ವಿದ್ಯಾರ್ಥಿಗಳು ದುಶ್ಚಟಗಳಿಗೊಳಗಾಗದೆ ಉತ್ತಮ ಸಮಾಜ ನಿರ್ಮಾಣದ ಕೊಡುಗೆಗಳಾಗಿ-ಆಂಜನೇಯ ರೆಡ್ಡಿ
ಪುತ್ತೂರು: ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನದ ಭಾಗವಾಗಿ ಮಾದಕ ದ್ರವ್ಯ ವ್ಯಸನ ವಿರೋಧಿ ಸಮಿತಿಯು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಕೇಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ಯೂತ್ ರೆಡ್ ಕ್ರಾಸ್ ಸೊಸೈಟಿ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಸಹಕಾರದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿದರು. “ನಶಾ ಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಭಾರತದಲ್ಲಿ ಮಾದಕ ವ್ಯಸನಕ್ಕೆ ಸಂಬಂಧಿಸಿದ ದೂರುಗಳಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಇದನ್ನು ತಡೆಗಟ್ಟಲು ಜಾಗೃತಿಯೇ ಮೊದಲ ಹೆಜ್ಜೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಗಾಗದೆ ಉತ್ತಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಜೊತೆಗೆ, ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿದ ಕಾನೂನು ಮತ್ತು ಶಿಕ್ಷೆಗಳ ಬಗ್ಗೆಯೂ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತ ಅಭಿಯಾನದ ಅಗತ್ಯದ ಬಗ್ಗೆ ಮಾಹಿತಿ ನೀಡಿ “ವ್ಯಸನವನ್ನಲ್ಲ ಆರೋಗ್ಯವನ್ನು ಆರಿಸೋಣ” ಎಂದು ನುಡಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪುಷ್ಪರಾಜ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಉಪ ಪೊಲೀಸ್ ಠಾಣಾಧಿಕಾರಿ ಮೋನಪ್ಪ ಗೌಡ ಉಪಸ್ಥಿತರಿದ್ದರು. ಪೊಲೀಸ್ ಇಲಾಖೆ ಸಿಬ್ಬಂದಿ ವಿನಾಯಕ ಮತ್ತು ವಿರೂಪಾಕ್ಷ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ವಿದ್ಯಾರ್ಥಿ ಪ್ರತಿನಿಧಿ ತೀಕ್ಷಿತ್ ವಂದಿಸಿದರು. ವಿದ್ಯಾರ್ಥಿನಿಯರಾದ ತನುಶ್ರೀ ಚಿತ್ರ ಮತ್ತು ಆಶಿಕ ಪ್ರಾರ್ಥಿಸಿದರು. ರಕ್ಷ ವೈ ಎಸ್ ಕಾರ್ಯಕ್ರಮ ನಿರೂಪಿಸಿದರು.