ಶ್ರೀ ವಿಷ್ಣು ಯುವಶಕ್ತಿ ಬಳಗ ಆಯೋಜನೆ * ವಿವಿಧ ಆಟೋಟ ಸ್ಪರ್ಧೆಗಳು
ಸಮಾಜ ಮೆಚ್ಚುವ ಕೆಲಸ ಸಂಘಟನೆಯಿಂದ ಆಗುತ್ತಿದೆ : ಓಲೆಮುಂಡೋವು ಮೋಹನ್ ರೈ
ಪುತ್ತೂರು: ತಾವು ಗಳಿಸಿದ ಒಂದಂಶವನ್ನು ಸಮಾಜಮುಖಿ ಕೆಲಸಗಳಿಗೆ ವಿನಿಯೋಗಿಸುವ ಮೂಲಕ ಸಮಾಜ ಮೆಚ್ಚುವ ಕೆಲಸವು ಮಜ್ಜಾರಡ್ಕದ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಆಗುತ್ತಿದೆ. ಇದು ನನಗೆ ಬಹಳಷ್ಟು ಖುಷಿ ತಂದಿದೆ. ಸಂಘಟನೆಯಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ಮೂಡಿಬರಲಿ, ದೇವರ ಅನುಗ್ರಹ ಸಂಘಟನೆಯ ಮೇಲಿರಲಿ ಎಂದು ಕೆಯ್ಯೂರು ಶ್ರೀ ಮಹಿಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ.ಮೋಹನ್ ರೈ ಓಲೆಮುಂಡೋವು ಹೇಳಿದರು.
ಅವರು ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ನ.19ರಂದು ನಡೆದ 6ನೇ ವರ್ಷದ ಕೆಸರುಡೊಂಜಿ ದಿನ ವಿವಿಧ ಆಟೋಟ ಸ್ಫರ್ಧಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಂಘಟನೆಯ ಗೌರವ ಅಧ್ಯಕ್ಷರೂ ಆಗಿರುವ ಓಲೆಮುಂಡೋವು ಮೋಹನ್ ರೈಯವರು, ಸಂಘಟನೆಯ ಸಮಾಜಮುಖಿ ಕೆಲಸಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಇಂತಹ ಸಂಘಟನೆಯ ಜೊತೆ ಕೈ ಜೋಡಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಸಂಘಟನೆಯ ಗೌರವ ಸಲಹೆಗಾರ, ದಾನಿ ಲೋಕೇಶ್ ರೈ ಅಮೈಯವರು ಮಾತನಾಡಿ, ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳನ್ನು ನಾವು ಯಾವಾಗ ಕಲಿಸುವುದಿಲ್ಲವೋ ಅಂತಹ ಮಕ್ಕಳು ಎಷ್ಟೇ ದೊಡ್ಡ ಹುದ್ದೆಗೆ ಹೋದರೂ ಕೊನೆಗಾಲದಲ್ಲಿ ಹೆತ್ತವರಿಗೆ ಬೇಡದ ಮಕ್ಕಳಾಗುತ್ತಾರೆ, ವಯೋವೃದ್ಧ ಕಾಲದಲ್ಲಿ ಹೆತ್ತವರನ್ನು ಅನಾಥ ಆಶ್ರಮಕ್ಕೆ ತಳ್ಳುವ ಮಕ್ಕಳಾಗುತ್ತಾರೆ ಆದ್ದರಿಂದ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕೆಲಸವಾಗಬೇಕು, ಮಕ್ಕಳಿಗೆ ಸಮಾಜದ ಜೊತೆ ಬೆರೆಯುವ ಒಳ್ಳೆಯ ಕೆಲಸಗಳಿಗೆ ಕೈ ಜೋಡಿಸುವ ವಿದ್ಯೆಯನ್ನು ಕಲಿಸಿಕೊಡಬೇಕು ಎಂದರು. ದೈವ ನರ್ತಕ ಮಾಡದಗುಡ್ಡೆ ಕೃಷ್ಣ ಅಜಿಲರು ಸಂಘಟನೆಯ ಸಮಾಜಮುಖಿ ಕೆಲಸಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ದಿವ್ಯಶ್ರೀಯವರು, ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಕೆಲಸ ಇಂದಿನ ಅಗತ್ಯತೆಯಾಗಿದೆ ಎಂದರು.ಕೆಯ್ಯೂರು ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕರವರು ಸಂಘಟನೆಯ ಉತ್ತಮ ಕೆಲಸಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಉದ್ಯಮಿ ಕುತ್ಯಾಡಿ ಅಜಿತ್ ಭಂಡಾರಿ, ತಿಮ್ಮಪ್ಪ ಪೂಜಾರಿ ಮಜ್ಜಾರು, ವಿಷ್ಣು ಯುವಶಕ್ತಿ ಬಳಗದ ಉಪಾಧ್ಯಕ್ಷ ಯತೀಶ್ ಕೋಡಿಯಡ್ಕ ಉಪಸ್ಥಿತರಿದ್ದರು. ಹರೀಶ್ ಕೋಡಿಯಡ್ಕ ಪ್ರಾರ್ಥಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ ಸ್ವಾಗತಿಸಿ, ವಂದಿಸಿದರು. ಕೀರ್ತಿ ಮಾಯಿಲಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಸರ್ವ ಸದಸ್ಯರುಗಳು ಸಹಕರಿಸಿದ್ದರು.
ಸನ್ಮಾನ, ಗೌರವಾರ್ಪಣೆ
ಸಂಘಟನೆಯ ಸಮಾಜಮುಖಿ ಕೆಲಸಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಈ ವರ್ಷದ ಕಾರ್ಯಕ್ರಮದ ಎರಡು ದಿನದ ಅನ್ನದಾನದ ಪ್ರಾಯೋಜಕರಾದ ಸಂಘಟನೆಯ ಗೌರವ ಅಧ್ಯಕ್ಷ ಕೆ.ಮೋಹನ್ ರೈ ಓಲೆಮುಂಡೋವು, ನಾಟಕದ ಪ್ರಾಯೋಜಕ್ವ ವಹಿಸಿದ್ದ ಜತ್ತಪ್ಪ ರೈ ಓಲ್ತಾಜೆ, ಸಂಘಟನೆಯ ಕೆಲಸಗಳಿಗೆ ಸಹಕಾರ ನೀಡುತ್ತಿರುವ ಕೊಡುಗೈ ದಾನಿ ಲೋಕೇಶ್ ರೈ ಅಮೈರವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಸಂಘಟನೆಯ ಸದಸ್ಯರುಗಳಿಗೆ, ಮಹಿಳಾ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಂಬಳದ ಕೋಣಗಳು ಗದ್ದೆಗೆ ಇಳಿದು ಆಟೋಟ ಸ್ಪರ್ಧೆಗೆ ಚಾಲನೆ
ಲೋಹಿತ್ ಬಿ.ಬಿ ಬಾಲಯ ಮಾಲಕತ್ವದ ಕಂಬಳದ ಕೋಣಗಳು ಗದ್ದೆಗೆ ಇಳಿಯುವ ಮೂಲಕ ಕೆಸರುಡೊಂಜಿ ದಿನದ ವಿವಿಧ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ವಾಲಿಬಾಲ್, ಕಬಡ್ಡಿ ಪಂದ್ಯಾಟ,ಹಗ್ಗಜಗ್ಗಾಟ ಸೇರಿದಂತೆ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಕೆಸರುಗದ್ದೆಯಲ್ಲಿ ನಡೆಯಿತು.
ಸಮಾರೋಪ ಸಮಾರಂಭ
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಸಂಘಟನೆಯ ಅಧ್ಯಕ್ಷ ರಘುನಾಥ ಗೋಳ್ತಿಲರವರ ಸಭಾಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕೌಡಿಚ್ಚಾರು ವಿವೇಕಾನಂದ ಯುವಕ ಮಂಡಲದ ಗೌರವ ಸಲಹೆಗಾರ ದುರ್ಗಾಪ್ರಸಾದ್ ಕುತ್ಯಾಡಿ, ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ರವಿ ಅಜಿಲ ಸ್ವಾಮಿನಗರ, ತಿಂಗಳಾಡಿ ಅಭಿಮನ್ಯ ಸ್ಪೋರ್ಟ್ಸ್ ಕ್ಲಬ್ನ ವರುಣ್ ಕುಮಾರ್, ಅಭಿನವ ಕೇಸರಿ ಮಾಡಾವು ಇದರ ಅಧ್ಯಕ್ಷ ಶಶಿಧರ ಆಚಾರ್ಯ, ಕೆಎಸ್ಆರ್ಟಿಸಿ ಬಸ್ಸು ನಿರ್ವಾಹಕರಾದ ಕೋಚಣ್ಣ ಪೂಜಾರಿ ಎಂಡೆಸಾಗು, ತಿಲಕ್ರಾಜ್ ಉಡುಪಿರವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಸಂಘಟನೆಯ ಗುರುಪ್ರಸಾದ್ ಮಜ್ಜಾರುರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೊಂಬೆ ವೇಷ ಹಾಕಿ ವಿಶೇಷ ಚೇತನರ ಮನೆ ನಿರ್ಮಾಣಕ್ಕೆ ಧನ ಸಹಾಯ ಸಂಗ್ರಹಿಸಿದ ಚಂದ್ರಶೇಖರ ಪೆರ್ನೆ, ಯತೀಶ್ ಬೆಳ್ಳಿಪ್ಪಾಡಿಗೆ ಹಾಗೇ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದ ಆದ್ಯ ಆರ್.ಜೆ ಗೋಳ್ತಿಲರವರಿಗೆ ಸ್ಮರಣಿಕೆ ನೀಡಲಾಯಿತು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ ಸ್ವಾಗತಿಸಿ, ವಂದಿಸಿದರು. ಅಪೂರ್ವ ಕಾರಂತ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಸರ್ವ ಸದಸ್ಯರುಗಳು ಸಹಕರಿಸಿದ್ದರು.
ವಿವಿಧ ಆಟೋಟ ಸ್ಪರ್ಧೆಯಲ್ಲಿ
ವಾಲಿಬಾಲ್ ಪಂದ್ಯಾಟದಲ್ಲಿ ಕೆಸಿಸಿ ಪಾಪೆಮಜಲು ಪ್ರಥಮ, ಕೇಸರಿ ಫ್ರೆಂಡ್ಸ್ ಸಿ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ಮಾತೃಶ್ರೀ ಕುಂಬ್ರ ಪ್ರಥಮ, ವಿಷ್ಣು ಬಳಗ ಸಂಪ್ಯ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಇದಲ್ಲದೆ ಇತರ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕೆಸರುಗದ್ದೆಯಲ್ಲಿ ಸಂಭ್ರಮಿಸಿದ ಮಕ್ಕಳು
ಕೆಸರು ತುಂಬಿದ ಗದ್ದೆಯಲ್ಲಿ ಮಕ್ಕಳು ಸೇರಿದಂತೆ ನೂರಾರು ಮಂದಿ ಸಂಭ್ರಮಿಸಿದರು. ಗದ್ದೆಗೆ ಇಳಿದು ಕೆಸರಿನಲ್ಲಿ ವಿವಿಧ ಆಟಗಳನ್ನು ಆಡಿ ನಲಿದು ಕುಪ್ಪಳಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾಗವಹಿಸುವ ಮೂಲಕ ಕೆಸರುಡೊಂಜಿ ದಿನ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
‘ ಎಲ್ಲರ ಸಹಕಾರದಿಂದ 6ನೇ ವರ್ಷದ ಕೆಸರುಡೊಂಜಿ ದಿನದ ಕಾರ್ಯಕ್ರಮ ಯಶಸ್ವಿಯಾಗಿದೆ. ನಮ್ಮೆಲ್ಲರನ್ನು ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸುತ್ತಿರುವವರಿಗೆ ಧನ್ಯವಾದ ಅರ್ಪಿಸುತ್ತೇವೆ.ಮುಂದೆಯೂ ತಮ್ಮೆಲ್ಲರ ಸಹಕಾರ ಬಯಸುತ್ತೇವೆ.’
ರಾಜೇಶ್ ಮಯೂರು ಗೋಳ್ತಿಲ,
ಸಂಘಟನಾ ಕಾರ್ಯದರ್ಶಿ, ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ