ಕ್ರೀಡೆಯು ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ- ಮಧು ಎಸ್ ಮನೋಹರ್
ಪುತ್ತೂರು,: ಕ್ರೀಡೆಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆಗಳಿಗೂ ಸಹಾಯಕವಾಗುತ್ತವೆ. ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ, ಶಿಸ್ತು, ಸಹಬಾಳ್ವೆಗಳಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಬಂಧಗಳ ವೃದ್ಧಿಗಳಿಗೂ ಕ್ರೀಡೆಗಳು ಅಗತ್ಯವಾಗಿವೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದೊಂದಿಗೆ ದಿಟ್ಟ ಹೆಜ್ಜೆಗಳನ್ನು ಇರಿಸಬೇಕು. ಆಲೋಚನೆಗಳು, ನಿರ್ಧಾರಗಳು ಅಚಲವಾಗಿದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಪುತ್ತೂರು ನಗರ ಸಭಾ ಆಯುಕ್ತ ಮಧು ಎಸ್ ಮನೋಹರ್ ಹೇಳಿದರು.ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಸಹಾಯ ಮಾಡುತ್ತದೆ. ಶಾಲಾ ಕಾಲೇಜು ಮಟ್ಟದ ಕ್ರೀಡಾ ಕೂಟಗಳಿಂದ ಸ್ನೇಹ ಸೌಹಾರ್ದತೆಗಳು ಏರ್ಪಡುತ್ತವೆ. ಕ್ರೀಡಾಪಟುಗಳಿಗೆ ದೇಶ ವಿದೇಶ ಮಟ್ಟದಲ್ಲಿ ವಿಶೇಷ ಮನ್ನಣೆಯಿದೆ. ರಾಷ್ಟ್ರೀಯ ಸಂಬಂಧಗಳ ವೃದ್ಧಿಗೆ ಕ್ರೀಡೆಗಳ ಕೊಡುಗೆ ಅಪಾರವಾಗಿದೆ. ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ ಎಂದರು.
ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಾದ ನಿಹಾಲ್ ರಾಜ್ , ಧನುಷ್ ಎಲ್, ಅಖಿಲೇಶ್, ವಿಘ್ನೇಶ್, ಮೋಕ್ಷಿತ್, ಅಶ್ವಿತ್ ಭಂಡಾರಿ, ಮನ್ವಿತ್, ಸುಶಾನ್ ಪ್ರಕಾಶ್, ಆರ್ಯ ಪಟೇಲ್, ಆಯುಷ್ ಕ್ರೀಡಾಜ್ಯೋತಿಯನ್ನು ತರುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಕರ್ಷಕ ಪಥಸಂಚಲನ:
ಸುಮಾರು 25 ತರಗತಿಗಳ ಶಿಸ್ತುಬದ್ಧ ಪಥ ಸಂಚಲನ ನಡೆಯಿತು. ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಕಾಲೇಜಿನ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಕ್ರೀಡಾ ಮೈದಾನಕ್ಕೆ ಆಕರ್ಷಕವಾಗಿ ಹೊತ್ತು ಸಾಗಿ ಬಂದರು. ದ್ವಿತೀಯ ಪಿಯುಸಿ ವಿಜ್ಞಾನದ ಡಿ ವಿಭಾಗವು ಪ್ರಥಮ ಸ್ಥಾನವನ್ನೂ ದ್ವಿತೀಯ ಪಿಯುಸಿ ವಿಜ್ಞಾನದ ಸಿ ವಿಭಾಗ ಮತ್ತು ಪ್ರಥಮ ವಿಜ್ಞಾನ ವಿಭಾಗದ ಡಿ ವಿಭಾಗವು ದ್ವಿತೀಯ ಸ್ಥಾನವನ್ನೂ ಪಡೆದುಕೊಂಡಿತು. ಕಾಲೇಜಿನ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
ಅಥ್ಲೆಟಿಕ್ಸ್ ಕ್ರೀಡಾಪಟು ಹಾಗೂ ಅತಿಥಿ ಸತೀಶ್ ಎಂ. ಎನ್ ಕೆಮ್ಮನಹಳ್ಳಿ ಮಾತನಾಡಿ ಕ್ರೀಡೆಯು ದೇಹಕ್ಕೆ ವ್ಯಾಯಾಮ ನೀಡುವುದರ ಜೊತೆಗೆ ಮಾನಸಿಕ ಏಕಾಗ್ರತೆಗೂ ಸಹಕಾರಿಯಾಗುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಧೃತಿಗೆಡದೆ ಆತ್ಮವಿಶ್ವಾಸದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶುಭಾಶಯದ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೃಷ್ಣಪ್ರಸನ್ನ ಮಾತನಾಡಿ ಕ್ರೀಡಾಕೂಟವು ಗುರಿಯನ್ನು ನಿಶ್ಚಯ ಮಾಡುವ ಪಾಠ. ಕ್ರೀಡೆಯು, ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ. ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲವಾಗಿದೆ. ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಸಂಯಮ, ಇಚ್ಛಾಶಕ್ತಿ,ಸ್ವಾಭಿಮಾನ, ಏಕಾಗ್ರತೆಗಳನ್ನು ಬೆಳೆಸುತ್ತದೆ. ಕ್ರೀಡೆಯ ಮೂಲಕ ದೇಶಾಭಿಮಾನವು ಬೆಳೆಯುತ್ತದೆ. ಸೋಲೇ ಗೆಲುವಿನ ಸೋಪಾನ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಕೂಡ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತವೆ. ಕ್ರೀಡೆ ಪದಕ ಗೆಲ್ಲುವುದಕ್ಕಾಗಿ ಮಾತ್ರ ಅಲ್ಲ, ಅದರಲ್ಲಿ ಭಾಗವಹಿಸುವುದು ಕೂಡ ಮುಖ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ರವಿ ಮಂಗ್ಲಿಮನೆ, ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ, ಯತೀಶ್, ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಖಿಲೇಶ್ ವರ್ಮ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾಲೇಜಿನ ಕ್ರೀಡಾ ಜತೆ ಕಾರ್ಯದರ್ಶಿ ಕೆ. ಎನ್ ಭೂಮಿಕಾ ಸ್ವಾಗತಿಸಿ ಕ್ರೀಡಾ ಸಂಘದ ಕಾರ್ಯದರ್ಶಿ ನಿಹಾಲ್ರಾಜ್ ವಂದಿಸಿದರು. ಕಾಲೇಜಿನ ಉಪನ್ಯಾಸಕ ಪಿ.ಕೆ. ಪರಮೇಶ್ವರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳು ನಡೆದವು.