ಪುತ್ತೂರು: ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡ ವ್ಯಕ್ತಿಯೋರ್ವರು ಬಳಿಕ ವಾಟ್ಸಾಪ್ ಗೆ ಸಂದೇಶ ಕಳುಹಿಸಿ ವಧುವಿನ ಶೃಂಗಾರ ಬುಕ್ಕಿಂಗ್ ಮಾಡುವ ನೆಪದಲ್ಲಿ ಬ್ಯೂಟಿಪಾರ್ಲರ್ ಮಾಲಕಿಗೆ 9000 ರೂಪಾಯಿ ವಂಚಿಸಿರುವ ಘಟನೆ ನ.20ರಂದು ಪುತ್ತೂರಿನಲ್ಲಿ ನಡೆದಿದೆ.
ಇಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀಮಾ ಬ್ಯೂಟಿಪಾರ್ಲರ್ ಮ್ಹಾಲಕಿ ಮಾಧವಿ ಮನೋಹರ ರೈ ವಂಚನೆಗೊಳಗಾದವರು. ತೃಷಾ ಶರ್ಮಾ ಎಂಬ ಹೆಸರಿನಲ್ಲಿ ಮಾಧವಿ ರೈಯವರ ಜತೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಸಾಧಿಸಿ ಬಳಿಕ ವಾಟ್ಸಪ್ ಸಂದೇಶದ ಮೂಲಕ ಪುತ್ತೂರಿನಲ್ಲಿ ಡಿ.11ರಂದು ವಧುವಿನ ಶೃಂಗಾರವಿದೆ ಎಂದು ಹೇಳಿ ಫ್ರೀ ಇದ್ದೀರಾ ಇದ್ದರೆ ಬುಕ್ಕಿಂಗ್ ಮಾಡುವಂತೆ ತಿಳಿಸಿದ್ದರು. ತಾನು ನಂತರ ಕರೆ ಮಾಡುವುದಾಗಿ ಮಾಧವಿ ರೈ ತಿಳಿಸಿದ್ದರು. ಬುಕ್ಕಿಂಗ್ ಹಣ ಪಾವತಿಸುವುದಾಗಿ ಮೆಸೆಜ್ ಮಾಡಿದ್ದವರು ತಿಳಿಸಿದ್ದರು. ಹಾಗಿದ್ದಲ್ಲಿ 1000 ರೂಪಾಯಿ ಬುಕ್ಕಿಂಗ್ ಮೊತ್ತ ಪಾವತಿಸುವಂತೆ ಮಾಧವಿ ರೈ ತಿಳಿಸಿದ್ದರು. ಮತ್ತೆ ಸಂದೇಶ ಕಳುಹಿಸಿ ಸಾರಿ ನಾನು ತಪ್ಪಿ 10,000 ರೂಪಾಯಿ ಗೂಗಲ್ ಪೇ ಮಾಡಿದ್ದು ಬುಕ್ಕಿಂಗ್ ಮೊತ್ತಕ್ಕಿಂತ ಹೆಚ್ಚುವರಿಯಾದ 9000 ರೂಪಾಯಿಯನ್ನು ಹಿಂತಿರುಗಿಸುವಂತೆ ಮೆಸೆಜ್ ಮಾಡಿದವರು ತಿಳಿಸಿದ್ದರು. ಗೂಪಲ್ ಪೇಯಲ್ಲಿ 10,000 ಬಂದಿರುವುದನ್ನು ಕಂಡ ಮಾಧವಿ ರೈಯವರು ಖಾತೆ ಚೆಕ್ ಮಾಡದೆ ಇನ್ನೊಬ್ಬರ ಹಣ ನಮಗ್ಯಾಕೆ ಎಂದು ಪ್ರಾಮಾಣಿಕವಾಗಿ ಬುಕ್ಕಿಂಗ್ ಮೊತ್ತಕ್ಕಿಂತ ಹೆಚ್ಚುವರಿಯಾಗಿರುವ 9000 ರೂಪಾಯಿಯನ್ನು ಅವರು ಕಳುಹಿಸಿದ್ದ ಸ್ಕ್ಯಾನರ್ ಮೂಲಕ ಖಾತೆಗೆ ಜಮೆ ಮಾಡಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ ನಂತರ ನಾನು ತಪ್ಪಿ 18,500 ರೂಪಾಯಿ ಕಳುಹಿಸಿದ್ದೇನೆ. ಅದನ್ನು ಹಿಂತಿರುಗಿಸುವಂತೆ ಸಂದೇಶ ಕಳುಹಿಸಿದ್ದಾರೆ. ಇದರಿಂದ ಅನುಮಾನಗೊಂಡ ಮಾಧವಿ ರೈಯವರು ಹಣ ಪಾವತಿಸಲಿಲ್ಲ. ಹಣ ಪಾವತಿಸುವಂತೆ ಹಲವು ಸಂದೇಶಗಳನ್ನು ಕಳುಹಿಸಿದ್ದಾರೆ. ಖಾತೆ ಚೆಕ್ ಮಾಡುವಾಗ ಯಾವುದೇ ಮೊತ್ತಗಳು ಇವರ ಖಾತೆಗೆ ಜಮೆಯಾಗಿಲ್ಲ. ತಾನು ಪಾವತಿಸಿದ 9000 ರೂಪಾಯಿಯನ್ನು ಹಿಂತಿರುಗಿಸುವಂತೆ ತಿಳಿಸಿದ್ದಾರೆ. ಬಳಿಕ ಆಚೆ ಕಡೆಯವರು ನಂಬರ್ ಬ್ಲಾಕ್ ಮಾಡಿರುವುದಲ್ಲದೆ ಆ ಕಡೆಯಿಂದ ಕಳುಹಿಸಿದ್ದ ಸ್ಕ್ಯಾನರ್‌ನ್ನು ಡಿಲಿಟ್ ಮಾಡಿದ್ದಾರೆ. ಘಟನೆಯ ಕುರಿತು ಸೈಬರ್ ಕ್ರೈಂಗೆ ದೂರು ನೀಡಲಾಗಿದೆ. ನಮಗೆ ವಾಟ್ಸಪ್, ಇನ್‌ಸ್ಟಾ ಗ್ರಾಂ ಮೂಲಕವೇ ಬುಕ್ಕಿಂಗ್‌ಗಳು ಬರುತ್ತಿದ್ದು ಯಾರೂ ಈ ರೀತಿಯಾಗಿ ವಂಚನೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಮಾಧವಿ ರೈಯವರು ತಿಳಿಸಿದ್ದಾರೆ.