*ತತ್ವ ಸಿದ್ದಾಂತದೊಂದಿಗೆ ಬದುಕುವವರನ್ನು ತಿಳಿಯುವವರು ಸಮಾಜದಲ್ಲಿ ಕಡಿಮೆ-ಮೋಹನದಾಸ ಸ್ವಾಮೀಜಿ
* ಕಷ್ಟದ ಜೀವನದಲ್ಲಿ ಸಾಧನೆ ಮಾಡಿ ಪ್ಯಾಲೇಸ್ ನಿರ್ಮಿಸಿದ್ದಾರೆ – ರಮಾನಾಥ ರೈ
* ಈ ಪರಿಸರದ ಜನರಿಗೆ ಪ್ಯಾಲೇಸ್‌ನ ಪ್ರಯೋಜನ ಸಿಗಲಿ -ಅಶೋಕ್ ರೈ
ಪುತ್ತೂರು: ನಮ್ಮ ಬದುಕು, ಅಸ್ತಿತ್ವ ಹಾಗೂ ಮುಂದಿನ ಪೀಳಿಗೆಯನ್ನು ಹೇಗೆ ಉಳಿಸಬೇಕು ಎಂಬ ಪ್ರಶ್ನೆಯಲ್ಲಿ ನಾವು ಇದ್ದೇವೆ. ಮುಂದಿನ ದಿನಗಳು ಕಠಿಣವಾದ ಸನ್ನಿವೇಶದಲ್ಲಿ ಇರುವಾಗ ಅದಕ್ಕೆ ಹೇಗೆ ಪೂರಕವಾಗಿ ಬದುಕುಬೇಕು ಎಂಬ ಸಂದಿಗ್ಧತೆ ನಮ್ಮನ್ನು ಕಾಡುತ್ತಿದೆ ಎಂದು ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಕೆದಿಲ ಗ್ರಾಮದ ಗಡಿಯಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ದಿವ್ಯಜ್ಯೋತಿ ಪ್ಯಾಲೇಸ್ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ವಿಜ್ಞಾನ ಎಷ್ಟು ಮುಂದುವರಿದಿದೆಯೋ ಅಷ್ಟು ಅಜ್ಞಾನ, ದುರಿತ, ವೈಪರೀತ್ಯಗಳು ಇಂದು ನಡೆಯುತ್ತಿದೆ. ನಮಗೆ ಎಲ್ಲಾ ತಿಳಿದಿದೆ, ನಮ್ಮಿಂದಲೇ ಎಲ್ಲ ಎಂಬ ಭ್ರಮೆಯಲ್ಲಿ ನಾವಿದ್ದೇವೆ ಎಂದರು. ತತ್ವ ಸಿದ್ದಾಂತದೊಂದಿಗೆ ಬದುಕುವವರನ್ನು ತಿಳಿಯುವವರು ಸಮಾಜದಲ್ಲಿ ಕಡಿಮೆಯಾಗಿದ್ದಾರೆ. ಈ ಕಟ್ಟಡದ ಉಪಯೋಗದೊಂದಿಗೆ ನಾರಾಯಣ ಕುಲಾಲ್‌ರವರ ಬದುಕು ಕೂಡ ನಮಗೆ ಆದರ್ಶ. ಕುಲಾಲ್ ಸಮುದಾಯದೊಳಗೆ ದೊಡ್ಡ ಸಂಸ್ಥೆ ಕಟ್ಟುವಷ್ಟರ ಮಟ್ಟಿಗೆ ಕುಲಾಲ್‌ರವರು ಎತ್ತರೇಕ್ಕೇರಿದ್ದಾರೆ. ಈ ಪ್ಯಾಲೇಸ್‌ನಲ್ಲಿರುವ ಎಲ್ಲಾ ಉದ್ಯಮಗಳು ಯಶಸ್ವಿಯಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಸಭಾಕಾರ್ಯಕ್ರಮ ಉದ್ಘಾಟನೆ ಮಾಡಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ರಾಷ್ಟ್ರೀಯ ಹೆದ್ದಾರಿಗೆ ಸಮೀಪದ ಸ್ಥಳದಲ್ಲಿ ನಾರಾಯಣ ಕುಲಾಲ್ ಮತ್ತು ಶಕುಂತಳಾ ಕುಲಾಲ್ ದಂಪತಿಯವರು ಕಷ್ಟದ ಜೀವನದಲ್ಲಿ ಸಾಧನೆ ಮಾಡಿ ಪ್ಯಾಲೇಸ್ ನಿರ್ಮಿಸಿದ್ದಾರೆ. ಶಕುಂತಳಾ ಕುಲಾಲ್‌ರವರು ತಾಲೂಕು ಪಂಚಾಯತ್ ಸದಸ್ಯೆಯಾಗಿ ಉತ್ತಮ ಕೆಲಸ ನಿರ್ವಹಿಸಿದವರು. ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲ ಅವರಿಗೆ ಬೇಕು. ಈ ಕಟ್ಟಡದಲ್ಲಿ ವ್ಯವಹಾರ ಮಾಡುವವರಿಗೂ ದೇವರ ಆಶೀರ್ವಾದ ಇರಲಿ ಎಂದು ಹೇಳಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಒಳ್ಳೆಯ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗಿದ್ದೇವೆ. ಆರ್ಥಿಕವಾಗಿ ಉದ್ಯಮದಲ್ಲಿ ಮುಂದೆ ಬರಬೇಕಾದರೆ ಇಂತಹ ಕಟ್ಟಡಗಳು ತಲೆ ಎತ್ತಬೇಕು. ಪುರಂದರ ರೈರವರ ತಂಡ ಶ್ರಮಜೀವಿ ತಂಡವಾಗಿದೆ. ಈ ಕಟ್ಟಡದಿಂದ ಸುಮಾರು ಮಂದಿಗೆ ಉದ್ಯೋಗವೂ ಸಿಗುತ್ತದೆ ಇದರಿಂದ ಅವರ ಅಭಿವೃದ್ಧಿಯೂ ಆಗುತ್ತದೆ. ಈ ಪರಿಸರದ ಜನರಿಗೆ ಪ್ಯಾಲೇಸ್‌ನ ಪ್ರಯೋಜನ ಸಿಗಲಿ ಎಂದು ಶುಭಹಾರೈಸಿದರು.
ಕೆದಿಲ ದೈವಸ್ಥಾನದ ಆಡಳಿತ ಮೊಕ್ತೇಸರ ಜೆ.ಕೃಷ್ಣ ಭಟ್ ಮೀರಾವನ ಮಾತನಾಡಿ ನಾರಾಯಣ ಕುಲಾಲ್‌ರವರು ಗ್ರಾಮೀಣ ಭಾಗಕ್ಕೆ ಉತ್ತಮವಾದ ಕೊಡುಗೆ ನೀಡಿದ್ದಾರೆ. ಅವರಿಗೆ ಸರಿಯಾದ ಫಲ ದೇವರು ನೀಡಿ ಅನುಗ್ರಹಿಸಲಿ ಎಂದು ಶುಭಹಾರೈಸಿದರು. ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಮನುಷ್ಯನಲ್ಲಿ ಇಚ್ಚಾಶಕ್ತಿ ಇದ್ದಲ್ಲಿ ಯಾವುದೇ ಕಾರ್ಯ ಮಾಡಲು ಸಾಧ್ಯ ಎಂಬುದನ್ನು ನಾರಾಯಣ ಕುಲಾಲ್ ತೋರಿಸಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ತನ್ನತನದೊಂದಿಗೆ ಸಮಾಜದಲ್ಲಿ ಏನನ್ನಾದರೂ ಸಾಧನೆ ಮಾಡಿ ತೋರಿಸಿಕೊಡಬೇಕು ಎಂದು ಕಾಯಕದ ಜೊತೆಗೆ ಸಾರ್ಥಕ್ಯ ಪಡೆದಿದ್ದಾರೆ. ಇಂದು ಸುಂದರವಾದ ಕಟ್ಟಡ ನಿರ್ಮಾಣ ಮಾಡಿದ್ದಾರೆ ಇದು ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಶುಭಹಾರೈಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ ಇವರಿಗೆ ದೇವರ ಸಂಪೂರ್ಣ ಆಶೀರ್ವಾದ ಇರಲಿ. ಪ್ರಾಮಾಣಿಕ ಹಾಗೂ ಶ್ರಮ ಜೀವಿಯಾದ ನಾರಾಯಣ ಕುಲಾಲ್‌ರವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ವಿ. ವಾಲ್ತಾಜೆ ಮಾತನಾಡಿ ಇಂದು ಉನ್ನತ ಸ್ಥಾನಕ್ಕೇರಿ ನಮಗೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಆರೋಗ್ಯ ಪೂರ್ಣವಾಗಿ ಈ ಸಂಸ್ಥೆ ಬೆಳಗಲಿ ಎಂದು ಶುಭಹಾರೈಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್, ದೈವದ ಮೂಲ್ಯಣ್ಣೆ ಬಾಲಕೃಷ್ಣ ಸಾಲ್ಯಾನ್ ಕುತ್ತಾರ್ ಕಂಪ, ನೂತನ ಇಂಡಸ್ಟ್ರೀಸ್ ಮಾಲಕ ಗಂಗಾಧರ ಶೇರ, ಅಜಯ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಾಲಪ್ಪ ಗೌಡ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಕಾವು ಅನಿತಾ ಹೇಮನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಸಂಜೀವ ಮಠಂದೂರು, ಮಾಣಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ, ಜೆ. ಚಂದ್ರಶೇಖರ ಭಟ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ದಿವ್ಯಜ್ಯೋತಿ ಪ್ಯಾಲೇಸ್ ಮಾಲಕ ನಾರಾಯಣ ಕುಲಾಲ್ ಮತ್ತು ಶಕುಂತಳಾ ದಂಪತಿ ಮತ್ತು ಮಕ್ಕಳು ಸ್ವಾಮೀಜಿಯವರಿಗೆ -ಲಪುಷ್ಪ ನೀಡಿ ಗೌರವಿಸಿದರು. ದಿವ್ಯಜ್ಯೋತಿ ಪ್ಯಾಲೇಸ್ ಮಾಲಕರ ಪುತ್ರಿ ಜ್ಯೋತಿ, ತಾಯಿ ಯಮುನಾ ಕುಲಾಲ್ ಉಪಸ್ಥಿತರಿದ್ದರು. ಮಾಲಕರ ಪುತ್ರಿ ವಿದ್ಯಾ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಸಮಯ್ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋ ಬಾರ್ ಶೀಘ್ರದಲ್ಲೇ ಶುಭಾರಂಭ
ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೊಂಡ ದಿವ್ಯಜ್ಯೋತಿ ಪ್ಯಾಲೇಸ್‌ನಲ್ಲಿ ಸಮಯ್ ಪ್ಯಾಲೇಸ್ ಫ್ಯಾಮಿಲಿ ರೆಸ್ಟೋ ಬಾರ್ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ ಎಂದು ಪಾಲುದಾರರಾದ ಸಾಯಿ ಪೂಜಾ ಗ್ರೂಪ್ಸ್‌ನ ಪುರಂದರ ರೈ ಮತ್ತು ಸುಪ್ರಿಯಾ ದಂಪತಿ, ರಾಧಾಕೃಷ್ಣ ಪೂಜಾರಿ ಮತ್ತು ಸುಜಯ ದಂಪತಿ, ಯತೀಶ್ ಸುವರ್ಣ ಮತ್ತು ಮಾಲತಿ ದಂಪತಿ, ಪ್ರಭಾಕರ ಸುವರ್ಣ ಮತ್ತು ಸುಷ್ಮಾ ದಂಪತಿ ತಿಳಿಸಿದ್ದಾರೆ.