ವಿವೇಕಾನಂದರ ಚಿಂತನೆಗಳು ನಮ್ಮ ಆಲೋಚನೆಗಳನ್ನು ತೀಕ್ಷಗೊಳಿಸುತ್ತದೆ: ಡಾ. ಎಸ್. ಆರ್. ಲೀಲಾ
ಪುತ್ತೂರು: ಸ್ವಾಮಿ ವಿವೇಕಾನಂದರ ಚಿಂತನೆಗಳು ಅತ್ಯಂತ ಪ್ರಬಲ ಹಾಗೂ ಪ್ರಭಾವಶಾಲಿಯಾಗಿದ್ದು, ಪ್ರತಿಯೊಬ್ಬರೂ ಜೀವ ಸಂಕುಲವನ್ನು ಪ್ರೀತಿಸಿ, ಗೌರವಿಸಬೇಕು. ವ್ಯಕ್ತಿ ತನಗಿರುವ ಅವಕಾಶ ಮತ್ತು ಮಿತಿಗಳ ಒಳಗೆ ತನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆಯೆಂದು ಖ್ಯಾತ ಅಂಕಣಗಾರರು ಹಾಗೂ ಕರ್ನಾಟಕ ವಿಧಾನ ಪರಿ?ತ್ತಿನ ಮಾಜಿ ಸದಸ್ಯೆ ಡಾ. ಎಸ್. ಆರ್. ಲೀಲಾ ಹೇಳಿದರು.
ಇವರು ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳೂರು, ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ವಿವೇಕ ವಾಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಚಿಂತನೆಗಳು ನಮ್ಮ ಆಲೋಚನೆಗಳನ್ನು ತೀಕ್ಷಗೊಳಿಸುತ್ತದೆ. ಧರ್ಮ ನಮ್ಮ ದೇಶದ ಆಧಾರವಾಗಿದ್ದು, ಪ್ರತಿಯೊಬ್ಬನ ಅಸ್ಮಿತೆಯನ್ನು ಎತ್ತಿ ಹಿಡಿಯಲು ಧರ್ಮಾಧ್ಯಾಯನ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅಂತೆಯೇ ವಿದ್ಯಾರ್ಥಿಗಳು ವಿವೇಕಾನಂದರಂತೆ ಅಗಾಧ ದೇಶಪ್ರೇಮ ಮತ್ತು ಅಂತ:ಸತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ.ಕೆ.ಎನ್ ಮಾತನಾಡಿ, ಧರ್ಮದ ಚಿಂತನೆ ಹಾಗೂ ತತ್ವಾದರ್ಶಗಳ ವಿಚಾರಧಾರೆಗಳನ್ನು ಜಾಗತಿಕವಾಗಿ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ದೇಶ ಮತ್ತು ಧರ್ಮದ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಸಂಸ್ಥೆಗಳಲ್ಲಿರುವ ಶಿಕ್ಷಕರು ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.ಬಳಿಕ ಪ್ರಶ್ನೋತ್ತರ ಅವಧಿ ನಡೆಯಿತು. ವೇದಿಕೆಯಲ್ಲಿ ನಿವೃತ್ತ ಯೋಧ ಬೆಳ್ಳಾ ಗೋಪಿನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಮಕೃಷ್ಣ ಮಿಷನ್ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಸ್ವಾಗತಿಸಿ, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್ ವಂದಿಸಿದರು. ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಕಾರ್ಯಕ್ರಮ ನಿರೂಪಿಸಿದರು.