯಾವುದೇ ತೊಂದರೆ ಇಲ್ಲ. 50ರಿಂದ ಪ್ರಾರಂಭವಾದ ವಸ ವಿತರಣೆ 5 ಲಕ್ಷಕ್ಕೂ ತಲುಪುವ ಸಾಧ್ಯತೆ ಇದೆ. ಅಶೋಕ್ ಕುಮಾರ್ ರೈರವರ ಸೇವೆ, ಸಹಕಾರ, ಸಂಪರ್ಕ ಜನರಿಗೆ ಮರೆಯದೆ ನೆನಪಲ್ಲಿರಬೇಕು ಎಂದು ಹೇಳಿ ಶುಭ ಹಾರೈಸಿದರು.

ಬಡವರನ್ನು ಗುರುತಿಸುವ ಕೆಲಸ-ಹುಸೈನ್ ದಾರಿಮಿ: ಮುಸ್ಲಿಂ ಧರ್ಮಗುರು ಕೆ.ಆರ್.ಹುಸೈನ್ ದಾರಿಮಿ ಮಾತನಾಡಿ ಅಶೋಕ್ ಕುಮಾರ್ ರೈರವರ ನೇತೃತ್ವದಲ್ಲಿ ಕಳೆದ ವರ್ಷ ನಡೆದ ದಶಸಂಭ್ರಮ ಕಾರ್ಯಕ್ರಮ ಪುತ್ತೂರಿನ ಚಿತ್ರಣವನ್ನೇ ಬದಲಾಯಿಸಿದೆ. ಸಂಪತ್ತನ್ನು ಸಮಾಜಕ್ಕೆ ಹೇಗೆ ಸಮರ್ಪಿಸಬೇಕು ಎಂಬುದನ್ನು ಅಶೋಕ್ ರೈ ತೋರಿಸಿಕೊಟ್ಟಿದ್ದಾರೆ. ಹಸಿದವರನ್ನು ಉಣಿಸಿದ್ದಾರೆ. ಬಟ್ಟೆ ಇಲ್ಲದವರಿಗೆ ವಸ್ತ್ರ ವಿತರಿಸಿದ್ದಾರೆ. ಸೂರಿಲ್ಲದವರಿಗೆ ಆಶ್ರಯ ಕೊಟ್ಟಿದ್ದಾರೆ. ಈ ಮೂಲಕ ಬಡವರನ್ನು ಗುರುತಿಸುವ ಕೆಲಸ ಮಾಡಿದ್ದಾರೆ ಎಂದರು. ಅಶೋಕ್ ರೈರವರು ಪುತ್ತೂರಿನ ಶಾಶ್ವತ ಶಾಸಕರಾಗಲಿ, ಮುಂದೆ ಸಚಿವರಾಗಲಿ ಎಂದು ಹಾರೈಸಿದರು.

ಹೃದಯ ಶ್ರೀಮಂತಿಕೆಯಿಂದ ದೇವರ ಆಶೀರ್ವಾದ-ಎಂ.ಬಿ.ವಿಶ್ವನಾಥ ರೈ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ ಅಶೋಕ್ ಕುಮಾರ್ ರೈರವರು ದೀಪಾವಳಿಗೆ ಪವಿತ್ರವಾದ, ಶಿಸ್ತುಬದ್ಧವಾದ ಕಾರ್ಯಕ್ರಮ ನಡೆಸಿದ್ದಾರೆ. ಅವರ ಹೃದಯ ಶ್ರೀಮಂತಿಕೆಯಿಂದ ದೇವರ ಆಶೀರ್ವಾದ ಸಿಕ್ಕಿದೆ.ಇದರಿಂದ ಅವರು ಶಾಸಕರಾಗಿದ್ದಾರೆ ಎಂದು ಹೇಳಿ ಶುಭಹಾರೈಸಿದ್ದಾರೆ.

ಅರ್ಥಪೂರ್ಣ ಕಾರ್ಯಕ್ರಮ-ಡಾ.ರಾಜಾರಾಮ್: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ಮಾತನಾಡಿ ಅಶೋಕ್ ಕುಮಾರ್ ರೈರವರು ಅಭೂತಪೂರ್ವವಾದ, ಅಪೂರ್ವವಾದ ಕಾರ್ಯಕ್ರಮ ಮಾಡಿದ್ದಾರೆ. ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ.ಹೃದಯ ಶ್ರೀಮಂತಿಕೆಯಿಂದ ಕ್ಷೇತ್ರದ ಜನರ ಮನ ಗೆದ್ದಿದ್ದೀರಿ. ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೂ ಶಕ್ತಿ ತುಂಬಿದ್ದೀರಿ ಎಂದು ಹೇಳಿ ಶುಭಹಾರೈಸಿದರು.

ಇದು ಸಮಾವೇಶವಲ್ಲ ಜಾತ್ರೋತ್ಸವ-ಎಂ.ಎಸ್.ಮಹಮ್ಮದ್: ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ ಇದು ಸಮಾವೇಶವಲ್ಲ ಇದೊಂದು ಜಾತ್ರೋತ್ಸವವಾಗಿದೆ.ಇದು ಇತಿಹಾಸದ ಪುಟದಲ್ಲಿ ಸೇರಿದ ಕ್ಷಣವಾಗಿದೆ. ಕ್ರಿಯಾಶೀಲ ಶಾಸಕರಾಗಿ ಇಂತಹ ಕಾರ್ಯಕ್ರಮ ನಡೆಸಿದವರು ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಇವರೊಬ್ಬರೇ ಆಗಿದ್ದಾರೆ. ಆರ್ಥಿಕವಾದ ಶ್ರೀಮಂತಿಕೆ ಮಾತ್ರವಲ್ಲದೆ ಹೃದಯ ಶ್ರೀಮಂತಿಕೆಯನ್ನೂ ಅಶೋಕ್ ಕುಮಾರ್ ರೈಯವರು ತೋರಿಸಿಕೊಟ್ಟಿದ್ದಾರೆ ಎಂದರು. ಟ್ರಸ್ಟ್‌ನ ಮೂಲಕ ಬಡವರಿಗೆ ಎಲ್ಲಾ ದಾನಗಳನ್ನು ಮಾಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅವರಿಗೆ ಪುತ್ತೂರಿನ ಖಾಯಂ ಶಾಸಕರಾಗುವ ಅವಕಾಶವನ್ನು ದೇವರು ನೀಡಲಿ ಎಂದರು.

ಸಾಧಕರಿಗೆ ಸನ್ಮಾನ: ಶ್ರಮಜೀವಿಗಳಾಗಿರುವ 20 ಮಂದಿ ಬಡ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ತಮ್ಮ ಬಡತನದಲ್ಲಿಯೂ ಇನ್ನೊಬ್ಬರಿಗೆ ಸಹಾಯ ಮಾಡಿದ, ಆನಾರೋಗ್ಯ ಪೀಡಿತರ ಆರೈಕೆ ಮಾಡಿದ, ಬೀಡಿ ಕಟ್ಟಿ ಜೀವನ ಮಾಡಿ ಕುಟುಂಬವನ್ನು ಮುನ್ನಡೆಸಿದ, ತಳಮಟ್ಟದವರಿಗೆ ಸಹಕಾರ ನೀಡಿದ ಬಡ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಶ್ರಮಜೀವಿ ಸಾಧಕರಾದ ಪದ್ಮಾವತಿ ಕಜೆ ಬನ್ನೂರು-(ಸಾಮಾಜಿಕ ಕಾರ್ಯಕರ್ತೆ, ಹಳ್ಳಿ ಮದ್ದು),ಪ್ರೇಮಾ ಕಕ್ವೆಮನೆ ಮಾಣಿಲ-(ವಿಶೇಷಚೇತನ ಮಗಳ ಆರೈಕೆ), ಅಬ್ದುಲ್ ರಹಿಮಾನ್ ಹಾಜಿ ಕುಳ ಇಡ್ಕಿದು (ಸಾಮಾಜಿಕ ಕಾರ್ಯ, ನಾಟಿವೈದ್ಯ ಸೇವೆ), ಚಂದ್ರಾವತಿ ಅಡ್ವಾಯಿಮೂಲೆ ಪೆರುವಾಯಿ(ತನ್ನಿಬ್ಬರು ವಿಶೇಷ ಚೇತನ ಮಕ್ಕಳ ಆರೈಕೆ), ವೆಂಕಪ್ಪ ಪೂಜಾರಿ ಕರ್ಮಿನಡ್ಕ, ಸರ್ವೆ(ಶ್ರಮಜೀವಿ ಕಾರ್ಮಿಕರಾಗಿದ್ದು ಬುದ್ದಿಮಾಂದ್ಯ ಮಗಳ ಲಾಲನೆ ಪಾಲನೆ.), ಬಾಲಕೃಷ್ಣ ಪೂಜಾರಿ ಸಣ್ಣಗುತ್ತು ಮನೆ, ಅಳಿಕೆ(ಸಾಮಾಜಿಕ ಕಾರ್ಯಕರ್ತ, ಸಮಾಜಸೇವೆ), ಸೆವುಲಿನ್ ಡಿ’ಸೋಜ ಪಟ್ಟೆ ನಿಡ್ಪಳ್ಳಿ(ಅನಾರೋಗ್ಯ ಪೀಡಿತ ಪತಿ ಮತ್ತು ಮಗನ ಆರೈಕೆ), ವಸಂತ ಕುಮಾರ್ ನೆಕ್ಕರೆ(ನೂರಾರು ವಿದ್ಯಾರ್ಥಿಗಳಿಗೆ ಉಚಿತ ಭಜನಾ ತರಬೇತಿ) ಬಾಲಕೃಷ್ಣ ರಾಮನಗರ, ಉಪ್ಪಿನಂಗಡಿ(ಅನಾರೋಗ್ಯ ಪೀಡಿತ ತಾಯಿಯ ಆರೈಕೆ), ಖತೀಜಮ್ಮ ಮುದ್ರಾಜೆ ಕೆದಿಲ(ಅನಾರೋಗ್ಯ ಪೀಡಿತ ಪತಿಯ ಸೇವೆ) ಲಕ್ಷ್ಮೀ ಬಂಗಾರಡ್ಕ, ಆರ್ಯಾಪು(ಶ್ರಮಜೀವಿ, ಸೇವಾಕಾರ್ಯ, ಸಂಸಾರ ಪೋಷಣೆ), ಜಾನಕಿ ದಂಡೆಪ್ಪಾಡಿ, ಮಾಣಿಲ(ಅನಾರೋಗ್ಯ ಪೀಡಿತ ತಮ್ಮನ ಆರೈಕೆ), ಮಹಮ್ಮದ್ ಅಶ್ರ- ಪಡ್ಡಾಯೂರು, ಪಡ್ನೂರು(ಮೇಸಿ ಕೆಲಸ ಮಾಡಿಕೊಂಡು ಕುಟುಂಬ ಪೋಷಣೆ, ಸಮಾಜ ಸೇವೆ), ಲೀಲಾವತಿ ಜೇಡರಕೋಡಿ, ಕುಳ(ಶ್ರಮಜೀವಿ ಮಹಿಳೆಯಾಗಿ ಕುಟುಂಬದ ಪೋಷಣೆ), ಬೇಬಿ ಕಾರ್ಜಾಲ್, ಕಬಕ(ಅನಾರೋಗ್ಯದಿಂದಿರುವ ಮಗಳ ಮತ್ತು ವಿಶೇಷಚೇತನ ಮೊಮ್ಮಗಳ ಪೋಷಣೆ), ಜಯರಾಮ ಶೆಟ್ಟಿ ದೇರ್ಲ, ಕೆಯ್ಯೂರು(ಕೂಲಿ ಕಾರ್ಮಿಕರಾಗಿ ಶ್ರಮಜೀವನ), ಅಬ್ದುಲ್ ಗಫೂರ್,ಬನ್ನೂರು(ಅನಾರೋಗ್ಯ ಪೀಡಿತ ಹೆತ್ತವರ ಸೇವೆ), ಚಿನ್ನಯ್ಯ ಆಚಾರ್ಯ ದರ್ಬೆತ್ತಡ್ಕ, ಒಳಮೊಗ್ರು(ವೃತ್ತಿ ಕಾರ್ಯಗಳಲ್ಲಿ ಶೈಕ್ಷಣಿಕ ಕ್ಷೇತ್ರಗಳಿಗೆ ಉಚಿತ ಸೇವೆ), ದೇವಪ್ಪ ನಲಿಕೆ, ಕಬಕ(ದೈವಾರಾಧನೆ ಮತ್ತು ನಾಟಿವೈದ್ಯ ಸೇವೆ), ಬಟ್ಯ ಅಜಲಡ್ಕ, ಒಳಮೊಗ್ರು(ಬುಟ್ಟಿ ಹೆಣೆಯುವ ಕಾಯಕ)ರವರನ್ನು ವಿಧಾನಸಭಾಧ್ಯಕ್ಷ ಯುಟಿ.ಖಾದರ್, ಶಾಸಕ ಅಶೋಕ್ ಕುಮಾರ್ ರೈ ದಂಪತಿ ಹಾಗೂ ಗಣ್ಯರು ಶಲ್ಯ, ಹಾರ, ಹಣ್ಣುಹಂಪಲು ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು.ಸನ್ಮಾನ:ಶಾಸಕ ಅಶೋಕ್ ಕುಮಾರ್ ರೈ ಅವರ ಎಲ್ಲಾ ಸಮಾಜಮುಖಿ ಕೆಲಸಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿರುವ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಅವರನ್ನು ಶಾಸಕ ಅಶೋಕ್ ಕುಮಾರ್ ರೈ ದಂಪತಿ ಸನ್ಮಾನಿಸಿದರು.ನಿರಂಜನ ರೈ ಮಠಂತಬೆಟ್ಟು ಸನ್ಮಾನ ಪತ್ರ ವಾಚಿಸಿದರು.

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಎಚ್., ಟ್ರಸ್ಟ್‌ನ ಮಾಧ್ಯಮ ಮುಖ್ಯಸ್ಥ ಕೃಷ್ಣಪ್ರಸಾದ್ ಬೊಳ್ಳಾವು, ಕಬಡ್ಡಿ ಚಾಂಪಿಯನ್ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ,ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ.ರಘು ಬೆಳ್ಳಿಪ್ಪಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡುಗುತ್ತು ಹಾಗೂ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಅಶೋಕ್ ರೈ, ಸಹೋದರ ರಾಜ್‌ಕುಮಾರ್ ರೈ ದಂಪತಿ, ಸಹೋದರ ಸುಬ್ರಹ್ಮಣ್ಯ ರೈ, ಅಶೋಕ್ ಕುಮಾರ್ ರೈ ಅವರ ಮಕ್ಕಳು, ಕುಟುಂಬಿಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ಪ್ರವರ್ತಕ, ಶಾಸಕ ಅಶೋಕ್ ಕುಮಾರ್ ರೈ ದಂಪತಿ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ಅತಿಥಿಗಳನ್ನು ಹಾರ ಹಾಕಿ ಗೌರವಿಸಿದರು. ವೇದಿಕೆಯಲ್ಲಿದ್ದ ಗಣ್ಯರನ್ನು ಸುಮಂಗಲಿಯರು ಆರತಿ ಬೆಳಗಿ ಗೌರವಿಸಿದರು.ಅತಿಥಿಗಳನ್ನು ಬ್ಯಾಂಡ್ ವಾದ್ಯಗಳೊಂದಿಗೆ ಕರೆತರಲಾಯಿತು.ಕಾವ್ಯಾ ಮತ್ತು ತಂಡ ಪ್ರಾರ್ಥಿಸಿದರು.ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಆರ್.ಶೆಟ್ಟಿ ಸ್ವಾಗತಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿ, ನಿಹಾಲ್ ಶೆಟ್ಟಿ ವಂದಿಸಿದರು.

ರಾತ್ರಿ 7ರ ತನಕ ವಸ್ತ್ರ ವಿತರಣೆ
ಬೆಳಿಗ್ಗೆಯಿಂದ ನಿರಂತರವಾಗಿ ಸೀರೆ ಹಾಗೂ ಬ್ಲಾಂಕೆಟ್ ವಿತರಣೆಯಾಗುತ್ತಿದ್ದು ವೇದಿಕೆಯಲ್ಲಿ ಸಾಂಕೇತಿಕವಾಗಿ ಸೀರೆ ವಿತರಿಸಲಾಯಿತು.9 ಮಂದಿ ಮಹಿಳೆಯರಿಗೆ ವೇದಿಕೆಯಲ್ಲಿದ್ದ ಗಣ್ಯರು ಸೀರೆ ವಿತರಿಸಿದರು. ರಾತ್ರಿ 7 ಗಂಟೆ ತನಕವೂ ವಸ್ತ್ರ ವಿತರಣೆ ನಡೆಯಿತು.

ನಾನು ದುಡಿದ ಹಣದ ಒಂದು ಪಾಲು ಬಡವರಿಗೆ-ಅಶೋಕ್ ಕುಮಾರ್ ರೈ
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಟ್ರಸ್ಟ್‌ನ ಪ್ರವರ್ತಕ, ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರಾಸ್ತಾವಿಕ ಮಾತನಾಡಿ 50 ಜನರಿಂದ ಆರಂಭಗೊಂಡ ವಸವಿತರಣೆ ಕಾರ್ಯಕ್ರಮದಲ್ಲಿ ಕಳೆದ ಬಾರಿ 35೦೦೦ ಜನರಿಗೆ ವಸ ವಿತರಣೆ ಮಾಡಲಾಗಿದೆ.ಈ ಬಾರಿ 65೦೦೦ ಜನರಿಗೆ ನಡೆಯುತ್ತಿದೆ.ನಾನು ಶಾಸಕನಾಗಲು ಟ್ರಸ್ಟ್ ನನಗೆ ಅಡಿಪಾಯ ಹಾಗೂ ವರದಾನವಾಗಿದೆ. ಪ್ರೀತಿಯಿಂದ ಕಾರ್ಯಕ್ರಮಕ್ಕೆ ಬಂದಿದ್ದೀರಿ. ಪ್ರತೀ ವರ್ಷ ಕಾರ್ಯಕ್ರಮ ನಡೆಸುತ್ತಿದ್ದು ಮುಂದಿನ ಬಾರಿ ಒಂದು ಲಕ್ಷದಷ್ಟು ಜನರಿಗೆ ವಿತರಣೆ ಮಾಡಲು ಸಿದ್ಧರಿದ್ದೇವೆ ಎಂದರು. ನನ್ನ ಸ್ವಂತ ದುಡಿದ ಹಣದಿಂದ ಒಂದು ಪಾಲನ್ನು ಬಡವರಿಗೆ ಕೊಡುವ ಕೆಲಸ ಮಾಡಿದ್ದೇನೆ. ಕಳೆದ ಬಾರಿ ಟ್ರಸ್ಟ್‌ನ ದಶಸಂಭ್ರಮ ಕಾರ್ಯಕ್ರಮ ನಡೆದಿದೆ. ನಾನು ಓಟಿಗಾಗಿ ಈ ಕೆಲಸ ಮಾಡುತ್ತಿಲ್ಲ. ಬಡವರಿಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇನೆ. ಅಕ್ರಮ ಸಕ್ರಮ, 94ಸಿ, ನಿವೇಶನ ನೀಡಿಕೆ ಮುಂತಾದ ಜನಪರ ಯೋಜನೆಗಳನ್ನು ಭ್ರಷ್ಟಾಚಾರ ರಹಿತವಾಗಿ ಮಾಡಿಕೊಡುತ್ತೇನೆ. ನಿಮ್ಮ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿ ಸರಕಾರದ ಯೋಜನೆಗಳನ್ನು ತಿಳಿಸಿದರು.

ವಿತರಣೆಗೆ ತಂದಿದ್ದ ಸೀರೆಯನ್ನೇ ಉಟ್ಟಿದ್ದ ಸುಮಾ ಅಶೋಕ್ ರೈ
ಮಹಿಳೆಯರಿಗೆ ವಿತರಣೆ ಮಾಡಲೆಂದು ತಂದಿದ್ದ ಸೀರೆಯನ್ನೇ ಅಶೋಕ್ ಕುಮಾರ್ ರೈರವರ ಪತ್ನಿ ಸುಮಾ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮದಲ್ಲಿ ಉಟ್ಟು ಗಮನ ಸೆಳೆದರು. ಅಶೋಕ್ ಕುಮಾರ್ ರೈರವರು ಪ್ರಾಸ್ತಾವಿಕ ಮಾತಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಇವತ್ತು ವಿತರಣೆ ಮಾಡಲಿರುವ ಸೀರೆಯನ್ನೇ ನೀನು ಉಡಬೇಕು ಎಂದು ಪತ್ನಿಗೆ ಹೇಳಿದ್ದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಶೋಕ್ ಕುಮಾರ್ ರೈರವರ ತಾಯಿ ಗಿರಿಜಾ ಎಸ್.ರೈ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ದಂಪತಿ, ಅವರ ಕುಟುಂಬದ ಪ್ರಮುಖರು, ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಬೆಳಿಗ್ಗೆ 9ರಿಂದ ಸಭಾ ಕಾರ್ಯಕ್ರಮ ನಡೆಯುವ ತನಕ ಶಿವಮೊಗ್ಗದ ಅಂಧ ಗಾಯಕರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ಬಳಿಕವೂ ಸಂಗೀತ ಕಾರ್ಯಕ್ರಮ ಮುಂದುವರಿಯಿತು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ನಿರಂಜನ ರೈ ಮಠಂತಬೆಟ್ಟು ಈ ಕಾರ್ಯಕ್ರಮ ನಿರ್ವಹಿಸಿದರು.


ನೋಂದಾವಣೆ ಕೇಂದ್ರ: ಕೊಂಬೆಟ್ಟು ಕ್ರೀಡಾಂಗಣಕ್ಕೆ ಎರಡು ಕಡೆ ಪ್ರವೇಶ ಅವಕಾಶ ನೀಡಲಾಗಿತ್ತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಮಾಡಿ ನಡೆದುಕೊಂಡು ಬಂದವರಿಗೆ ಶ್ರೀ ಮಹಾಲಿಂಗೇಶ್ವರ ಐಟಿಐ ಮತ್ತು ಮುಖ್ಯ ಪ್ರವೇಶದ್ವಾರದ ಬಳಿ ಕ್ರೀಡಾಂಗಣಕ್ಕೆ ಪ್ರವೇಶವಿತ್ತು.ಎರಡೂ ಕಡೆಯಿಂದ ಬರುವವರಿಗೆ ನೋಂದಾವಣೆಯನ್ನು ಒಂದೇ ಕಡೆ ಇಟ್ಟು ಹಲವು ಮಂದಿ ನೋಂದಣಿ ಮಾಡಿಕೊಳ್ಳುವುದರ ಮೂಲಕ ಹೆಚ್ಚಿನ ಸರತಿ ಸಾಲು ಇರಲಿಲ್ಲ. ನೋಂದಣಿಯಲ್ಲಿ ಹೆಸರು ಮತ್ತು ಮೊಬೈಲ್ ಸಂಖ್ಯೆ ಪಡೆಯಲಾಗಿತ್ತು.ಅಲ್ಲಿಂದ ಮುಖ್ಯ ಸಭಾಂಗಣದಲ್ಲಿ ಜನರು ಆಸೀನರಾಗಬೇಕಿತ್ತು. ಮುಖ್ಯ ಸಭಾಂಗಣ ಭರ್ತಿಯಾದ ಮೇಲೆ ಹೆಚ್ಚುವರಿಯಾಗಿ ಊಟೋಪಚಾರಕ್ಕೆ ಹಾಕಲಾದ ಶಾಮಿಯಾನದಡಿಯಲ್ಲಿ ಜನರು ಜಮಾಯಿಸಿದ್ದರು.


ಆರೋಗ್ಯ ಕೇಂದ್ರ: ಬಹುಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ನಿಟ್ಟಿನಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ಮೈದಾನದ ಕೇಂದ್ರ ಭಾಗದಲ್ಲಿ ಆರೋಗ್ಯ ಕೇಂದ್ರ ತೆರೆಯಲಾಗಿತ್ತು.ಕೇಂದ್ರದಲ್ಲಿ ಚಿಕಿತ್ಸೆಗಾಗಿ 2 ಬೆಡ್ ಹಾಕಲಾಗಿತ್ತು.ಸ್ಥಳದಲ್ಲಿ ತುರ್ತು ಆಂಬುಲೆನ್ಸ್ ವಾಹನವನ್ನು ನಿಯೋಜಿಸಲಾಗಿತ್ತು.ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ನೇತೃತ್ವದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರ ತಂಡ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದರು.


ವಸ್ತ್ರ ವಿತರಣಾ ಕೌಂಟರ್: ವಸ ವಿತರಣೆಗಾಗಿ 20 ಕೌಂಟರ್ ಮಾಡಲಾಗಿತ್ತು. ಹಿರಿಯರಿಗೆ, ಅಂಗವಿಕಲರಿಗೆ, ಗರ್ಭಿಣಿಯರಿಗೆ, ಸಣ್ಣ ಮಕ್ಕಳ ತಾಯಂದಿರಿಗೆ ಪ್ರತ್ಯೇಕ ಕೌಂಟರ್, ಅಲ್ಲದೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ಮಾಡಲಾಗಿತ್ತು. ಪ್ರತಿಯೊಬ್ಬರಿಗೂ ಮಧ್ಯದ ಬೆರಳಿಗೆ ಇಂಕ್ ಮಾರ್ಕ್ ಮಾಡಿದ ಬಳಿಕ ವಸ್ತ್ರ ವಿತರಿಸಲಾಯಿತು. ಪುರುಷರಿಗೆ ಬ್ಲಾಂಕೆಟ್ ಮತ್ತು ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸಾಂಕೇತಿಕ ವಸ್ತ್ರ ವಿತರಣೆಯಾದ ಬಳಿಕ ಕೌಂಟರ್‌ಗಳಲ್ಲಿ ವಸ್ತ್ರ ವಿತರಿಸಲಾಯಿತು. ಸಾವಿರಾರು ಮಂದಿ ಒಮ್ಮಿಂದೊಮ್ಮೆಲೇ ಕೌಂಟರ್ ನತ್ತ ಧಾವಿಸಿ ಬಂದರೂ ಸ್ವಯಂಸೇವಕರ ಶಿಸ್ತುಬದ್ಧ ವ್ಯವಸ್ಥೆಯಿಂದಾಗಿ ನಿಯಮಿತವಾಗಿ ಸರತಿ ಸಾಲಿನಲ್ಲಿ ಬಿಡಲಾಯಿತು. ಯಾವುದೇ ನೂಕುನುಗ್ಗಲು ಕಂಡುಬರಲಿಲ್ಲ. ಮಧ್ಯಾಹ್ನ 12ರಿಂದ ರಾತ್ರಿ 7 ಗಂಟೆಯ ತನಕ ನಿರಂತರವಾಗಿ ವಸ್ತ್ರ ವಿತರಣೆ ನಡೆಯಿತು.

ಬೃಹತ್ ಫ್ಯಾನ್, ಕುಡಿಯುವ ನೀರು ವ್ಯವಸ್ಥೆ: ಬಿಸಿಲ ಬೇಗೆಯನ್ನು ತಡೆಯುವ ನಿಟ್ಟಿನಲ್ಲಿ ಸಭಾಂಗಣದಲ್ಲಿ ಅಲ್ಲಲ್ಲಿ ಹಲವು ಬೃಹತ್ -ನ್‌ಗಳನ್ನು ಅಳವಡಿಸಲಾಗಿತ್ತು. ಬಾಯಾರಿಕೆಗಾಗಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಲಾಗಿತ್ತು.
ಸಹಭೋಜನ: ಸಮಾರಂಭದಲ್ಲಿ 65 ಸಾವಿರಕ್ಕೂ ಅಧಿಕ ಮಂದಿ ಸಾರ್ವಜನಿಕರು ಸಹಭೋಜನ ಸ್ವೀಕರಿಸಿದರು. ತುಳಸಿ ಕ್ಯಾಟರರ‍್ಸ್‌ನ ಹರೀಶ್ ಭಟ್ ಮತ್ತು 60 ಮಂದಿ ಪಾಕ ತಜ್ಞರ ತಂಡ ಭೋಜನ ತಯಾರಿಯಲ್ಲಿ ಸಹಕರಿಸಿದರು. ಉಪ್ಪಿನಕಾಯಿ, ಪಲ್ಯ, ರಸಂ, ಸಾಂಬಾರು, ಕುಚ್ಚುಲಕ್ಕಿ ಅನ್ನ, ಪಾಯಸ ಸಹಭೋಜನದ ಐಟಂಗಳಾಗಿದ್ದವು. ಅಡುಗೆ ತಯಾರಿ ಹಾಗೂ ಬಡಿಸುವ ವ್ಯವಸ್ಥೆಯಲ್ಲಿ 200 ಮಂದಿ ಸ್ವಯಂಸೇವಕರು ತೊಡಗಿಸಿಕೊಂಡರು. 15 ಕಡೆ ಊಟದ ಕೌಂಟರ್ ನಿರ್ಮಿಸಲಾಗಿತ್ತು.


ಪಾರ್ಕಿಂಗ್ ವ್ಯವಸ್ಥೆ: ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಗಣ್ಯರಿಗಾಗಿ ಕೊಂಬೆಟ್ಟು ಬಂಟರ ಭವನದಲ್ಲಿ ಮತ್ತು ಮಹಾಲಿಂಗೇಶ್ವರ ಐಟಿಐನಲ್ಲಿ ವಿಐಪಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.ಸಾರ್ವಜನಿಕರು ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಕೊಂಬೆಟ್ಟು ಕ್ರೀಡಾಂಗಣಕ್ಕೆ ನಡೆದುಕೊಂಡು ಬಂದರು.


ಅಶೋಕ್ ರೈಯವರಿಂದ ಗಣ್ಯರಿಗೆ ಗೌರವ: ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ನೆರೆದಿದ್ದರೂ ಆಸೀನರಾಗಿದ್ದ ಪ್ರಮುಖರ ಬಳಿಗೆ ಅಶೋಕ್ ಕುಮಾರ್ ರೈಯವರು ಖುದ್ದಾಗಿ ಹೋಗಿ ಗುಲಾಬಿ ಹೂ ನೀಡಿ ಗುರುತಿಸಿ ಗೌರವಿಸಿದರು.

ಗೂಡುದೀಪ ಸ್ಪರ್ಧೆ:
ಗೂಡುದೀಪ ಸ್ಪರ್ಧೆಗಾಗಿ ಈ ಬಾರಿ ಹೆಚ್ಚಿನ ಸ್ಪಂದನೆ ದೊರೆತಿತ್ತು.ಯಕ್ಷಗಾನದ ವೇಷ, ಚಂದ್ರಯಾನ-೩, ಬಿದಿರು ಮತ್ತು ಭತ್ತದ ಗೂಡುದೀಪ, ತೆಂಗಿನ ಗರಿಯಲ್ಲಿ ಮಾಡಲಾದ ವಿವಿಧ ಗೂಡುದೀಪಗಳು, ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥ ಮಾದರಿಯ ಗೂಡುದೀಪ, ಪೇಪರ್ ಗ್ಲಾಸ್, ಕ್ಯಾಂಡಿ ಕಡ್ಡಿಯಂತಹ ಕಸದಿಂದ ರಸದ ಗೂಡುದೀಪಗಳು ಗಮನ ಸೆಳೆದವು. 157 ಸ್ಪರ್ಧಿಗಳು ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಪ್ರಥಮ ರೂ.10,೦೦೦ ನಗದು ಬಹುಮಾನವನ್ನು ಅಂಕಿತ್ ಮತ್ತು ಅನ್ವಿತಾ ಶೆಟ್ಟಿ ಪಡೆದುಕೊಂಡರು. ದ್ವಿತೀಯ ರೂ. 75೦೦ ನಗದು ಬಹುಮಾನವನ್ನು ಕಾವ್ಯಶ್ರೀ ಕೆದಿಲ, ತೃತೀಯ ಬಹುಮಾನ ರೂ.5೦೦೦ವನ್ನು ಸಾಯಿರಾಮ್ ರಾವ್ ದರ್ಬೆ ಪಡೆದುಕೊಂಡರು.ಉಳಿದೆಲ್ಲಾ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಮಾಹಿತಿ ಕೌಂಟರ್
ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮೈದಾನದ ಕೇಂದ್ರ ಭಾಗದಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿತ್ತು.ಮೈಕ್ ಮೂಲಕ ಜನರಿಗೆ ನೋಂದಣಿ, ಊಟ ಮತ್ತು ವಸ ಸ್ವೀಕರಿಸುವ ಬಗೆಗಿನ ಮಾಹಿತಿಯನ್ನು ಉದ್ಘೋಷಿಸಲಾಗುತ್ತಿತ್ತು.

LEAVE A REPLY

Please enter your comment!
Please enter your name here