ಪುತ್ತೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ ಕ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಕೊಂಬೆಟ್ಟು ಪ ಪೂ ಕಾಲೇಜು ಸಹಯೋಗದಲ್ಲಿ ಮೈತ್ರಿ ಮುಟ್ಟಿನ ಕಪ್‌ವಿತರಣಾ ಕಾರ್ಯಕ್ರಮ ನ.20ರಂದು ಕೊಂಬೆಟ್ಟು ಪ.ಪೂ ಕಾಲೇಜಿನಲ್ಲಿ ನಡೆಯಿತು.
ಶಾಲಾ ವಿದ್ಯಾರ್ಥಿಗಳಿಗೆ ಮುಟ್ಟಿನ ಕಪ್ ವಿತರಣೆ ಮಾಡಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಸರಕಾರ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸುರಕ್ಷತೆ ಮತ್ತು ಸ್ವಚ್ಚತಾ ದೃಷ್ಟಿಯಿಂದ ಕಪ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಸ್ಯಾನಿಟರಿ ಕಿಟ್ ಕೊಡಲಾಗುತ್ತಿತ್ತು ಅದರಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯದ ಹಿತ ದೃಷ್ಟಿಯಿಂದ ಕಪ್ ವಿತರಣೆ ಮಾಡಲಾಗುತ್ತಿದೆ. ಮೈತ್ರಿ ಮುಟ್ಟಿನ ಕಪ್ ಸಂಶೋಧಿತ ವ್ಯವಸ್ಥೆಯಾಗಿದ್ದು, ಆರೋಗ್ಯ ಪೂರ್ಣ ಸಮಾಜಕ್ಕೆ ಸರಕಾರದ ಮಹತ್ತರ ಕೊಡುಗೆಯಾಗಿದೆ ಎಂದರು. ಇದೇ ವೇಳೆ ಕೊಂಬೆಟ್ಟು ಶಾಲಾ ಸಭಾಂಗಣ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ ಶಾಸಕರು ವಿದ್ಯಾರ್ಥಿಗಳ ಅನುಕೂಲಕ್ಕೆ ಸುಮಾರು 19 ರೂಟ್ ಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಈ ಮೈತ್ರಿ ಮುಟ್ಟಿನ ಕಪ್ 10 ವರ್ಷದ ತನಕ ಬಳಕೆ ಮಾಡಬಹುದಲ್ಲದೆ, ಶುಚಿಯಾಗಿ ಇಟ್ಟುಕೊಳ್ಳಬಹುದು. ಇದರ ಬಳಕೆಯಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಹೇಳಿದರು. ಆರೋಗ್ಯ ಇಲಾಖೆ ಸಿಬ್ಬಂದಿ ನಿಶಾ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶಾಸಕ ಅಶೋಕ್ ರೈ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಜೋಕಿಂ ಡಿಸೋಜಾ, ಉಪ ಪ್ರಾಂಶುಪಾಲೆ ಮರ್ಸಿ ಮಮತಾ ಉಪಸ್ಥಿತರಿದ್ದರು.
ಮೈತ್ರಿ ಕಪ್ ವಿತರಣೆಯನ್ನು ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಿಗೆ ವಿಸ್ತರಿಸುವ ಮುನ್ನ ಮೊದಲ ಹಂತದಲ್ಲಿ ಚಾಮರಾಜನಗರ ಜಿಲ್ಲೆಯ 300 ತರುಣಿಯರಿಗೆ ವಿತರಿಸಿ ಅಧ್ಯಯನ ಮಾಡಲಾಗಿದೆ. ಈ ಪೈಕಿ 272 ಹೆಣ್ಣುಮಕ್ಕಳು ಕಪ್‌ಗಳನ್ನು ಸ್ವೀಕರಿಸಿ ಯಶಸ್ವಿಯಾಗಿ ಬಳಕೆ ಮಾಡುತ್ತಿದ್ದಾರೆ. ಹತ್ತಾರು ವರ್ಷ ಬಾಳಿಕೆ ಬರುವ ಮೆನ್‌ಸ್ಟ್ರುಯಲ್ ಕಪ್‌ಗಳನ್ನು ನನ್ನ ಮೈತ್ರಿ ಹೆಸರಿನಡಿ ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳ 15 ಸಾವಿರ ಪದವಿ ಪೂರ್ವ ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆ ಕಪ್ ವಿತರಿಸಲಿದೆ.