ಆನ್‌ಲೈನ್ ವಂಚನೆಗೆ ಸಿಲುಕಿ ರಿಯಾದ್‌ನಲ್ಲಿ ಬಂಧಿಯಾಗಿದ್ದ ಐತ್ತೂರಿನ ಯುವಕ ಕೊನೆಗೂ ಬಂಧಮುಕ್ತ-ಇಂದು ಸ್ವದೇಶಕ್ಕೆ ಆಗಮಿಸಲಿರುವ ಚಂದ್ರಶೇಖರ್

0

ಕಡಬ: ಬ್ಯಾಂಕ್ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಸೌದಿ ಅರೇಬಿಯಾದ ರಿಯಾದ್‌ನ ಕಳೆದ 11 ತಿಂಗಳಿನಿಂದ ಜೈಲಿನಲ್ಲಿ ಬಂಽಯಾಗಿದ್ದ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಕೊನೆಗೂ ಬಂಧ ಮುಕ್ತರಾಗಿದ್ದು ನ.20ರಂದು ಸ್ವದೇಶಕ್ಕೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಸೋಮವಾರ ಬೆಳಗ್ಗೆ ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್ ಅವರನ್ನು ವಿಮಾನದಲ್ಲಿ ಮುಂಬೈಗೆ ಕಳುಹಿಸಿಕೊಡಲಿದ್ದು, ಅವರು ಮುಂಬೈನಿಂದ ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ತಿಳಿದು ಬಂದಿದೆ.


ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಕೆಲಸದಲ್ಲಿ ಪದೋನ್ನತಿ ಪಡೆದು ಸೌದಿ ಅರೇಬಿಯಾಕ್ಕೆ 2022ರಲ್ಲಿ ಕಂಪೆನಿ ಕೆಲಸಕ್ಕೆ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪೆನಿಯಲ್ಲಿದ್ದರು. 2022ರ ನವೆಂಬರ್‌ನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿದ್ದರು. ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು (ತಂಬ್) ಸಹಿ ನೀಡಿದ್ದರು. ವಾರದ ಬಳಿಕ ಅವರಿಗೆ ಅರೇಬಿಕ್ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು.


ಜೈಲು ಪಾಲಾದ ಚಂದ್ರಶೇಖರ್!:
ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದಿದ್ದರು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್ ಖಾತೆಗೆ ೨೨ ಸಾವಿರ ರಿಯಲ್ ಜಮೆಯಾಗಿತ್ತು. ಆ ಹಣ ಅದೇ ಖಾತೆಯಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ವರ್ಗಾವಣೆಯಾಗಿತ್ತು. ಇತ್ತ ಚಂದ್ರಶೇಖರ್ ಅವರ ಹೆಸರಲ್ಲಿದ್ದ ನಕಲಿ ಖಾತೆಗೆ ಕಳುಹಿಸಿ ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆ ಹಿನ್ನಲೆಯಲ್ಲಿ ಅವರನ್ನು ಬಂಽಸಲಾಗಿತ್ತು. ಬಂಧನವಾಗಿರುವ ಬಗ್ಗೆ ಚಂದ್ರಶೇಖರ್ ಅವರ ಗೆಳೆಯರು ಮನೆಯವರಿಗೆ ತಿಳಿಸಿದ್ದರು. ಜೈಲಿನಲ್ಲಿ ಇರುವ ವೇಳೆ ದಿನದಲ್ಲಿ ಕೇವಲ 2 ನಿಮಿಷ ಮಾತ್ರ ದೂರವಾಣಿ ಕರೆ ಮಾಡಲು ಚಂದ್ರಶೇಖರ್ ಅವರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿನ ಸ್ನೇಹಿತರಿಗೂ ಅವರನ್ನು ಭೇಟಿಯಾಗಲು ಅವಕಾಶವಿರಲಿಲ್ಲ.


ಮದುವೆಗೆ ತಯಾರಿ ಮಾಡುವಾಗಲೇ ಸೆರೆ:
ಐತ್ತೂರು ಗ್ರಾಮದ ಮೂಜೂರು ನಿವಾಸಿ ದಿ| ಕೆಂಚಪ್ಪ ಗೌಡ ಹಾಗೂ ಹೇಮಾವತಿ ದಂಪತಿಯ 2 ಹೆಣ್ಣು ಹಾಗೂ 2 ಗಂಡು ಮಕ್ಕಳಲ್ಲಿ ಚಂದ್ರಶೇಖರ್ ಅವರು ಕೊನೆಯ ಪುತ್ರ. ಅವರಿಗೆ ಜನವರಿಯಲ್ಲಿ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಮದುವೆಯ ದಿನಾಂಕವೂ ಅಂತಿಮವಾಗಿತ್ತು. ಆ ಸಿದ್ಧತೆಯಲ್ಲಿ ಇರುವಾಗಲೇ ಅವರ ಬಂಧನವಾಗಿತ್ತು. ಚಂದ್ರಶೇಖರ್ ಅವರ ಸ್ನೇಹಿತರು 10 ಲಕ್ಷ ರೂ. ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು. ಹಣ ಕಳೆದುಕೊಂಡ ಮಹಿಳೆಗೆ ಸುಮಾರು 6 ಲಕ್ಷ ರೂ. ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಸಾಧ್ಯವಾಗಿರಲಿಲ್ಲ.


ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತ ಕಂಪೆನಿ:
ಮಾಧ್ಯಮಗಳ ವರದಿಯ ಬಳಿಕ ಅಲ್ಲಿನ ಕಂಪೆನಿ ಎಚ್ಚೆತ್ತುಕೊಂಡು ನಿರಪರಾಽ ಚಂದ್ರಶೇಖರ್ ಅವರ ಬಿಡುಗಡೆಗೆ ಕೈಜೋಡಿಸಿತ್ತು. ಚಂದ್ರಶೇಖರ್ ಬಿಡುಗಡೆಗೆ ಮಡಿಕೇರಿಯ ಬಿ.ಆರ್.ಅರುಣ್ ಕುಮಾರ್ ಹಾಗೂ ಮಂಗಳೂರಿನ ಕಬೀರ್ ನಿರಂತರ ಪ್ರಯತ್ನ ಮಾಡಿದ್ದರು.

LEAVE A REPLY

Please enter your comment!
Please enter your name here