ಸೇವಾ ನ್ಯೂನತೆ ಹಿನ್ನಲೆ – ಗ್ರಾಹಕ ನ್ಯಾಯಾಲಯದಿಂದ ಪುತ್ತೂರು ಗ್ರಾಮಾಂತರ ಮೆಸ್ಕಾಂಗೆ ದಂಡನೆ ಆದೇಶ

0

ಪುತ್ತೂರು: ವಿದ್ಯುತ್ ಸಂಪರ್ಕ ನಿಲುಗಡೆಗೊಳಿಸುವಂತೆ ಕೋರಿ ಪುತ್ತೂರು ಮೆಸ್ಕಾಂ ಗ್ರಾಮಾಂತರ ವಿಭಾಗಕ್ಕೆ ನೀಡಿದ ನಿಲುಗಡೆ ಅರ್ಜಿಯನ್ನು ಕಡೆಗಣಿಸಿ, ಸೇವಾ ನ್ಯೂನತೆ ಎಸಗಿದ ಮೆಸ್ಕಾಂಗೆ ರಾಜ್ಯ ಗ್ರಾಹಕ ಆಯೋಗ ಬೆಂಗಳೂರು ರೂ. 51,974 ದಂಡ ಮತ್ತು ಪರಿಹಾರ ರೂಪದಲ್ಲಿ ಪಾವತಿಸುವಂತೆ ಆದೇಶಿಸಿದೆ.

ಕೊಳ್ತಿಗೆ ಗ್ರಾಮದ ಬಾಯಾಂಬಾಡಿ ಲೋಕನಾಥ ಗೌಡ ಎಂಬವರು ತನಗೆ ಸೇರಿದ ವಿದ್ಯುತ್ ಮೀಟರ್ ಅನ್ನು ನಿಲುಗಡೆಗೊಳಿಸುವಂತೆ ಕೋರಿ 2007ರಲ್ಲಿ ಹಲವಾರು ಬಾರಿ ಮೆಸ್ಕಾಂ ಗ್ರಾಮಾಂತರ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ಅದೇ ವಿದ್ಯುತ್ ಮೀಟರ್‌ನ್ನು ರಾಮಕೃಷ್ಣ ಗೌಡ ಎಂಬವರು ಅಕ್ರಮವಾಗಿ ಉಪಯೋಗಿಸುತ್ತಿರುವ ಕುರಿತು ದೂರನ್ನು ನೀಡಿದ್ದರು. ಹೀಗೆ ಹಲವಾರು ಬಾರಿ ದೂರನ್ನು ನೀಡಿದ್ದರೂ ಸಹ ಪುತ್ತೂರಿನ ಗ್ರಾಮಾಂತರ ಮೆಸ್ಕಾಂ ವಿಭಾಗವು ಯಾವುದೇ ಕ್ರಮಕೈಗೊಳ್ಳದೆ ಸುಮ್ಮನಿದ್ದು, ಬಳಿಕ ಏಕಾಏಕಿ ದಾಳಿ ನಡೆಸಿದ ಮೆಸ್ಕಾಂ ಅಧಿಕಾರಿಗಳು ಲೋಕನಾಥ ಗೌಡ ಅವರ ಮೇಲೆಯೇ ರೂ. 37,532 ದಂಡ ವಿಧಿಸಿದ್ದರು. ಈ ಪೈಕಿ ದಂಡದ ಬಾಬ್ತು ರೂ. 18,499 ಅನ್ನು ಲೋಕನಾಥ ಗೌಡರು ಮೆಸ್ಕಾಂಗೆ ಪಾವತಿಸಿದ್ದರು. ಇದರೊಂದಿಗೆ ಮೆಸ್ಕಾಂ ಪುತ್ತೂರು ಗ್ರಾಮಾಂತರ ವಿಭಾಗದ ಈ ಕ್ರಮವನ್ನು ಪ್ರಶ್ನಿಸಿ ಲೋಕನಾಥ ಗೌಡರು ಮಂಗಳೂರಿನ ದ.ಕ.ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲಿಸಿದ್ದರು. ದೂರು ಅರ್ಜಿಯನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ದೂರುದಾರ ಈ ಹಿಂದೆ ಪಾವತಿಸಿದ್ದ ದಂಡದ ಬಾಬ್ತು ರೂ. 18,499 ಅನ್ನು ಹಿಂದಿರುಗಿಸಬೇಕೆಂದು ಮತ್ತು ಸೇವಾ ನ್ಯೂನತೆ ಎಸಗಿದ ಬಗ್ಗೆ ಪರಿಹಾರವಾಗಿ ರೂ. 10ಸಾವಿರ ರೂಪಾಯಿಯನ್ನು ಮತ್ತು ದೂರಿನ ಖರ್ಚಿನ ಬಗ್ಗೆ ರೂ. 10ಸಾವಿರ ದಂಡನೆಯನ್ನು ಪಾವತಿಸಬೇಕೆಂದು ಮೆಸ್ಕಾಂ ಪುತ್ತೂರು ಗ್ರಾಮಾಂತರ ವಿಭಾಗಕ್ಕೆ ನಿರ್ದೇಶಿಸಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿದ ಮೆಸ್ಕಾಂ ಪುತ್ತೂರು ಗ್ರಾಮಾಂತರ ವಿಭಾಗ ಬೆಂಗಳೂರಿನ ರಾಜ್ಯ ಗ್ರಾಹಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ರಾಜ್ಯ ಗ್ರಾಹಕ ಆಯೋಗವು ಮೆಸ್ಕಾಂ ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಗ್ರಾಹಕ ಆಯೋಗದ ಆದೇಶವನ್ನು ಎತ್ತಿ ಹಿಡಿದಿರುತ್ತದೆ. ಸದ್ರಿ ರಾಜ್ಯ ಗ್ರಾಹಕ ಆಯೋಗದ ಆದೇಶದ ಅನುಸಾರ ಮೆಸ್ಕಾಂ ಪುತ್ತೂರು ಗ್ರಾಮಾಂತರ ವಿಭಾಗ ದಂಡದ ಮೊತ್ತವಾಗಿ ಒಟ್ಟು ರೂ. 51,974 ಅನ್ನು ದೂರುದಾರರಿಗೆ ಪಾವತಿಸಿದೆ. ದೂರುದಾರರ ಪರವಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪುತ್ತೂರಿನ ನ್ಯಾಯಾವಾದಿ ಗಿರೀಶ್ ಮಳಿ, ಕುಮಾರ್ ಎ.ಪಿ, ನಿಶಾಂತ್ ಸುವರ್ಣ ವಾದಿಸಿದ್ದರು.

LEAVE A REPLY

Please enter your comment!
Please enter your name here